Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 12 - ಪರಿಶುದ್ದ ಬೈಬಲ್‌

1 ಶಿಸ್ತನ್ನು ಇಷ್ಟಪಡುವವನು ಕಲಿಯಲು ಇಷ್ಟಪಡುತ್ತಾನೆ; ತಿದ್ದುಪಡಿಯನ್ನು ದ್ವೇಷಿಸುವವನು ಬುದ್ಧಿಹೀನ.

2 ಯೆಹೋವನು ಒಳ್ಳೆಯವನನ್ನು ಸ್ವೀಕರಿಸಿಕೊಳ್ಳುವನು; ಕುಯುಕ್ತಿಯುಳ್ಳವನನ್ನು ಖಂಡಿಸುವನು.

3 ಕೆಡುಕರಿಗೆ ಎಂದಿಗೂ ಕ್ಷೇಮವಿಲ್ಲ; ಒಳ್ಳೆಯವರಾದರೋ ಸಮಾಧಾನದಿಂದಿರುವರು.

4 ಗುಣವಂತಳಾದ ಹೆಂಡತಿಯು ಗಂಡನಿಗೆ ಕಿರೀಟದಂತಿರುವಳು; ಗಂಡನನ್ನು ನಾಚಿಕೆಗೆ ಗುರಿಮಾಡುವ ಹೆಂಡತಿಯು ಗಂಡನ ಎಲುಬಿಗೆ ಕ್ಷಯದಂತಿರುವಳು.

5 ಶಿಷ್ಟರ ಆಲೋಚನೆ ನ್ಯಾಯವಾಗಿವೆ. ದುಷ್ಟರ ಉಪದೇಶ ಮೋಸಕರ.

6 ಕೆಡುಕರು ತಮ್ಮ ಮಾತುಗಳಿಂದ ಬೇರೆಯವರನ್ನು ನೋಯಿಸುತ್ತಾರೆ. ಒಳ್ಳೆಯವರ ಮಾತುಗಳಾದರೋ ಜನರನ್ನು ಅಪಾಯದಿಂದ ರಕ್ಷಿಸುತ್ತವೆ.

7 ದುರ್ಜನರು ಸರ್ವನಾಶವಾಗುವರು; ಆದರೆ ಸಜ್ಜನರ ಕುಟುಂಬವು ಸ್ಥಿರವಾಗಿರುವುದು.

8 ಜನರು ಜ್ಞಾನಿಗಳನ್ನು ಹೊಗಳುವರು; ಮೂಢನನ್ನು ಕಡೆಗಣಿಸುವರು.

9 ಪ್ರಮುಖನಂತೆ ವರ್ತಿಸುತ್ತಾ ಆಹಾರವಿಲ್ಲದಿರುವುದಕ್ಕಿಂತ ಪ್ರಮುಖನಲ್ಲದವನಾಗಿದ್ದು ಸೇವಕನಂತೆ ಇರುವುದು ಮೇಲು.

10 ಶಿಷ್ಟನು ತನ್ನ ಪಶುಗಳನ್ನು ನೋಡಿಕೊಳ್ಳುತ್ತಾನೆ. ಆದರೆ ದುಷ್ಟನ ವಾತ್ಸಲ್ಯವು ಕ್ರೂರವಾಗಿದೆ.

11 ತನ್ನ ಜಮೀನಿನಲ್ಲಿ ದುಡಿಯುವ ರೈತನಿಗೆ ಸಾಕಷ್ಟು ಆಹಾರವಿರುವುದು. ಆದರೆ ಮೂಢನು ಪ್ರಯೋಜನವಿಲ್ಲದ ಸಂಗತಿಗಳಲ್ಲಿ ತನ್ನ ಸಮಯವನ್ನು ಹಾಳುಮಾಡುವನು.

12 ಕಳವು ಮಾಲುಗಳಲ್ಲಿ ದುಷ್ಟರಿಗೆ ಆಸೆ. ಒಳ್ಳೆಯವರಿಗಾದರೋ ತಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಡಬೇಕೆಂಬ ಆಸೆ.

13 ಕೆಡುಕನು ತನ್ನ ಕೆಟ್ಟಮಾತುಗಳಿಂದಲೇ ಸಿಕ್ಕಿಕೊಳ್ಳುವನು. ಆದರೆ ಒಳ್ಳೆಯವನು ಇಕ್ಕಟ್ಟುಗಳಿಂದ ಪಾರಾಗುವನು.

14 ಮನುಷ್ಯನು ತನ್ನ ಒಳ್ಳೆಯ ಮಾತುಗಳಿಗೆ ಪ್ರತಿಫಲವನ್ನು ಪಡೆಯುವನು. ಅದೇ ರೀತಿಯಲ್ಲಿ, ಅವನ ಕೆಲಸವು ಅವನಿಗೆ ಲಾಭವನ್ನು ಕೊಡುವುದು.

15 ಮೂಢನು ತನ್ನ ದಾರಿಯನ್ನೇ ಒಳ್ಳೆಯದೆಂದು ಭಾವಿಸಿಕೊಂಡಿರುತ್ತಾನೆ. ಜ್ಞಾನಿಯಾದರೋ ಉಪದೇಶಕ್ಕೆ ಕಿವಿಗೊಡುತ್ತಾನೆ.

16 ಮೂಢನು ತನ್ನ ಸಿಟ್ಟನ್ನು ತಟ್ಟನೆ ತೋರಿಸುವನು. ಆದರೆ ಜ್ಞಾನಿಯು ಅವಮಾನವನ್ನು ಕಡೆಗಣಿಸುವನು.

17 ಸತ್ಯಸಾಕ್ಷಿಯು ನ್ಯಾಯವನ್ನು ಪ್ರತಿಪಾದಿಸುವನು. ಆದರೆ ಸುಳ್ಳುಸಾಕ್ಷಿಯು ಅನ್ಯಾಯವನ್ನು ಪ್ರಕಟಿಸುವನು.

18 ದುಡುಕಿದ ಮಾತು ಖಡ್ಗದಂತೆ ನೋವು ಮಾಡುತ್ತದೆ; ಜ್ಞಾನಿಯ ಮಾತು ಗುಣಪಡಿಸುತ್ತದೆ.

19 ಸುಳ್ಳುತುಟಿಗಳು ಕ್ಷಣಿಕ. ಆದರೆ ಸತ್ಯವು ಶಾಶ್ವತ.

20 ಕೆಡುಕರು ಯಾವಾಗಲೂ ಕೇಡು ಮಾಡಲಿಚ್ಛಿಸುವರು. ಸಮಾಧಾನವನ್ನು ಅಪೇಕ್ಷಿಸುವವರು ಸಂತೋಷವಾಗಿರುವರು.

21 ಸಜ್ಜನರು ಯೆಹೋವನಿಂದ ಕ್ಷೇಮವಾಗಿರುವರು. ಆದರೆ ದುರ್ಜನರಿಗೆ ಅನೇಕ ತೊಂದರೆಗಳಿರುತ್ತವೆ.

22 ಸುಳ್ಳುಗಾರರು ಯೆಹೋವನಿಗೆ ಅಸಹ್ಯ. ಆದರೆ ಸತ್ಯವಂತರು ಆತನಿಗೆ ಇಷ್ಟಕರ.

23 ಜಾಣನು ತನ್ನ ಜ್ಞಾನದ ಬಗ್ಗೆ ಜಂಬಕೊಚ್ಚಿಕೊಳ್ಳುವುದಿಲ್ಲ. ಆದರೆ ಮೂಢನು ದುಡುಕಿ ಮಾತಾಡಿ ತಾನು ಮೂಢನೆಂದು ತೋರಿಸಿಕೊಳ್ಳುತ್ತಾನೆ.

24 ಕಷ್ಟಪಟ್ಟು ಕೆಲಸ ಮಾಡುವವನು ಅಧಿಪತಿಯಾಗುವನು. ಸೋಮಾರಿಯನ್ನು ಗುಲಾಮನನ್ನಾಗಿ ಮಾಡಲಾಗುವುದು.

25 ಚಿಂತೆಯು ಮನುಷ್ಯನ ಸಂತೋಷವನ್ನು ತೆಗೆದುಹಾಕುತ್ತದೆ; ಕನಿಕರದ ಮಾತು ಮನುಷ್ಯನನ್ನು ಸಂತೋಷಗೊಳಿಸುತ್ತದೆ.

26 ಸನ್ಮಾರ್ಗಿಯು ತನ್ನ ನೆರೆಯವನಿಗೆ ಒಳ್ಳೆಯ ಮಾರ್ಗವನ್ನು ತೋರಿಸುತ್ತಾನೆ; ದುರ್ಮಾರ್ಗಿಯು ಬೇರೆಯವರನ್ನು ದಾರಿ ತಪ್ಪಿಸುವನು.

27 ಸೋಮಾರಿಯಾದ ಬೇಟೆಗಾರನು ಬೇಟೆಯಾಡುವುದಿಲ್ಲ. ಐಶ್ವರ್ಯವು ಕಷ್ಟಪಟ್ಟು ಕೆಲಸ ಮಾಡುವವನಿಗೆ ಬರುತ್ತದೆ.

28 ನೀತಿಯ ಮಾರ್ಗದಲ್ಲಿ ಜೀವವಿದೆ. ಆದರೆ ಮರಣಕ್ಕೆ ನಡೆಸುವ ಮತ್ತೊಂದು ಮಾರ್ಗವಿದೆ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು