Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 17 - ಕನ್ನಡ ಸಮಕಾಲಿಕ ಅನುವಾದ


ಬಂಡೆಯೊಳಗಿಂದ ಬಂದ ನೀರು

1 ಇಸ್ರಾಯೇಲ್ ಸಮೂಹವೆಲ್ಲಾ ಯೆಹೋವ ದೇವರ ಅಪ್ಪಣೆಯ ಪ್ರಕಾರ ಅವರವರು ಹೊರಡುವ ಕ್ರಮದಂತೆ ಸೀನ್ ಮರುಭೂಮಿಯಿಂದ ಹೊರಟು ರೆಫೀದೀಮಿನಲ್ಲಿ ತಂಗಿದರು. ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ.

2 ಆದಕಾರಣ ಜನರು ಮೋಶೆಯ ಸಂಗಡ ವಿವಾದ ಮಾಡಿ, “ನಮಗೆ ಕುಡಿಯುವುದಕ್ಕೆ ನೀರು ಕೊಡು,” ಎಂದರು. ಮೋಶೆಯು ಅವರಿಗೆ, “ಏಕೆ ನನ್ನ ಸಂಗಡ ವಿವಾದ ಮಾಡುತ್ತೀರಿ? ಯೆಹೋವ ದೇವರನ್ನು ಏಕೆ ಪರೀಕ್ಷಿಸುತ್ತೀರಿ?” ಎಂದನು.

3 ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿ, “ನಮ್ನನ್ನೂ, ನಮ್ಮ ಮಕ್ಕಳನ್ನೂ, ನಮ್ಮ ಪಶುಗಳನ್ನೂ ದಾಹದಿಂದ ಕೊಲ್ಲುವುದಕ್ಕಾಗಿ ಏಕೆ ಈಜಿಪ್ಟಿನೊಳಗಿಂದ ಇಲ್ಲಿಗೆ ಬರಮಾಡಿದೆ,” ಎಂದರು.

4 ಆಗ ಮೋಶೆಯು ಯೆಹೋವ ದೇವರಿಗೆ ಮೊರೆಯಿಟ್ಟು, “ಈ ಜನರಿಗೆ ನಾನೇನು ಮಾಡಲಿ? ಅವರು ಬಹಳಮಟ್ಟಿಗೆ ನನಗೆ ಕಲ್ಲೆಸೆಯುವುದಕ್ಕಿದ್ದಾರೆ,” ಎಂದನು.

5 ಆಗ ಯೆಹೋವ ದೇವರು ಮೋಶೆಗೆ, “ಜನರ ಮುಂದೆ ಹಾದು ಹೋಗಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರನ್ನು ಕರಕೊಂಡು ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗು.

6 ಅಲ್ಲಿ, ನಾನು ಹೋರೇಬಿನಲ್ಲಿ ಬಂಡೆಯ ಮೇಲೆ ನಿನ್ನ ಮುಂದೆ ನಿಂತುಕೊಳ್ಳುವೆನು, ನೀನು ಬಂಡೆಯನ್ನು ಹೊಡೆಯಬೇಕು. ಆಗ ಜನರು ಕುಡಿಯುವಂತೆ ನೀರು ಹೊರಗೆ ಬರುವುದು,” ಎಂದರು. ಮೋಶೆಯು ಇಸ್ರಾಯೇಲರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.

7 “ಯೆಹೋವ ದೇವರು ತಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ,” ಎಂದು ಜನರು ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ಮಸ್ಸಾ ಎಂದು ಹೆಸರಿಟ್ಟನು. ಅಲ್ಲಿ ಇಸ್ರಾಯೇಲರು ತನ್ನೊಡನೆ ವಿವಾದ ಮಾಡಿದ್ದರಿಂದ ಮೆರೀಬಾ ಎಂತಲೂ ಹೆಸರಿಟ್ಟನು.


ಅಮಾಲೇಕ್ಯರನ್ನು ಸೋಲಿಸಿದ್ದು

8 ಅಮಾಲೇಕ್ಯರು ಬಂದು ರೆಫೀದೀಮಿನಲ್ಲಿ ಇಸ್ರಾಯೇಲರ ಸಂಗಡ ಯುದ್ಧಮಾಡಿದರು.

9 ಆಗ ಮೋಶೆಯು ಯೆಹೋಶುವನಿಗೆ, “ನೀನು ನಮ್ಮ ಜನರಲ್ಲಿ ಕೆಲವರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗು. ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು,” ಎಂದನು.

10 ಯೆಹೋಶುವನು ಮೋಶೆ ಅಪ್ಪಣೆ ಕೊಟ್ಟಂತೆ ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು.

11 ಮೋಶೆಯು ತನ್ನ ಕೈಯನ್ನು ಎತ್ತಿದಾಗ, ಇಸ್ರಾಯೇಲರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು.

12 ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಕಲ್ಲನ್ನು ತಂದು ಇಟ್ಟಾಗ, ಅವನು ಅದರ ಮೇಲೆ ಕೂತುಕೊಂಡನು. ಆರೋನನು ಒಂದು ಕಡೆಯಲ್ಲಿಯೂ, ಹೂರನು ಇನ್ನೊಂದು ಕಡೆಯಲ್ಲಿಯೂ ಮೋಶೆಯ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವವರೆಗೆ ಅವನ ಕೈಗಳು ಇಳಿಯದೆ ನಿಂತೇ ಇದ್ದವು.

13 ಯೆಹೋಶುವನು ಅಮಾಲೇಕ್ಯರನ್ನೂ, ಅವನ ಜನರನ್ನೂ ಖಡ್ಗದಿಂದ ಸೋಲಿಸಿದನು.

14 ಆಗ ಯೆಹೋವ ದೇವರು ಮೋಶೆಗೆ, “ಇದನ್ನು ಜ್ಞಾಪಕಾರ್ಥವಾಗಿ ಗ್ರಂಥದಲ್ಲಿ ಬರೆ. ಏಕೆಂದರೆ ನಾನು ಅಮಾಲೇಕ್ಯರ ನೆನಪು ಭೂಲೋಕದಲ್ಲಿ ಇರದಂತೆ ಸಂಪೂರ್ಣವಾಗಿ ಅಳಿಸಿಬಿಡುವೆನು. ಇದನ್ನು ಯೆಹೋಶುವನಿಗೆ ಮನದಟ್ಟಾಗುವಂತೆ ಹೇಳು,” ಎಂದರು.

15 ಇದಾದ ಮೇಲೆ ಮೋಶೆ ಬಲಿಪೀಠವನ್ನು ಕಟ್ಟಿ, ಅದಕ್ಕೆ “ಯೆಹೋವ ನಿಸ್ಸೀ,” ಎಂದು ಹೆಸರಿಟ್ಟನು.

16 ಅನಂತರ ಮೋಶೆ, “ಯೆಹೋವ ದೇವರ ಸಿಂಹಾಸನಕ್ಕೆ ವಿರೋಧವಾಗಿ ಅಮಾಲೇಕ್ಯರ ಕೈಗಳು ಎತ್ತಿದ್ದರಿಂದ, ಯೆಹೋವ ದೇವರು ತಲತಲಾಂತರಗಳಲ್ಲಿ ಅಮಾಲೇಕ್ಯರ ವಿರುದ್ಧ ಯುದ್ಧಮಾಡುವರು,” ಎಂದನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು