Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 4 - ಪರಿಶುದ್ದ ಬೈಬಲ್‌


ದೀಪಸ್ತಂಭವೂ, ಎರಡು ಆಲೀವ್ ಮರಗಳೂ

1 ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಬಂದು ನನ್ನನ್ನೆಬ್ಬಿಸಿದನು. ನಾನು ನಿದ್ರೆಯಿಂದ ಎದ್ದೇಳುವವನಂತೆ ಇದ್ದೆನು.

2 ಆಗ ದೂತನು, “ಏನು ನೋಡುತ್ತೀ?” ಎಂದು ಪ್ರಶ್ನಿಸಿದನು. ಆಗ ನಾನು “ಬಂಗಾರದ ದೀಪಸ್ತಂಭವನ್ನು ನೋಡುತ್ತಿದ್ದೇನೆ. ಆ ಸ್ತಂಭದಲ್ಲಿ ಏಳು ದೀಪಗಳಿವೆ. ದೀಪಸ್ತಂಭದ ಮೇಲೆ ಒಂದು ಬೋಗುಣಿ ಇದೆ. ಆ ಬೋಗುಣಿಯಿಂದ ಏಳು ನಳಿಗೆಗಳು ಪ್ರತೀ ದೀಪಕ್ಕೆ ಹೋಗುತ್ತವೆ. ಬೋಗುಣಿಯಲ್ಲಿಟ್ಟ ಎಣ್ಣೆಯು ಆ ನಳಿಗೆಯ ಮೂಲಕ ದೀಪಕ್ಕೆ ಸುರಿಯುತ್ತಿತ್ತು.

3 ಆ ಬೋಗುಣಿಯ ಬಳಿಯಲ್ಲಿ ಎರಡು ಆಲೀವ್ ಮರಗಳಿದ್ದವು. ಒಂದು ಬಲಬದಿಯಲ್ಲಿಯೂ ಇನ್ನೊಂದು ಎಡಬದಿಯಲ್ಲಿಯೂ ಇತ್ತು. ಈ ಮರಗಳು ದೀಪಗಳಿಗೆ ಬೇಕಾದ ಎಣ್ಣೆಯನ್ನು ತಯಾರು ಮಾಡುತ್ತಿದ್ದವು.”

4 ಆಗ ನಾನು ನನ್ನ ಜೊತೆ ಮಾತನಾಡುತ್ತಿದ್ದ ದೂತನೊಡನೆ, “ಸ್ವಾಮಿ, ಇವುಗಳ ಅರ್ಥವೇನು?” ಎಂದು ಕೇಳಿದೆನು.

5 ಅವನು ಹೀಗೆ ಹೇಳಿದನು: “ಈ ವಿಷಯಗಳು ಏನೆಂದು ನಿನಗೆ ತಿಳಿಯಲಿಲ್ಲವೇ?” ನಾನು, “ಇಲ್ಲ” ಅಂದೆನು.

6 ಅವನು ಅದಕ್ಕೆ ಉತ್ತರಿಸಿ, “ಇದು ಯೆಹೋವನಿಂದ ಜೆರುಬ್ಬಾಬೆಲನಿಗೆ ಕೊಟ್ಟ ಸಂದೇಶವಾಗಿದೆ. ‘ನಿನ್ನ ಸಹಾಯವು ನಿನ್ನ ಸ್ವಂತ ಶಕ್ತಿಸಾಮರ್ಥ್ಯದಿಂದ ಬರುವದಿಲ್ಲ. ಅದು ನನ್ನ ಆತ್ಮದಿಂದಲೇ ನಿನಗೆ ದೊರಕುವದು.’ ಇದು ಸರ್ವಶಕ್ತನಾದ ಯೆಹೋವನ ನುಡಿ.

7 ಉನ್ನತವಾದ ಶಿಖರವು ಜೆರುಬ್ಬಾಬೆಲನಿಗೆ ಸಮತಟ್ಟಾದ ನೆಲದಂತಿರುವುದು. ಅವನು ಆಲಯವನ್ನು ಕಟ್ಟುವನು. ಅದರ ಅತಿ ವಿಶೇಷವಾದ ಕಲ್ಲನ್ನಿಟ್ಟ ಬಳಿಕ ಜನರೆಲ್ಲರೂ, ‘ಬಹಳ ಚಂದ, ಬಹಳ ಚಂದ’ ಎಂದು ಆರ್ಭಟಿಸುವರು.”

8 ನನಗೆ ಯೆಹೋವನ ಸಂದೇಶವೂ ಸಹ ಹೀಗೆ ಹೇಳಿತು:

9 “ಜೆರುಬ್ಬಾಬೆಲನು ನನ್ನ ಆಲಯದ ಅಸ್ತಿವಾರವನ್ನು ಹಾಕುವನು. ಜೆರುಬ್ಬಾಬೆಲನು ಆಲಯವನ್ನು ಕಟ್ಟಿ ಮುಗಿಸುವನು. ಆಗ ನೀವು ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆಂದು ತಿಳಿಯುವಿರಿ.

10 ಒಂದು ಸಣ್ಣ ರೀತಿಯ ಪ್ರಾರಂಭಕ್ಕೆ ಜನರು ನಾಚುವುದಿಲ್ಲ. ಜೆರುಬ್ಬಾಬೆಲನು ನೂಲುಗುಂಡು ಹಿಡಿದುಕೊಂಡು ಸಂಪೂರ್ಣವಾದ ಆಲಯವನ್ನು ಅಳತೆ ಮಾಡುವಾಗ ಜನರು ಅತಿಯಾಗಿ ಸಂತೋಷಿಸುವರು. ಈಗ ಆ ಕಲ್ಲಿನ ಏಳು ಬದಿಗಳು ಯೆಹೋವನ ಕಣ್ಣುಗಳು ಎಲ್ಲಾ ದಿಕ್ಕುಗಳನ್ನು ನೋಡುತ್ತಿರುವುದನ್ನು ಸೂಚಿಸುತ್ತವೆ. ಅವು ಭೂಲೋಕದಲ್ಲಿರುವ ಎಲ್ಲಾ ಸಂಗತಿಗಳನ್ನು ನೋಡುತ್ತಿವೆ.”

11 ಆಗ ಜೆಕರ್ಯನಾದ ನಾನು ಅವನಿಗೆ ಹೇಳಿದ್ದೇನೆಂದರೆ, “ನಾನು ದೀಪಸ್ತಂಭದ ಬಲಗಡೆಯಲ್ಲಿ ಒಂದು ಆಲೀವ್ ಮರವನ್ನೂ ಎಡಗಡೆಯಲ್ಲಿ ಇನ್ನೊಂದು ಆಲೀವ್ ಮರವನ್ನೂ ನೋಡಿದೆನು. ಇವುಗಳು ಏನನ್ನು ಸೂಚಿಸುತ್ತವೆ?” ಎಂದು ಕೇಳಿದೆನು.

12 ತಿರಿಗಿ ನಾನು ಅವನಿಗೆ, “ನಾನು ಆ ಎರಡು ಬಂಗಾರದ ನಳಿಗೆಯ ಬದಿಯಲ್ಲಿ ಆಲೀವ್ ಮರದ ಎರಡು ಕೊಂಬೆಗಳನ್ನು ನೋಡಿದೆನು. ಅದರಿಂದ ಬಂಗಾರದ ಬಣ್ಣದ ಎಣ್ಣೆಯು ಹರಿಯುತ್ತಿತ್ತು. ಇವುಗಳ ಅರ್ಥವೇನು?” ಎಂದು ಕೇಳಿದೆನು.

13 ಆಗ ದೇವದೂತನು ಹೇಳಿದ್ದೇನೆಂದರೆ, “ಇವು ಏನನ್ನು ಸೂಚಿಸುತ್ತವೆ ಎಂದು ನಿನಗೆ ತಿಳಿಯದೋ?” ಅದಕ್ಕೆ ನಾನು, “ಇಲ್ಲ” ಅಂದೆನು.

14 ಆಗ ಅವನು, “ಈ ಪ್ರಪಂಚದಲ್ಲಿ ಯೆಹೋವನು ತನ್ನ ಸೇವೆಮಾಡಲು ಆರಿಸಿಕೊಂಡ ಇಬ್ಬರು ಮನುಷ್ಯರನ್ನು ಅವು ಪ್ರತಿನಿಧಿಸುತ್ತವೆ” ಅಂದನು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು