ಕೀರ್ತನೆಗಳು 64 - ಪರಿಶುದ್ದ ಬೈಬಲ್ರಚನೆಗಾರ: ದಾವೀದ. 1 ದೇವರೇ, ನನಗೆ ಕಿವಿಗೊಡು. ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ. ನನ್ನ ಪ್ರಾಣವನ್ನು ರಕ್ಷಿಸು. 2 ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು. ಆ ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು. 3 ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ. ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ. ಅವರ ಮಾತುಗಳು ವಿಷಬಾಣಗಳಂತಿವೆ. 4 ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ ನೀತಿವಂತನ ಮೇಲೆ ಆ ಬಾಣಗಳನ್ನು ಎಸೆಯುತ್ತಾರೆ. 5 ಕೇಡುಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು. “ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು. 6 ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ. ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ. 7 ಆದರೆ ದೇವರು ಇದ್ದಕ್ಕಿದ್ದಂತೆ ತನ್ನ ಬಾಣಗಳನ್ನು ಎಸೆಯುವನು. ಆಗ ಆ ದುಷ್ಟರು ಗಾಯಗೊಳ್ಳುವರು. 8 ದುಷ್ಟರು ಬೇರೆಯವರಿಗೆ ಕೇಡುಮಾಡಲು ಆಲೋಚಿಸುವರು. ಆದರೆ ಆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು. ಆಗ ಅವರನ್ನು ಕಂಡ ಪ್ರತಿಯೊಬ್ಬನೂ ಆಶ್ಚರ್ಯದಿಂದ ತಲೆಯಾಡಿಸುವನು. 9 ದೇವರ ಕಾರ್ಯವನ್ನು ಜನರು ಕಂಡು ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು. ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು ಆತನಲ್ಲಿ ಭಯಭಕ್ತಿಯುಳ್ಳವರಾಗುವರು. 10 ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ ಆತನನ್ನೇ ಆಶ್ರಯಿಸಿಕೊಳ್ಳುವರು. ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು. |
Kannada Holy Bible: Easy-to-Read Version
All rights reserved.
© 1997 Bible League International
Bible League International