Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 27 - ಪರಿಶುದ್ದ ಬೈಬಲ್‌

1 ಭವಿಷ್ಯತ್ತಿನ ಕುರಿತು ಜಂಬಪಡಬೇಡ. ನಾಳೆ ಏನಾಗುವುದೋ ನಿನಗೆ ತಿಳಿಯದು.

2 ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ; ಬೇಕಿದ್ದರೆ ಬೇರೆಯವರೇ ನಿನ್ನನ್ನು ಹೊಗಳಲಿ.

3 ಕಲ್ಲು ಭಾರ, ಮರಳು ಭಾರ, ಮೂಢನಿಂದಾಗುವ ಕೇಡು ಇವೆರಡಕ್ಕಿಂತಲೂ ಬಹು ಭಾರ.

4 ಕೋಪವು ಕ್ರೂರ; ಅದು ಪ್ರವಾಹದಂತೆ ನಾಶಕರ. ಹೊಟ್ಟೆಕಿಚ್ಚು ಅದಕ್ಕಿಂತಲೂ ನಾಶಕರ.

5 ಬಹಿರಂಗವಾದ ಟೀಕೆ ಗುಟ್ಟಾದ ಪ್ರೀತಿಗಿಂತಲೂ ಉತ್ತಮ.

6 ಸ್ನೇಹಿತನಿಂದಾಗುವ ಗಾಯಗಳು ಸಹಾಯಕರ. ಶತ್ರುವಿನ ಮುತ್ತುಗಳಾದರೋ ಮೋಸಕರ.

7 ಹೊಟ್ಟೆ ತುಂಬಿದವನು ಜೇನುತುಪ್ಪವನ್ನೂ ತಿರಸ್ಕರಿಸುವನು; ಹಸಿವೆಗೊಂಡಿರುವವನಿಗೋ ಕಹಿಯೂ ಸಿಹಿ.

8 ಮನೆಯಿಂದ ದೂರವಿರುವ ಗಂಡಸು ಗೂಡಿನಿಂದ ದೂರವಿರುವ ಪಕ್ಷಿಯಂತಿರುವನು.

9 ಪರಿಮಳತೈಲ ಮತ್ತು ಧೂಪ ನಿನ್ನನ್ನು ಸಂತೋಷಗೊಳಿಸುತ್ತವೆ; ಆದರೆ ಸ್ನೇಹಿತನ ಮಧುರವಾದ ಉಪದೇಶದಿಂದ ಸ್ವಂತ ನಿರ್ಧಾರಕ್ಕಿಂತಲೂ ಹೆಚ್ಚು ಆನಂದವಾಗುವುದು.

10 ನಿನ್ನ ಸ್ನೇಹಿತರನ್ನೂ ನಿನ್ನ ತಂದೆಯ ಸ್ನೇಹಿತರನ್ನೂ ಮರೆಯಬೇಡ. ಕಷ್ಟಬಂದಾಗ ಸಹಾಯ ಕೇಳಲು ಬಹುದೂರವಿರುವ ನಿನ್ನ ಸಹೋದರನ ಮನೆಗೆ ಹೋಗುವುದಕ್ಕಿಂತ ನಿನ್ನ ಸಮೀಪದಲ್ಲಿರುವ ನೆರೆಯವನನ್ನು ಕೇಳುವುದೇ ಉತ್ತಮ.

11 ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ ನನಗೆ ಸಂತೋಷ ಆಗ, ನನ್ನನ್ನು ಟೀಕಿಸುವವನಿಗೆ ಉತ್ತರ ಕೊಡಲು ನಾನು ಶಕ್ತನಾಗುವೆ.

12 ಜ್ಞಾನಿಯು ಕೇಡನ್ನು ಕಂಡು ಆ ದಾರಿಯನ್ನೇ ಬಿಟ್ಟುಹೋಗುವನು. ಮೂಢನಾದರೋ ಕೇಡಿಗೆ ನೇರವಾಗಿ ನಡೆದು ಕಷ್ಟಕ್ಕೆ ಗುರಿಯಾಗುವನು.

13 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನೂ ಕಳೆದುಕೊಳ್ಳುವೆ.

14 ಹೊತ್ತಾರೆಯಲ್ಲಿ ನಿನ್ನ ನೆರೆಯವನಿಗೆ, “ನಮಸ್ಕಾರ!” ಎಂದು ಕೂಗಿ ಎಬ್ಬಿಸಬೇಡ. ಅವನಿಗೆ ಅದು ಆಶೀರ್ವಾದದಂತೆ ಕಾಣದೆ ಶಾಪದಂತೆಯೇ ಕಾಣುವುದು.

15 ವಾದವನ್ನೇ ಇಚ್ಛಿಸುವ ಹೆಂಡತಿ ಮಳೆ ದಿನದಲ್ಲಿ ಸೋರುತ್ತಲೇ ಇರುವ ಮೇಲ್ಛಾವಣಿಯಂತಿರುವಳು.

16 ಆಕೆಯ ಬಾಯನ್ನು ಮುಚ್ಚಿಸಲು ಮಾಡುವ ಪ್ರಯತ್ನ ಗಾಳಿಯನ್ನು ನಿಲ್ಲಿಸಲು ಪ್ರಯತ್ನಿಸಿದಂತೆಯೂ ಅಂಗೈಯಲಿ ಎಣ್ಣೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಂತೆಯೂ ಇದೆ.

17 ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವುದು; ಅಂತೆಯೇ ಸ್ನೇಹಿತನು ಸ್ನೇಹಿತನನ್ನು ಉತ್ತಮಪಡಿಸುವನು.

18 ಅಂಜೂರದ ಮರಗಳನ್ನು ನೋಡಿಕೊಳ್ಳುವವನು ಅವುಗಳ ಹಣ್ಣನ್ನು ತಿನ್ನುವನು; ಯಜಮಾನನನ್ನು ನೋಡಿಕೊಳ್ಳುವವನು ಪ್ರತಿಫಲವನ್ನು ಹೊಂದುವನು.

19 ನೀರನ್ನು ನೋಡುವವನಿಗೆ ಅವನ ಮುಖವು ಕಾಣುವುದು. ಅಂತೆಯೇ ಹೃದಯವು ವ್ಯಕ್ತಿಯ ನಿಜರೂಪವನ್ನು ತೋರುವುದು.

20 ಮರಣಕ್ಕಾಗಲಿ ಸಮಾಧಿಗಾಗಲಿ ತೃಪ್ತಿಯೇ ಇಲ್ಲ. ಅಂತೆಯೇ ಮನುಷ್ಯನ ಬಯಕೆಗಳಿಗೂ ಕೊನೆಯಿಲ್ಲ.

21 ಚಿನ್ನವಾಗಲಿ ಬೆಳ್ಳಿಯಾಗಲಿ ಬೆಂಕಿಯಿಂದ ಶುದ್ಧೀಕರಿಸಲ್ಪಡುವಂತೆಯೇ ಮನುಷ್ಯನು ಜನರಿಂದ ಬರುವ ಹೊಗಳಿಕೆಯಿಂದ ಪರೀಕ್ಷಿತನಾಗುವನು.

22 ನೀನು ಮೂಢನನ್ನು ಅರೆದು ಪುಡಿಪುಡಿ ಮಾಡಿದರೂ ಅವನ ಮೂಢತನವನ್ನು ತೊಲಗಿಸಲಾರೆ.

23 ನಿನ್ನ ಕುರಿಗಳನ್ನೂ ಪಶುಗಳನ್ನೂ ಎಚ್ಚರಿಕೆಯಿಂದ ಕಾಯ್ದುಕೊಂಡಿರು; ನಿನ್ನಿಂದಾದಷ್ಟು ಮಟ್ಟಿಗೆ ಅವುಗಳ ಮೇಲೆ ಗಮನವಿಟ್ಟು ನೋಡಿಕೊ.

24 ಐಶ್ವರ್ಯ ಸದಾಕಾಲ ಇರುವಂಥದ್ದಲ್ಲ. ಅಂತೆಯೇ ಸಾಮ್ರಾಜ್ಯಗಳು ಶಾಶ್ವತವಾಗಿರುವುದಿಲ್ಲ.

25 ಹುಲ್ಲನ್ನು ಕತ್ತರಿಸಿದ ಮೇಲೆ ಹೊಸಹುಲ್ಲು ಬೆಳೆಯಲಾರಂಭಿಸುವುದು; ಒಣಹುಲ್ಲನ್ನು ಬೆಟ್ಟಗಳ ಮೇಲೆ ಸಂಗ್ರಹಿಸಲಾಗುವುದು.

26 ಬಳಿಕ ನಿನ್ನ ಕುರಿಗಳ ಉಣ್ಣೆಯಿಂದ ಬಟ್ಟೆಗಳನ್ನು ತಯಾರಿಸಬಹುದು. ನಿನ್ನ ಆಡುಗಳನ್ನು ಮಾರಿ ಬಂದ ಹಣದಿಂದ ಜಮೀನನ್ನು ಕೊಂಡುಕೊಳ್ಳಬಹುದು.

27 ನಿನ್ನ ಇನ್ನಿತರ ಆಡುಗಳು ನಿನಗೆ ಬೇಕಾದಷ್ಟು ಹಾಲನ್ನು ಕೊಡುತ್ತವೆ. ಅದರಿಂದ ನಿನಗೂ ನಿನ್ನ ಕುಟುಂಬಕ್ಕೂ ನಿನ್ನ ಸೇವಕಿಯರಿಗೂ ಬೇಕಾದಷ್ಟು ಆಹಾರವಿರುವುದು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು