Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹಗ್ಗಾಯ 2 - ಕನ್ನಡ ಸಮಕಾಲಿಕ ಅನುವಾದ

1 ಏಳನೆಯ ತಿಂಗಳಿನ, ಇಪ್ಪತ್ತೊಂದನೆಯ ದಿವಸದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಬಂದಿತು:

2 “ಶೆಯಲ್ತಿಯೇಲನ ಮಗ ಮತ್ತು ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಇದನ್ನು ಹೇಳತಕ್ಕದ್ದು.

3 ಈ ಆಲಯದ ಅದರ ಪೂರ್ವದ ಮಹಿಮೆಯನ್ನು ನೋಡಿದವರೊಳಗೆ ಉಳಿದವನು ನಿಮ್ಮಲ್ಲಿ ಯಾರು ಇದ್ದಾರೆ? ಈಗ ಅದು ಹೇಗೆ ಕಾಣುತ್ತದೆ? ಇದು ನಿಮ್ಮ ದೃಷ್ಟಿಗೆ ಏನೂ ಇಲ್ಲದ ಹಾಗೆ ತೋರುತ್ತದಲ್ಲವೋ?

4 ಆದರೂ ಈಗ ಯೆಹೋವ ದೇವರು ಹೀಗೆ ಹೇಳಿದರು: ‘ಜೆರುಬ್ಬಾಬೆಲನೇ, ಬಲವಾಗಿರು. ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನೇ, ಬಲವಾಗಿರು. ದೇಶದ ಜನರೆಲ್ಲರೇ, ಬಲವಾಗಿರಿ,’ ಕೆಲಸಮಾಡಿರಿ. ‘ನಾನು ನಿಮ್ಮ ಸಂಗಡ ಇದ್ದೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

5 ನೀವು ಈಜಿಪ್ಟಿನೊಳಗಿನಿಂದ ಹೊರಗೆ ಬಂದಾಗ, ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ, ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿರುವುದು. ನೀವು ಭಯಪಡಬೇಡಿರಿ.

6 “ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಸ್ವಲ್ಪ ಕಾಲದ ನಂತರ ಇನ್ನೊಂದು ಸಾರಿ ನಾನು ಆಕಾಶಗಳನ್ನು ಭೂಮಿಯನ್ನು, ಸಮುದ್ರವನ್ನು ಮತ್ತು ಒಣನೆಲವನ್ನು ಕದಲಿಸುತ್ತೇನೆ.

7 ಎಲ್ಲಾ ಜನಾಂಗಗಳನ್ನು ನಡುಗಿಸುವೆನು. ಎಲ್ಲಾ ಜನಾಂಗಗಳ ಇಷ್ಟ ವಸ್ತುಗಳು ಬಂದು ಒದಗಲು, ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

8 ‘ಬೆಳ್ಳಿ ನನ್ನದು, ಚಿನ್ನವು ನನ್ನದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

9 ‘ಈಗಿರುವ ಆಲಯದ ಮಹಿಮೆಯು, ಹಿಂದಿನ ಆಲಯದ ಮಹಿಮೆಗಿಂತ ವಿಶೇಷವಾಗಿರುವುದು,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. ‘ನಾನೇ ಈ ಸ್ಥಳದಲ್ಲಿ ಸಮಾಧಾನ ಕೊಡುವೆನು,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.”


ಕೆಟ್ಟು ಹೋದ ಜನರಿಗಾಗಿ ಆಶೀರ್ವಾದ

10 ದಾರ್ಯಾವೆಷನ ಎರಡನೆಯ ವರ್ಷದ, ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನಿಗೆ ಬಂದಿತು:

11 “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮೋಶೆಯ ನಿಯಮದ ಪ್ರಕಾರವಾಗಿ ಯಾಜಕರಿಗೆ,

12 ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪ್ರತಿಷ್ಠಿಸಿದ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾದರೂ ಎಣ್ಣೆಯನ್ನಾದರೂ ಯಾವ ವಿಧವಾದ ಆಹಾರವನ್ನಾದರೂ ಮುಟ್ಟಿದರೆ, ಅದು ಪರಿಶುದ್ಧವಾಗುವುದೋ? ಕೇಳು,’ ” ಎಂದನು. ಹಗ್ಗಾಯನು ಹಾಗೆ ವಿಚಾರಿಸಲು, ಯಾಜಕರು, “ಇಲ್ಲ,” ಎಂದು ಉತ್ತರಕೊಟ್ಟರು.

13 ಆಗ ಹಗ್ಗಾಯನು, “ಹೆಣದಿಂದ ಅಶುದ್ಧವಾದವನು, ಇವುಗಳಲ್ಲಿ ಯಾವುದನ್ನಾದರೂ ಮುಟ್ಟಿದರೆ, ಅಶುದ್ಧವಾಗುವುದೋ?” ಎಂದನು. ಯಾಜಕರು ಉತ್ತರವಾಗಿ, “ಹೌದು, ಅಶುದ್ಧವಾಗುವುದು,” ಎಂದರು.

14 ಆಗ ಹಗ್ಗಾಯನು ಮುಂದುವರಿಸಿ ಹೇಳಿದ್ದೇನೆಂದರೆ, “ಈ ಜನರೂ, ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಅರ್ಪಿಸುವಂಥಾದ್ದು ಅಶುದ್ಧವೇ.

15 “ಈಗ ಚೆನ್ನಾಗಿ ಯೋಚಿಸಿಕೊಳ್ಳಿರಿ. ಯೆಹೋವ ದೇವರ ಆಲಯ ನಿವೇಶನದಲ್ಲಿ, ಕಲ್ಲಿನ ಮೇಲೆ ಕಲ್ಲು ಇಡುವ, ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ.

16 ಆ ದಿನಗಳು ಇದ್ದದ್ದು ಮೊದಲುಗೊಂಡು, ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ, ಹತ್ತು ಸೇರು ಮಾತ್ರ ಸಿಕ್ಕುತ್ತಿತ್ತು. ಒಬ್ಬನು ಐವತ್ತು ಪಾತ್ರೆ ದ್ರಾಕ್ಷಾರಸವನ್ನು ತುಂಬಿಸುವುದಕ್ಕೆ ತೊಟ್ಟಿಗೆ ಬಂದಾಗ, ಇಪ್ಪತ್ತು ಮಾತ್ರ ದೊರೆಯುತ್ತಿತ್ತಷ್ಟೆ.

17 ನಾನು ನಿಮ್ಮ ಕೈ ದುಡಿತಗಳನ್ನೆಲ್ಲಾ ಬೂಜಿನಿಂದಲೂ ಉರಿಗಾಳಿಯಿಂದಲೂ ಕಲ್ಮಳೆಯಿಂದಲೂ ಹಾಳುಮಾಡಿದೆನು. ಆದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ.

18 ಚೆನ್ನಾಗಿ ನೆನಪಿಗೆ ತಂದುಕೊಳ್ಳಿರಿ. ಇಂದಿನಿಂದ ಇದಕ್ಕೆ ಮುಂಚೆ ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ, ಯೆಹೋವ ದೇವರ ಮಂದಿರದ ಅಸ್ತಿವಾರವು ಹಾಕಲಾದ ದಿನದಿಂದ ಸೂಕ್ಷ್ಮವಾಗಿ ಯೋಚಿಸಿಕೊಳ್ಳಿರಿ.

19 ಬೀಜವು ಇನ್ನು ಕಣಜದಲ್ಲಿ ಉಂಟೋ? ದ್ರಾಕ್ಷಿ, ಅಂಜೂರ, ದಾಳಿಂಬೆ, ಎಣ್ಣೆಮರಗಳು ಇನ್ನೂ ಫಲಿಸಲಿಲ್ಲವಲ್ಲಾ. “ಈ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು,” ಎಂದರು.


ಜೆರುಬ್ಬಾಬೆಲು ಯೆಹೋವ ದೇವರ ಮುದ್ರೆಯ ಉಂಗುರ

20 ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು, ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ, ಹಗ್ಗಾಯನಿಗೆ ಬಂದಿತು.

21 ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನೆಂದರೆ, “ನಾನು ಆಕಾಶಗಳನ್ನೂ, ಭೂಮಿಯನ್ನೂ ಕದಲಿಸುವೆನು.

22 ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು. ನಾನು ಇತರ ಜನಾಂಗಗಳ, ರಾಜ್ಯಗಳ ಬಲವನ್ನು ನಾಶಮಾಡುವೆನು. ರಥಗಳನ್ನೂ, ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು. ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಖಡ್ಗದಿಂದ ಬೀಳುವನು.

23 “ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಶೆಯಲ್ತಿಯೇಲನ ಮಗನಾದ ನನ್ನ ಸೇವಕ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ನಿನ್ನನ್ನು ಮುದ್ರೆಯ ಉಂಗುರದ ಹಾಗೆ ಇಡುವೆನು. ಏಕೆಂದರೆ ನಿನ್ನನ್ನು ನಾನೇ ಆಯ್ದುಕೊಂಡಿದ್ದೇನೆ,’ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು