ಕೀರ್ತನೆಗಳು 20 - ಪರಿಶುದ್ದ ಬೈಬಲ್ರಚನೆಗಾರ: ದಾವೀದ. 1 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ. ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ. 2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ. ಚೀಯೋನಿನಿಂದ ನಿನಗೆ ಆಧಾರ ನೀಡಲಿ. 3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ. ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ. 4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ. ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ. 5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು. ಆತನ ಹೆಸರನ್ನು ಕೊಂಡಾಡೋಣ. ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ. 6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು. ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು; ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು. 7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು. ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು. ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು. 8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು; ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು! 9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು! ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು. |
Kannada Holy Bible: Easy-to-Read Version
All rights reserved.
© 1997 Bible League International
Bible League International