ಜೆಕರ್ಯ 3 - ಪರಿಶುದ್ದ ಬೈಬಲ್ಪ್ರಧಾನ ಯಾಜಕನು 1 ದೇವದೂತನು ನನಗೆ ಪ್ರಧಾನ ಯಾಜಕನಾದ ಯೆಹೋಶುವನನ್ನು ತೋರಿಸಿದನು. ಅವನು ಯೆಹೋವನ ದೂತನ ಮುಂದೆ ನಿಂತಿದ್ದನು. ಸೈತಾನನು ಯೆಹೋಶುವನ ಬಲಗಡೆಯಲ್ಲಿ ನಿಂತಿದ್ದನು. ಯೆಹೋಶುವನು ಕೆಟ್ಟಕೃತ್ಯಗಳನ್ನು ಮಾಡಿದ್ದಾನೆಂದು ದೂರು ಹೇಳುವದಕ್ಕಾಗಿ ಸೈತಾನನು ಅಲ್ಲಿ ನಿಂತಿದ್ದನು. 2 ಆಗ ಯೆಹೋವನ ದೂತನು ಹೇಳಿದ್ದೇನೆಂದರೆ, “ಯೆಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯೆಹೋವನು ತನ್ನ ವಿಶೇಷ ನಗರವನ್ನಾಗಿ ಜೆರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಿಂದ ಎಳೆದುತೆಗೆದ ಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.” 3 ಯೆಹೋಶುವನು ದೂತನ ಮುಂದೆ ನಿಂತುಕೊಂಡಿದ್ದನು. ಅವನ ವಸ್ತ್ರವು ಮಲಿನವಾಗಿತ್ತು. 4 ಆಗ ಆ ದೂತನು ಪಕ್ಕದಲ್ಲಿ ನಿಂತಿದ್ದ ಬೇರೆ ದೂತರನ್ನುದ್ದೇಶಿಸಿ, “ಯೆಹೋಶುವನ ಮೇಲಿರುವ ಮೈಲಿಗೆ ವಸ್ತ್ರವನ್ನು ತೆಗೆಯಿರಿ” ಎಂದು ಹೇಳಿದನು. ಆಗ ದೂತನು ಯೆಹೋಶುವನಿಗೆ, “ನಾನು ನಿನ್ನ ದೋಷಗಳನ್ನು ತೊಳೆದುಬಿಟ್ಟಿರುವೆ. ಈಗ ನಾನು ನಿನಗೆ ಹೊಸ ಬಟ್ಟೆಗಳನ್ನು ಕೊಡುತ್ತೇನೆ” ಎಂದು ಹೇಳಿದನು. 5 ಆಗ ನಾನು, “ಅವನ ತಲೆಯ ಮೇಲೆ ಶುಚಿಯಾದ ಪೇಟವನ್ನಿಡಿರಿ” ಎಂದು ಹೇಳಿದಾಗ ಅವರು ಅವನಿಗೆ ಶುಭ್ರವಾದ ಪೇಟವನ್ನು ಇಟ್ಟರು. ಯೆಹೋವನ ದೂತನು ಅಲ್ಲಿ ನಿಂತಿದ್ದಾಗಲೇ ಅವನಿಗೆ ನಿರ್ಮಲವಾದ ಬಟ್ಟೆಗಳನ್ನು ಧರಿಸಲು ಕೊಟ್ಟರು. 6 ಆಗ ಯೆಹೋವನ ದೂತನು ಯೆಹೋಶುವನಿಗೆ ಹೀಗೆ ಹೇಳಿದನು. 7 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ನಾನು ಹೇಳುವ ರೀತಿಯಲ್ಲಿ ಜೀವಿಸು. ನಾನು ಹೇಳುವ ರೀತಿಯಲ್ಲಿ ನಡೆ. ನೀನು ನನ್ನ ಆಲಯದ ಮುಖ್ಯಾಧಿಕಾರಿಯಾಗುವೆ. ಅದರ ಅಂಕಣಗಳನ್ನು ನೀನು ನೋಡಿಕೊಳ್ಳುವೆ. ಇಲ್ಲಿ ನಿಂತಿರುವವರೊಂದಿಗೆ ನೀನು ಪ್ರವೇಶಿಸಬಹುದು. 8 ಪ್ರಧಾನ ಯಾಜಕನಾದ ಯೆಹೋಶುವನೇ, ಅವನೊಂದಿಗೆ ಸೇವೆಮಾಡುವ ಇತರ ಯಾಜಕರೇ, ನನ್ನ ಮಾತಿಗೆ ಕಿವಿಗೊಡಿರಿ. ಈ ಗಂಡಸರು ಮುಂದೆ ಏನಾಗಬಹುದೆಂಬುದಕ್ಕೆ ನಿದರ್ಶನವಾಗಿದ್ದಾರೆ. ಆಗ ನಾನು ನನ್ನ ವಿಶೇಷ ಸೇವಕನನ್ನು ಕರೆತರುವೆನು. ಆತನ ಹೆಸರು ಕೊಂಬೆ. 9 ನೋಡು, ನಾನು ಯೆಹೋಶುವನ ಮುಂದೆ ಒಂದು ವಿಶೇಷ ಕಲ್ಲನ್ನಿಡುವೆನು. ಆ ಕಲ್ಲಿನಲ್ಲಿ ಏಳು ಬದಿಗಳಿವೆ. ನಾನು ಆ ವಿಶೇಷ ಕಲ್ಲಿನ ಮೇಲೆ ವಿಶೇಷ ಸಂದೇಶವನ್ನು ಕೆತ್ತುವೆನು. ನಾನು ಆ ದೇಶದ ಪಾಪವನ್ನು ಒಂದು ದಿವಸದಲ್ಲಿ ತೆಗೆದುಹಾಕುವೆನೆಂದು ಅದು ತೋರಿಸುವುದು.” 10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ: “ಆ ದಿವಸಗಳಲ್ಲಿ ಜನರು ತಮ್ಮ ಸ್ನೇಹಿತರೊಂದಿಗೆ ಕುಳಿತುಕೊಂಡು ಸಂಭಾಷಿಸುವರು. ಅಂಜೂರದ ಮರದ ನೆರಳಿನಲ್ಲಿಯೂ ದ್ರಾಕ್ಷಿತೋಟಗಳ ನೆರಳಿನಲ್ಲಿಯೂ ಕುಳಿತುಕೊಂಡು ಮಾತನಾಡಲು ಪರಸ್ಪರ ಆಮಂತ್ರಿಸುವರು.” |
Kannada Holy Bible: Easy-to-Read Version
All rights reserved.
© 1997 Bible League International
Bible League International