ಕೀರ್ತನೆಗಳು 132 - ಪರಿಶುದ್ದ ಬೈಬಲ್ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. 1 ಯೆಹೋವನೇ, ದಾವೀದನು ಅನುಭವಿಸಿದ ಕಷ್ಟವನ್ನು ಜ್ಞಾಪಿಸಿಕೋ. 2 ದಾವೀದನು ಯೆಹೋವನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದನು; ಇಸ್ರೇಲರ ಶೂರನಾದ ದೇವರಿಗೆ ಆತನು ವಿಶೇಷವಾದ ಹರಕೆಯೊಂದನ್ನು ಮಾಡಿಕೊಂಡನು. 3 “ನಾನು ಯೆಹೋವನಿಗೋಸ್ಕರ ಒಂದು ಆಲಯವನ್ನು ಕಟ್ಟುವ ತನಕ ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ; ನನ್ನ ಹಾಸಿಗೆಯ ಮೇಲೆ ಮಲಗಿಕೊಳ್ಳುವುದಿಲ್ಲ; 4 ನಾನು ನಿದ್ರಿಸುವುದೂ ಇಲ್ಲ; ನನ್ನ ಕಣ್ಣುಗಳಿಗೆ ವಿಶ್ರಾಂತಿಯನ್ನು ಕೊಡುವುದೂ ಇಲ್ಲ. 5 ಇಸ್ರೇಲರ ಶೂರನಾದ ದೇವರಿಗೆ ಒಂದು ಆಲಯವನ್ನು ಕಟ್ಟುವೆನು” ಎಂದು ದಾವೀದನು ಹೇಳಿದನು. 6 ನಾವು ಅದರ ಬಗ್ಗೆ ಎಫ್ರಾತದಲ್ಲಿ ಕೇಳಿದೆವು. ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಲ್ಲಿ ಕಂಡುಕೊಂಡೆವು. 7 ಬನ್ನಿರಿ, ಆತನ ಪವಿತ್ರ ಮಂದಿರಕ್ಕೆ ಹೋಗೋಣ; ಆತನ ಪಾದಪೀಠದ ಮುಂದೆ ಆರಾಧಿಸೋಣ. 8 ಯೆಹೋವನೇ, ನಿನ್ನ ವಿಶ್ರಾಂತಿಯ ಸ್ಥಳದಿಂದ ಎದ್ದೇಳು. ನಿನ್ನ ಶಕ್ತಿಪೂರ್ಣವಾದ ಪೆಟ್ಟಿಗೆಯೊಂದಿಗೆ ಎದ್ದೇಳು. 9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಂಡಿದ್ದಾರೆ. ನಿನ್ನ ಭಕ್ತರು ಉಲ್ಲಾಸಿಸಲಿ. 10 ನಿನ್ನ ಸೇವಕನಾದ ದಾವೀದನಿಗೆ ನೀನು ವಾಗ್ದಾನ ಮಾಡಿರುವೆ. ನೀನು ಅಭಿಷೇಕಿಸಿರುವ ರಾಜನನ್ನು ತಿರಸ್ಕರಿಸಬೇಡ. 11 ಯೆಹೋವನು ದಾವೀದನಿಗೆ ಸ್ಥಿರವಾದ ವಾಗ್ದಾನವನ್ನು ಮಾಡಿದನು. ಆತನು ಅದನ್ನು ಬದಲಾಯಿಸುವುದೇ ಇಲ್ಲ. “ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು. 12 ನಿನ್ನ ಮಕ್ಕಳು ನನ್ನ ಒಡಂಬಡಿಕೆಗೂ ನಾನು ಆಜ್ಞಾಪಿಸಿದ ಕಟ್ಟಳೆಗಳಿಗೂ ವಿಧೇಯರಾದರೆ, ನಿನ್ನ ಸಂತಾನದ ಒಬ್ಬನು ಯಾವಾಗಲೂ ರಾಜನಾಗಿರುವನು.” 13 ಯೆಹೋವನು ತನ್ನ ಆಲಯಕ್ಕಾಗಿ ಚೀಯೋನನ್ನೇ ಆರಿಸಿಕೊಂಡನು. 14 “ಇದು ನನ್ನ ಶಾಶ್ವತ ನಿವಾಸಸ್ಥಾನ. ನಾನು ಇಲ್ಲೇ ಆಸನಾರೂಢನಾಗಿರುವೆನು. ಇದೇ ನನಗೆ ಇಷ್ಟವಾದ ಸ್ಥಳ. 15 ನಾನು ಚೀಯೋನಿಗೆ ಬೇಕಾದದ್ದನ್ನೆಲ್ಲಾ ಒದಗಿಸುವೆನು; ಇಲ್ಲಿಯ ಬಡವರಿಗೂ ಆಹಾರವನ್ನು ಸಮೃದ್ಧಿಯಾಗಿ ದಯಪಾಲಿಸುವೆನು; 16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು. ನನ್ನ ಭಕ್ತರು ಉಲ್ಲಾಸಿಸುವರು. 17 ಇಲ್ಲಿಯೇ ನಾನು ದಾವೀದನನ್ನು ಬಲಗೊಳಿಸುವೆನು. ನಾನು ಅಭಿಷೇಕಿಸಿದ ಅವನಿಗೆ ದೀಪವನ್ನು ಒದಗಿಸುವೆನು. 18 ನಾನು ಅವನ ಶತ್ರುಗಳಿಗೆ ನಾಚಿಕೆಯೆಂಬ ವಸ್ತ್ರವನ್ನು ಹೊದಿಸುವೆನು. ಅವನ ರಾಜ್ಯವನ್ನಾದರೋ ಅಭಿವೃದ್ಧಿಗೊಳಿಸುವೆನು.” |
Kannada Holy Bible: Easy-to-Read Version
All rights reserved.
© 1997 Bible League International
Bible League International