Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 9 - ಪರಿಶುದ್ದ ಬೈಬಲ್‌


ಸೌಲನ ಕುಟುಂಬಕ್ಕೆ ದಾವೀದನು ತೋರಿದ ಅನುಕಂಪ

1 ದಾವೀದನು, “ಸೌಲನ ಕುಟುಂಬದಲ್ಲಿ ಇನ್ನೂ ಯಾರಾದರೂ ಉಳಿದಿರುವರೇ? ಯೋನಾತಾನನಿಗೋಸ್ಕರ ನಾನು ಆ ವ್ಯಕ್ತಿಗೆ ದಯೆ ತೋರಿಸಬೇಕಾಗಿದೆ” ಎಂದು ಕೇಳಿದನು.

2 ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು. ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು.

3 ರಾಜನಾದ ದಾವೀದನು, “ಸೌಲನ ಕುಟುಂಬದಲ್ಲಿ ಯಾವ ವ್ಯಕ್ತಿಯಾದರೂ ಉಳಿದಿರುವನೇ? ನಾನು ಆ ವ್ಯಕ್ತಿಗೆ ದೇವರ ಕರುಣೆಯನ್ನು ತೋರಿಸಬೇಕಾಗಿದೆ” ಎಂದು ಹೇಳಿದನು. ಚೀಬನು ರಾಜನಾದ ದಾವೀದನಿಗೆ, “ಯೋನಾತಾನನ ಮಗನೊಬ್ಬನು ಇನ್ನೂ ಇದ್ದಾನೆ. ಅವನ ಎರಡೂ ಕಾಲುಗಳು ಕುಂಟಾಗಿವೆ” ಎಂದನು.

4 ರಾಜನಾದ ದಾವೀದನು ಚೀಬನಿಗೆ, “ಅವನು ಎಲ್ಲಿದ್ದಾನೆ?” ಎಂದು ಕೇಳಿದನು. ಚೀಬನು ರಾಜನಿಗೆ, “ಅವನು ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿದ್ದಾನೆ” ಎಂದನು.

5 ಆಗ ರಾಜನಾದ ದಾವೀದನು ಲೋದೆಬಾರಿನಲ್ಲಿ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಯೋನಾತಾನನ ಮಗನನ್ನು ಕರೆತರಲು ಸೇವಕರನ್ನು ಕಳುಹಿಸಿದನು.

6 ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ದಾವೀದನು, “ಮೆಫೀಬೋಶೆತನೇ” ಎಂದನು. ಮೆಫೀಬೋಶೆತನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ” ಎಂದನು.

7 ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.

8 ಮೆಫೀಬೋಶೆತನು ದಾವೀದನಿಗೆ ಮತ್ತೆ ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನಿನ್ನ ಸೇವಕನಾದ ನನಗೆ ಬಹಳ ದಯಾಪರನಾಗಿರುವೆ, ನಾನು ಸತ್ತ ನಾಯಿಗಿಂತ ಉತ್ತಮನೇನಲ್ಲ!” ಎಂದು ಹೇಳಿದನು.

9 ಆಗ ರಾಜನಾದ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಒಡೆಯನಾದ ಸೌಲನ ಕುಟುಂಬಕ್ಕೆ ಸೇರಿದ ಎಲ್ಲವನ್ನೂ ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ.

10 ನೀನು ಮೆಫೀಬೋಶೆತನಿಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡು. ನಿನ್ನ ಮಕ್ಕಳೂ ನಿನ್ನ ಸೇವಕರೂ ಮೆಫೀಬೋಶೆತನಿಗಾಗಿ ಇದನ್ನು ಮಾಡಲಿ. ನೀನು ಬೆಳೆಗಳನ್ನು ಕೊಯ್ದು ಸುಗ್ಗಿಮಾಡು. ಆಗ ನಿನ್ನ ಒಡೆಯನ ಮೊಮ್ಮಗನಿಗೆ ಬೇಕಾದಷ್ಟು ಆಹಾರವಿರುತ್ತದೆ. ಆದರೆ ನಿನ್ನ ಒಡೆಯನ ಮೊಮ್ಮಗನಾದ ಮೆಫೀಬೋಶೆತನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟ ಮಾಡಬೇಕು” ಎಂದನು. ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ, ಇಪ್ಪತ್ತು ಮಂದಿ ಸೇವಕರೂ ಇದ್ದರೂ.

11 ಚೀಬನು ರಾಜನಾದ ದಾವೀದನಿಗೆ, “ನಾನು ನಿನ್ನ ಸೇವಕ. ರಾಜನಾದ ಒಡೆಯನು ನನಗೆ ಆಜ್ಞಾಪಿಸಿದ್ದೆಲ್ಲವನ್ನೂ ನಾನು ಮಾಡುತ್ತೇನೆ” ಎಂದನು. ಆದ್ದರಿಂದ ಮೆಫೀಬೋಶೆತನು, ರಾಜನ ಗಂಡುಮಕ್ಕಳಲ್ಲಿ ಒಬ್ಬನಂತೆ, ದಾವೀದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದನು.

12 ಮೆಫೀಬೋಶೆತನಿಗೆ ಮೀಕನೆಂಬ ಚಿಕ್ಕ ಮಗನಿದ್ದನು. ಚೀಬನ ಕುಟುಂಬದ ಜನರೆಲ್ಲರೂ ಮೆಫೀಬೋಶೆತನ ಸೇವಕರಾದರು.

13 ಮೆಫೀಬೋಶೆತನ ಎರಡೂ ಕಾಲುಗಳು ಕುಂಟಾಗಿದ್ದವು. ಮೆಫೀಬೋಶೆತನು ಜೆರುಸಲೇಮಿನಲ್ಲಿ ನೆಲೆಸಿದ್ದನು. ಅವನು ಪ್ರತಿದಿನವೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು