Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 19 - ಪರಿಶುದ್ದ ಬೈಬಲ್‌


ರಚನೆಗಾರ: ದಾವೀದ.

1 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು. ಗಗನವು ಆತನ ಕೈಕೆಲಸವನ್ನು ತಿಳಿಸುವುದು.

2 ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು. ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.

3 ಅವುಗಳ ಮಾತಾಗಲಿ ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.

4 ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ; ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ. ಆಕಾಶವು ಸೂರ್ಯನಿಗೆ ಮನೆಯಂತಿದೆ.

5 ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು. ಕ್ರೀಡಾಪಟುವಿನಂತೆ ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.

6 ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ ಮತ್ತೊಂದು ಕೊನೆಗೆ ಓಡುತ್ತಾಹೋಗುವನು. ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.

7 ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ. ಅವು ದೇವಜನರಿಗೆ ಬಲವನ್ನು ಕೊಡುತ್ತವೆ. ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ. ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.

8 ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ. ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ. ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ. ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

9 ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದು. ಯೆಹೋವನ ವಿಧಿಗಳು ಯಥಾರ್ಥವಾಗಿವೆ; ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.

10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ; ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.

11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ; ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.

13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ. ಆ ಪಾಪಗಳು ನನ್ನನ್ನು ಆಳದಿರಲಿ. ನೀನು ಸಹಾಯಮಾಡಿದರೆ ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.

14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ. ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ. ನನ್ನನ್ನು ರಕ್ಷಿಸುವಾತನು ನೀನೇ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು