Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 46 - ಪರಿಶುದ್ದ ಬೈಬಲ್‌


ರಚನೆಗಾರರು: ಕೋರಹೀಯರು.

1 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ. ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.

2 ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.

3 ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

4 ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ ದೇವನಗರವನ್ನು ಸಂತೋಷಪಡಿಸುತ್ತದೆ.

5 ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ. ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.

6 ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ; ಭೂಮಿಯು ಕರಗಿಹೋಗುವುದು.

7 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ. ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.

8 ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ; ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.

9 ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು; ಬಿಲ್ಲುಗಳನ್ನೂ ಗುರಾಣಿಗಳನ್ನೂ ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ! ನಾನು ಜನಾಂಗಗಳನ್ನು ಸೋಲಿಸುವೆನು! ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ. ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು