Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 42 - ಪರಿಶುದ್ದ ಬೈಬಲ್‌


ಎರಡನೆ ಭಾಗ (ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.

1 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.

2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ. ನಾನು ಯಾವಾಗ ಆತನನ್ನು ಸಂಧಿಸುವೆನು?

3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.

4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.

5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ? ಗಲಿಬಿಲಿಗೊಂಡಿರುವುದೇಕೆ? ದೇವರನ್ನು ನಿರೀಕ್ಷಿಸು; ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.

6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ. ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.

7 ಜಲಪಾತದ ಘೋಷದಂತೆಯೂ ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ. ಸಮುದ್ರದ ಅಲೆಗಳಂತೆ ದುಃಖವು ನನ್ನನ್ನು ಆವರಿಸಿಕೊಂಡಿದೆ.

8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.

9 ನನ್ನ ಬಂಡೆಯಾದ ದೇವರಿಗೆ, “ನೀನು ನನ್ನನ್ನು ಯಾಕೆ ಮರೆತುಬಿಟ್ಟೆ? ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.

10 ನನ್ನ ವಿರೋಧಿಗಳು ಸತತವಾಗಿ, “ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.

11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ? ಗಲಿಬಿಲಿಗೊಂಡಿರುವುದೇಕೆ? ದೇವರನ್ನು ನಿರೀಕ್ಷಿಸು; ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು