ಕೀರ್ತನೆಗಳು 141 - ಪರಿಶುದ್ದ ಬೈಬಲ್ಸ್ತುತಿಗೀತೆ. ರಚನೆಗಾರ: ದಾವೀದ. 1 ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ. ನನ್ನ ಪ್ರಾರ್ಥನೆಗೆ ಕಿವಿಗೊಡು. ಬೇಗನೆ ಬಂದು ನನಗೆ ಸಹಾಯಮಾಡು! 2 ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ. 3 ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು. 4 ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ. ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು. ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ. 5 ನೀತಿವಂತನು ನನ್ನನ್ನು ಸರಿಪಡಿಸಿದರೆ ಅದು ನನಗೇ ಒಳ್ಳೆಯದು. ನಿನ್ನ ಭಕ್ತರು ನನ್ನನ್ನು ಗದರಿಸಿದರೆ ಅದು ನನಗೇ ಒಳ್ಳೆಯದು. ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. 6 ಅವರ ಅಧಿಪತಿಗಳು ದೊಬ್ಬಲ್ಪಡಲಿ. ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು. 7 ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ. 8 ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು. ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ. ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ. 9 ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ. ಅವರ ಬೋನುಗಳಿಂದ ನನ್ನನ್ನು ತಪ್ಪಿಸು. 10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ. ಆಗ ನಾನು ತಪ್ಪಿಸಿಕೊಳ್ಳುವೆನು. |
Kannada Holy Bible: Easy-to-Read Version
All rights reserved.
© 1997 Bible League International
Bible League International