Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 34 - ಪರಿಶುದ್ದ ಬೈಬಲ್‌


ಮೋಶೆಯ ಮರಣ

1 ಮೋಶೆಯು ನೆಬೋ ಬೆಟ್ಟವನ್ನು ಹತ್ತಿದನು. ಅವನು ಮೋವಾಬಿನ ಜೋರ್ಡನ್ ಕಣಿವೆಯಿಂದ ಪಿಸ್ಗಾ ಬೆಟ್ಟದ ಮೇಲಕ್ಕೆ ಬಂದನು. ಇದು ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ಜೆರಿಕೊ ಊರಿನ ಎದುರಿನಲ್ಲಿದೆ. ಯೆಹೋವನು ಮೋಶೆಗೆ ಗಿಲ್ಯಾದಿನಿಂದ ದಾನ್‌ವರೆಗಿದ್ದ ಎಲ್ಲಾ ಪ್ರದೇಶವನ್ನು ತೋರಿಸಿದನು.

2 ಮೋಶೆಗೆ ಯೆಹೋವನು ನಫ್ತಾಲಿ, ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳನ್ನು ತೋರಿಸಿದನು. ಯೆಹೂದ ಪ್ರಾಂತ್ಯವನ್ನು ಮೆಡಿಟರೇನಿಯನ್ ಸಮುದ್ರದವರೆಗೂ ತೋರಿಸಿದನು.

3 ಯೆಹೋವನು ಮೋಶೆಗೆ ನೆಗೆವ್ ಮತ್ತು ಚೋಗರೂರಿನಿಂದ ಖರ್ಜೂರದ ಮರಗಳ ಪಟ್ಟಣವಾದ ಜೆರಿಕೊ ಪಟ್ಟಣದವರೆಗಿರುವ ಕಣಿವೆಯನ್ನು ತೋರಿಸಿದನು.

4 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಈ ದೇಶವನ್ನು ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ವಾಗ್ದಾನ ಮಾಡಿದ್ದೇನೆ. ನಿಮ್ಮ ಸಂತತಿಯವರಿಗೆ ನಾನು ಈ ದೇಶವನ್ನು ಕೊಡುವೆನು ಎಂದು ಹೇಳಿದ್ದೆನು. ಆ ದೇಶವನ್ನು ನೀನು ನೋಡುವಂತೆ ಮಾಡಿದೆನು. ಆದರೆ ನೀನು ಅದರೊಳಗೆ ಪ್ರವೇಶಿಸುವುದಿಲ್ಲ.”

5 ಮೋವಾಬ್ ದೇಶದಲ್ಲಿ ಯೆಹೋವನ ಸೇವಕನಾದ ಮೋಶೆಯು ಸತ್ತುಹೋದನು. ಯೆಹೋವನು ಅವನಿಗೆ ಹಾಗೆ ಆಗುತ್ತದೆಂದು ಮುಂಚೆಯೇ ತಿಳಿಸಿದ್ದನು.

6 ಯೆಹೋವನು ಮೋಶೆಯನ್ನು ಮೋವಾಬ್‌ನಲ್ಲಿ ಹೂಳಿಟ್ಟನು. ಇದು ಬೇತ್ಪೆಗೋರ್ ತಗ್ಗಿಗೆ ಎದುರಾಗಿದೆ. ಆದರೆ ಮೋಶೆಯನ್ನು ಸಮಾಧಿಮಾಡಿದ ಸ್ಥಳವು ಇದುವರೆಗೆ ಯಾರಿಗೂ ಗೊತ್ತಾಗಲಿಲ್ಲ.

7 ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನು ಸಾಯುವ ತನಕ ಬಲಶಾಲಿಯಾಗಿಯೇ ಇದ್ದನು. ಅವನ ಕಣ್ಣು ಮೊಬ್ಬಾಗಿರಲಿಲ್ಲ.

8 ಇಸ್ರೇಲರು ಮೋಶೆಗಾಗಿ ಮೂವತ್ತು ದಿವಸಗಳ ತನಕ ಗೋಳಾಡಿದರು. ಶೋಕದ ದಿವಸಗಳು ಕಳೆಯುವ ತನಕ ಅವರು ಮೋವಾಬಿನಲ್ಲಿದ್ದ ಜೋರ್ಡನ್ ಕಣಿವೆಯಲ್ಲಿ ತಂಗಿದ್ದರು.


ಯೆಹೋಶುವನು ಇಸ್ರೇಲರ ಹೊಸ ನಾಯಕ

9 ಮೋಶೆಯು ಯೆಹೋಶುವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ನಾಯಕನನ್ನಾಗಿ ನೇಮಿಸಿದನು. ಆಗ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮನಿಂದ ತುಂಬಲ್ಪಟ್ಟವನಾದನು. ಇಸ್ರೇಲಿನ ಜನರು ಯೆಹೋಶುವನಿಗೆ ವಿಧೇಯರಾದರು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರೇಲರು ಮಾಡಿದರು.

10 ಮೋಶೆಯಂತ ಪ್ರವಾದಿಯು ಇಸ್ರೇಲರಿಗೆ ದೊರೆಯಲೇ ಇಲ್ಲ. ಯೆಹೋವನು ಅವನೊಂದಿಗೆ ಮುಖಾಮುಖಿಯಾಗಿ ಮಾತನಾಡಿದನು.

11 ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡುವುದಕ್ಕಾಗಿ ಯೆಹೋವನು ಮೋಶೆಯನ್ನು ಕಳುಹಿಸಿದನು. ಅದನ್ನು ಫರೋಹನೂ ಅವನ ಪರಿವಾರದವರೂ ಅಧಿಕಾರಿಗಳೆಲ್ಲರೂ ನೋಡಿದರು.

12 ಯಾವ ಪ್ರವಾದಿಯೂ ಮೋಶೆ ಮಾಡಿದ ಸೂಚಕಕಾರ್ಯಗಳನ್ನು ಮಾಡಲಿಲ್ಲ. ಇಸ್ರೇಲಿನ ಎಲ್ಲಾ ಜನರು ಮೋಶೆ ಮಾಡಿದ್ದನ್ನು ನೋಡಿದ್ದರು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು