Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 36 - ಪರಿಶುದ್ದ ಬೈಬಲ್‌


ಚಲ್ಪಹಾದನ ಹೆಣ್ಣುಮಕ್ಕಳ ಭೂಮಿ

1 ಒಂದು ದಿನ ಗಿಲ್ಯಾದ್ ಕುಲದ ಕುಟುಂಬಗಳ ನಾಯಕರು ಮೋಶೆಯೊಡನೆಯೂ ಇತರ ಇಸ್ರೇಲರ ಕುಟುಂಬಗಳ ನಾಯಕರೊಡನೆಯೂ ಮಾತಾಡುವುದಕ್ಕೆ ಬಂದರು. (ಗಿಲ್ಯಾದನು ಮಾಕೀರನ ಮಗ; ಮಾಕೀರನು ಮನಸ್ಸೆಯ ಮಗ; ಮನಸ್ಸೆಯು ಯೋಸೇಫನ ಮಗ.)

2 ಅವರು, “ಸ್ವಾಮೀ, ಚೀಟುಹಾಕಿ ಇಸ್ರೇಲರಿಗೆ ದೇಶವನ್ನು ಹಂಚಿಕೊಡಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ್ದಾನೆ. ಅದಲ್ಲದೆ ನಮ್ಮ ಸಂಬಂಧಿಕನಾದ ಚಲ್ಪಹಾದನ ಭೂಮಿಯನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.

3 ಹೀಗಿರಲು ಅವರು ಇಸ್ರೇಲರ ಬೇರೆ ಯಾವ ಕುಲದವರನ್ನಾದರೂ ಮದುವೆಯಾದರೆ ಅವರ ಸ್ವಾಸ್ತ್ಯವು ನಮ್ಮ ಪೂರ್ವಿಕರ ಕುಲದಿಂದ ತೆಗೆಯಲ್ಪಟ್ಟು, ಅವರು ಮದುವೆಯ ಮೂಲಕ ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು.

4 ಇಸ್ರೇಲರ ಜೂಬಿಲಿ ಸಂವತ್ಸರವು ಬಂದಾಗ ಅವರ ಸ್ವಾಸ್ತ್ಯವು ಅವರು ಸೇರಿಕೊಳ್ಳುವ ಕುಲದ ಸ್ವಾಸ್ತ್ಯಕ್ಕೆ ಕೂಡಿಕೊಳ್ಳುವುದರಿಂದ ನಮ್ಮ ಕುಲದಿಂದ ತೆಗೆಯಲ್ಪಡುವುದು” ಎಂದು ಹೇಳಿದರು.

5 ಆಗ ಮೋಶೆಯು ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರಿಗೆ, “ಯೋಸೇಫನ ಸಂತತಿಯವರು ಹೇಳುವುದು ನ್ಯಾಯ.

6 ಆದಕಾರಣ ಚಲ್ಫಹಾದನ ಹೆಣ್ಣುಮಕ್ಕಳು ಮದುವೆಯಾಗುವುದಾದರೆ ತಮ್ಮ ತಂದೆಯ ಗೋತ್ರಕ್ಕೆ ಸಂಬಂಧಿಸಿದ ಯಾರನ್ನು ಬೇಕಾದರೂ ಮದುವೆಯಾಗಬಹುದೆಂದು ಯೆಹೋವನು ಆಜ್ಞಾಪಿಸಿದ್ದಾನೆ.

7 ಇಸ್ರೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರೇಲರೆಲ್ಲರೂ ತಮ್ಮ ಪೂರ್ವಿಕರಿಂದ ಸ್ವಾಸ್ತ್ಯವಾಗಿ ಪಡೆದುಕೊಂಡ ತಮ್ಮ ಗೋತ್ರದ ಭೂಮಿಯನ್ನು ತಮ್ಮ ಸ್ವಾಧೀನದಲ್ಲೇ ಇಟ್ಟುಕೊಂಡಿರಬೇಕು.

8 ಆದ್ದರಿಂದ ಇಸ್ರೇಲರ ಕುಲಗಳಲ್ಲಿ ಭೂಮಿಯನ್ನು ಸ್ವಾಸ್ತ್ಯವಾಗಿ ಹೊಂದುವ ಪ್ರತಿಯೊಬ್ಬ ಮಗಳು, ತನ್ನ ತಂದೆಯ ಗೋತ್ರದವನನ್ನೇ ಮದುವೆಯಾಗಬೇಕು.

9 ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರೇಲರ ಪ್ರತಿಯೊಂದು ಕುಲವು ತನ್ನ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರುವುದು” ಎಂದು ಹೇಳಿದನು.

10 ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಚಲ್ಪಹಾದನ ಹೆಣ್ಣುಮಕ್ಕಳು ವಿಧೇಯರಾದರು.

11 ಆದ್ದರಿಂದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ಯೆಹೋವನ ಆಜ್ಞಾನುಸಾರವಾಗಿ ನಡೆದು ತಂದೆಯ ಅಣ್ಣತಮ್ಮಂದಿರ ಗಂಡುಮಕ್ಕಳನ್ನು ಮದುವೆಯಾದರು.

12 ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನೇ ಮದುವೆಯಾದದ್ದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು.

13 ಜೆರಿಕೊ ಪಟ್ಟಣದ ಎದುರಾಗಿರುವ ಜೋರ್ಡನ್ ನದಿಯ ಬಳಿಯಲ್ಲಿರುವ ಮೋವಾಬಿನ ಬಯಲಿನಲ್ಲಿ ಯೆಹೋವನು ಇಸ್ರೇಲರಿಗೆ ಮೋಶೆಯ ಮೂಲಕ ಕೊಟ್ಟ ಆಜ್ಞಾವಿಧಿಗಳು ಇವೇ.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು