Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 80 - ಪರಿಶುದ್ದ ಬೈಬಲ್‌


ಸ್ತುತಿಗೀತೆ. ರಚನೆಗಾರ: ಆಸಾಫ.

1 ಇಸ್ರೇಲನ್ನು ಕಾಯುವ ಕುರುಬನೇ, ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ, ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ, ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.

2 ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು. ಬಂದು ನಮ್ಮನ್ನು ರಕ್ಷಿಸು.

3 ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು. ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!

4 ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ? ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?

5 ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ. ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ. ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.

6 ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ. ಶತ್ರುಗಳು ನಮ್ಮನ್ನು ನೋಡಿ ನಗುವರು.

7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ. ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

8 ಹಿಂದಿನ ಕಾಲದಲ್ಲಿ ನೀನು ನಮ್ಮನ್ನು ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ. ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ. ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.

9 “ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ. ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ. ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.

10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು. ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.

11 ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು. ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.

12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ? ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.

13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ. ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.

14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ. ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.

15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು. ನೀನು ಬೆಳೆಸಿದ ಎಳೆ ಸಸಿಯನ್ನು ನೋಡು.

16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ. ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.

17 ನೀನು ಆರಿಸಿಕೊಂಡಿರುವಾತನ ಕಡೆಗೆ ಕೈಚಾಚಿ ಸಹಾಯ ಮಾಡು. ನೀನು ಬೆಳೆಸಿದ ಜನರ ಕಡೆಗೆ ಕೈಚಾಚು.

18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ. ನಮ್ಮನ್ನು ಬದುಕಿಸು. ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.

19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ, ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು