Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹೋಶೇಯ 7 - ಕನ್ನಡ ಸಮಕಾಲಿಕ ಅನುವಾದ

1 ನಾನು ಇಸ್ರಾಯೇಲನ್ನು ಗುಣ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಪಾಪಗಳನ್ನು ಬಹಿರಂಗಪಡಿಸುತ್ತೇನೆ. ಮತ್ತು ಸಮಾರ್ಯದ ಕೆಟ್ಟತನವನ್ನು ಪ್ರಕಟಪಡಿಸುತ್ತೇನೆ. ಅವರು ಸುಳ್ಳನ್ನು ನಡೆಸುತ್ತಾರೆ. ಕಳ್ಳನು ಒಳಗೆ ಬರುತ್ತಾನೆ ಮತ್ತು ಕಳ್ಳರ ಗುಂಪು ಹೊರಗೆ ಸುಲಿದುಕೊಳ್ಳುತ್ತದೆ.

2 ಆದರೆ ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕ ಮಾಡುತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನೆಸಿಕೊಳ್ಳುವುದಿಲ್ಲ. ಈಗ ಅವರ ಪಾಪಗಳು ಅವರನ್ನು ಸುತ್ತಿಕೊಂಡಿವೆ. ಅವು ನನ್ನ ಮುಖದ ಮುಂದೆ ಇವೆ.

3 “ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ, ಅವರ ಸುಳ್ಳಿನಿಂದ ರಾಜಕುಮಾರನನ್ನೂ ಸಂತೋಷ ಪಡಿಸುತ್ತಾರೆ.

4 ಅವರೆಲ್ಲರು ವ್ಯಭಿಚಾರಿಗಳು, ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸುವ ಒಲೆಗೆ ಸಮಾನರಾಗಿದ್ದಾರೆ. ಅವನು ಹಿಟ್ಟು ನಾದಿದ ಮೇಲೆ, ಅದು ಹುಳಿಯಾಗುವ ತನಕ ಉರಿಸದೆ ಬಿಟ್ಟಿರುವ ಕೆಂಡಕ್ಕೆ ಸಮಾನರಾಗಿದ್ದಾರೆ.

5 ನಮ್ಮ ಅರಸನ ಹಬ್ಬದ ದಿವಸಗಳಲ್ಲಿ ರಾಜಕುಮಾರರು ದ್ರಾಕ್ಷಾರಸವನ್ನು ಕುಡಿದು ಮತ್ತರಾಗುತ್ತಾರೆ. ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.

6 ಅವರು ಹೊಂಚುಹಾಕಿಕೊಂಡಿದ್ದಾಗ, ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ. ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ ಬೆಳಿಗ್ಗೆ ಅದು ಪ್ರಜ್ವಲಿಸುವ ಬೆಂಕಿಯ ಹಾಗೆ ಉರಿಯುತ್ತದೆ.

7 ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ. ಅವರು ತಮ್ಮ ನ್ಯಾಯಾಧಿಪತಿಗಳನ್ನು ನುಂಗಿಬಿಡುತ್ತಾರೆ. ಅವರ ಅರಸರೆಲ್ಲರು ಬಿದ್ದು ಹೋಗಿದ್ದಾರೆ. ಅವರಲ್ಲಿ ಒಬ್ಬನಾದರೂ ನನ್ನನ್ನು ಕರೆಯುವುದಿಲ್ಲ.

8 “ಎಫ್ರಾಯೀಮು ಜನಾಂಗಗಳೊಂದಿಗೆ ತನ್ನನ್ನು ಬೆರೆಸಿಕೊಂಡಿದೆ. ಎಫ್ರಾಯೀಮು ತಿರುವಿ ಹಾಕದ ರೊಟ್ಟಿಯಾಗಿದ್ದಾನೆ.

9 ವಿದೇಶಿಯರು ಅವನ ಶಕ್ತಿಯನ್ನು ಹೀರಿಬಿಟ್ಟಿದ್ದಾರೆ. ಅದು ಅವನಿಗೆ ಗೊತ್ತಿಲ್ಲ. ನರೆಕೂದಲು ಸಹ ಅವನ ಮೇಲೆ ಇದೆ. ಆದರೂ ಅವನು ತಿಳಿಯದೇ ಇದ್ದಾನೆ.

10 ಇಸ್ರಾಯೇಲಿನ ಗರ್ವವು ಅವನಿಗೆ ವಿರುದ್ಧವಾಗಿ ಸಾಕ್ಷಿಕೊಡುತ್ತದೆ. ಆದರೂ ಅವರು ತಮ್ಮ ಯೆಹೋವ ದೇವರ ಕಡೆಗೆ ತಿರುಗದೆ ಇದ್ದಾರೆ. ಆತನನ್ನು ಹುಡುಕದೇ ಇದ್ದಾರೆ.

11 “ಎಫ್ರಾಯೀಮು ಸಹ ಸುಲಭವಾಗಿ ಮೋಸಕ್ಕೆ ಒಳಗಾಗುವ ಪಾರಿವಾಳದ ಹಾಗಿದ್ದಾನೆ. ಈಗ ಅವರು ಈಜಿಪ್ಟನ್ನು ಕರೆಯುತ್ತಾರೆ. ಈಗ ಅವರು ಅಸ್ಸೀರಿಯದ ಆಶ್ರಯಕ್ಕೆ ಹೋಗುತ್ತಾರೆ.

12 ಅವರು ಹೋಗುವಾಗ, ನಾನು ಅವರ ಮೇಲೆ ನನ್ನ ಬಲೆಯನ್ನು ಹಾಸುವೆನು. ಆಕಾಶದ ಪಕ್ಷಿಗಳ ಹಾಗೆ, ಅವರನ್ನು ಕೆಳಗೆ ಇಳಿಸಿ, ಅವರು ಒಟ್ಟಿಗೆ ಸೇರುವುದನ್ನು ನಾನು ಕೇಳಿದಾಗ, ನಾನು ಅವುಗಳನ್ನು ಹಿಡಿಯುತ್ತೇನೆ.

13 ಅವರಿಗೆ ಕಷ್ಟ, ಏಕೆಂದರೆ ಅವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಅವರು ನಾಶವಾಗಲಿ! ಏಕೆಂದರೆ ಅವರು ನನಗೆ ವಿರುದ್ಧವಾಗಿ ದ್ರೋಹ ಮಾಡಿದ್ದಾರೆ. ನಾನು ಅವರಿಗೆ ವಿಮೋಚನೆ ಮಾಡಿದ್ದರೂ, ಅವರು ನನಗೆ ವಿರುದ್ಧವಾಗಿ ಸುಳ್ಳು ಹೇಳಿದ್ದಾರೆ.

14 ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ, ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ. ಧಾನ್ಯ ಮತ್ತು ದ್ರಾಕ್ಷಾರಸಗಳ ನಿಮಿತ್ತ ಅವರು ತಮ್ಮ ದೇವರುಗಳಿಗೆ ಮನವಿ ಮಾಡುವಾಗ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ, ಆದರೆ ಅವರು ನನ್ನಿಂದ ದೂರವಿರುತ್ತಾರೆ.

15 ನಾನು ಅವರ ತೋಳುಗಳನ್ನು ಬಂಧಿಸಿ ಬಲಪಡಿಸಿದ್ದೇನೆ. ಆದರೂ ಅವರು ನನಗೆ ವಿರುದ್ಧವಾಗಿ ಕೇಡು ಮಾಡಲು ಊಹಿಸಿಕೊಂಡಿದ್ದಾರೆ.

16 ಅವರು ಮಹೋನ್ನತನಾದಾತನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿನ ಹಾಗೆ ಇದ್ದಾರೆ. ಅವರ ನಾಯಕರು ನಾಲಿಗೆಯ ಹುಚ್ಚು ಕೂಗಾಟದಿಂದ, ಖಡ್ಗದಿಂದ ಬೀಳುವರು. ಇದೇ ಈಜಿಪ್ಟ್ ದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು