Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಫೆಸದವರಿಗೆ 3 - ಪರಿಶುದ್ದ ಬೈಬಲ್‌


ಅನ್ಯಜನರಿಗಾಗಿ ಪೌಲನ ಸೇವೆ

1 ನಾನು ಕ್ರಿಸ್ತಯೇಸುವಿನ ಸೆರೆಯಾಳು. ಯೆಹೂದ್ಯರಲ್ಲದ ನಿಮಗೋಸ್ಕರ ನಾನು ಸೆರೆಯಾಳಾಗಿದ್ದೇನೆ.

2 ದೇವರು ತನ್ನ ಕೃಪೆಯ ಮೂಲಕ ನನಗೆ ಈ ಕೆಲಸವನ್ನು ಕೊಟ್ಟನೆಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ದೇವರು ಈ ಕೆಲಸವನ್ನು ನನಗೆ ಕೊಟ್ಟನು.

3 ದೇವರು ತನ್ನ ರಹಸ್ಯವಾದ ಯೋಜನೆಯನ್ನು ನನಗೆ ತಿಳಿಸಿದನು ಮತ್ತು ತೋರಿಸಿದನು. ಇದರ ಬಗ್ಗೆ ನಾನು ಆಗಲೇ ನಿಮಗೆ ಸ್ವಲ್ಪ ಬರೆದಿದ್ದೇನೆ.

4 ನಾನು ಬರೆದಿರುವ ಈ ಸಂಗತಿಗಳನ್ನು ನೀವು ಓದಿದರೆ ಕ್ರಿಸ್ತನ ರಹಸ್ಯವಾದ ಸತ್ಯವನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂಬುದು ನಿಮಗೇ ತಿಳಿಯುತ್ತದೆ.

5 ಹಿಂದಿನ ಕಾಲಗಳಲ್ಲಿದ್ದ ಜನರಿಗೆ ಆ ರಹಸ್ಯಸತ್ಯವನ್ನು ಆತನು ತಿಳಿಸಲಿಲ್ಲ. ಈಗಲಾದರೊ ದೇವರು ತನ್ನ ಆತ್ಮನ ಮೂಲಕವಾಗಿ ಆ ರಹಸ್ಯಸತ್ಯವನ್ನು ತನ್ನ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ತೋರಿಸಿದ್ದಾನೆ.

6 ಇದು ಆ ರಹಸ್ಯಸತ್ಯ: ಯೆಹೂದ್ಯರಲ್ಲದವರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಇರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹಕ್ಕೆ ಸೇರಿದವರೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆ.

7 ದೇವರು ನೀಡಿದ ವಿಶೇಷವಾದ ಕೃಪಾವರದಿಂದ ನಾನು ಸುವಾರ್ತೆಯನ್ನು ತಿಳಿಸಲು ಸೇವಕನಾದೆನು. ದೇವರು ತನ್ನ ಶಕ್ತಿಯನ್ನು ಪ್ರಯೋಗಿಸಿ ನನಗೆ ಆ ಕೃಪಾವರವನ್ನು ಕೊಟ್ಟನು.

8 ದೇವಜನರಲ್ಲಿ ನಾನೇ ಅತ್ಯಲ್ಪನು. ಕ್ರಿಸ್ತನ ಐಶ್ವರ್ಯವನ್ನು ಕುರಿತಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂದು ದೇವರು ನನಗೆ ಈ ಕೃಪಾವರವನ್ನು ಕೊಟ್ಟನು. ಆ ಐಶ್ವರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

9 ರಹಸ್ಯವಾಗಿದ್ದ ತನ್ನ ಯೋಜನೆಯನ್ನು ಜನರೆಲ್ಲರಿಗೆ ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಆದಿಯಿಂದಲೂ ಅದು ದೇವರಲ್ಲಿ ಮರೆಯಾಗಿತ್ತು. ಪ್ರತಿಯೊಂದನ್ನೂ ಸೃಷ್ಟಿಸಿದಾತನು ದೇವರೇ.

10 ತನ್ನ ನಾನಾ ವಿಧವಾದ ಜ್ಞಾನವು ಆಕಾಶಮಂಡಲದಲ್ಲಿರುವ ಎಲ್ಲಾ ಅಧಿಪತಿಗಳಿಗೂ ಅಧಿಕಾರಿಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶವಾಗಿತ್ತು.

11 ಅನಾದಿಕಾಲದಿಂದಲೂ ಇದೇ ದೇವರ ಯೋಜನೆಯಾಗಿತ್ತು. ದೇವರು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ತನ್ನ ಯೋಜನೆಗನುಸಾರವಾಗಿ ಮಾಡಿದನು.

12 ನಾವು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ದೇವರ ಬಳಿಗೆ ಸ್ವತಂತ್ರದಿಂದ ಮತ್ತು ನಿರ್ಭಯದಿಂದ ಹೋಗಲು ಸಾಧ್ಯವಾಯಿತು.

13 ಹೀಗಿರಲಾಗಿ ನಾನು ನಿಮಗೋಸ್ಕರ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ನಿರಾಶರಾಗಿ ಧೈರ್ಯಗೆಡಬೇಡಿ. ನನ್ನ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.


ಕ್ರಿಸ್ತನ ಪ್ರೀತಿ

14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ.

15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ.

16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ.

17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ.

18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ.

19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.

20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು.

21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು