Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 3 - ಕನ್ನಡ ಸಮಕಾಲಿಕ ಅನುವಾದ


ದೇವರ ನಂಬಿಗಸ್ತಿಕೆ

1 ಹಾಗಾದರೆ ಯೆಹೂದ್ಯರಾಗಿರುವುದರಿಂದ ಪ್ರಯೋಜನವೇನು? ಅಥವಾ ಸುನ್ನತಿಯಿಂದ ಲಾಭವೇನು?

2 ಎಲ್ಲಾ ವಿಷಯಗಳಲ್ಲಿಯೂ ಬಹಳ ಪ್ರಯೋಜನವಿದೆ. ಮೊದಲನೆಯದಾಗಿ ದೇವರ ವಾಕ್ಯಗಳು ಯೆಹೂದ್ಯರ ವಶಕ್ಕೆ ಒಪ್ಪಿಸಲಾಗಿವೆ.

3 ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರ ಅಪನಂಬಿಕೆಯು ದೇವರ ಪ್ರಾಮಾಣಿಕತೆಯನ್ನು ರದ್ದುಗೊಳಿಸುವುದೇ?

4 ಎಂದಿಗೂ ಹಾಗೆ ಆಗದಿರಲಿ. ಆದರೆ ಪ್ರತಿ ಮನುಷ್ಯನು ಸುಳ್ಳುಗಾರನಾದರೂ ದೇವರು ಸತ್ಯವಂತರೇ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ನೀನು ನಿನ್ನ ಮಾತುಗಳಲ್ಲಿಯೇ ನೀತಿವಂತನೆಂದು ನಿರ್ಣಯಿಸಲಾಗುವೆ. ನಿನ್ನ ಮೇಲೆ ತೀರ್ಪು ಮಾಡುವಾಗ ನೀನು ಜಯಿಸಬೇಕು.”

5 ಹೀಗೆ ನಮ್ಮ ಅನೀತಿಯೂ ದೇವರ ನೀತಿಯನ್ನು ಪ್ರಸಿದ್ಧಿಗೆ ತರುವುದಾದರೆ, ಕೋಪವನ್ನು ಸುರಿಸುವ ದೇವರು ಅನ್ಯಾಯಗಾರರೇನು? ನಾನು ಮಾನವ ರೀತಿಯಲ್ಲಿ ಮಾತನಾಡಿದ್ದೇನೆ.

6 ಎಂದಿಗೂ ಹಾಗೆ ಆಗದಿರಲಿ. ದೇವರು ಅನ್ಯಾಯಗಾರರಾಗಿದ್ದರೆ ಲೋಕಕ್ಕೆ ನ್ಯಾಯತೀರಿಸುವುದು ಹೇಗೆ?

7 “ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೊಂಡು ಅವರ ಮಹಿಮೆಯನ್ನು ಹೆಚ್ಚಿಸುವುದಾದರೆ ನನಗೆ ಪಾಪಿಯೆಂದು ಇನ್ನು ತೀರ್ಪಾಗುವುದು ಏಕೆ?”

8 “ಒಳ್ಳೆಯದಾಗುವಂತೆ ಕೆಟ್ಟದ್ದನ್ನು ಮಾಡೋಣ,” ಎಂದು ನಾವು ಹೇಳುತ್ತಿರುವುದಾಗಿ, ಕೆಲವರು ನಮ್ಮ ಬಗ್ಗೆ ದೂಷಿಸಿ ಹೇಳುವ ಪ್ರಕಾರ ನಾವೇಕೆ ಹೇಳಬಾರದು? ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯವೇ!


ಯಾರೂ ನೀತಿವಂತರಲ್ಲ

9 ಹಾಗಾದರೆ ಏನು? ಯೆಹೂದ್ಯರಾದ ನಾವು ಯೆಹೂದ್ಯರಲ್ಲದವರಿಗಿಂತಲೂ ಶ್ರೇಷ್ಠರೋ? ಎಂದಿಗೂ ಇಲ್ಲವಲ್ಲ. ಯೆಹೂದ್ಯರಾಗಲಿ, ಯೆಹೂದ್ಯರಲ್ಲದವರಾಗಲಿ ಎಲ್ಲರೂ ಪಾಪದ ಶಕ್ತಿಗೆ ಒಳಗಾದವರೆಂದು ನಾವು ಈಗಾಗಲೇ ತೋರಿಸಿದ್ದೇವೆ.

10 ಪವಿತ್ರ ವೇದಗಳಲ್ಲಿ ಬರೆದಿರುವಂತೆ: “ನೀತಿವಂತನು ಇಲ್ಲ, ಒಬ್ಬನೂ ಇಲ್ಲ.

11 ಅರ್ಥಮಾಡಿಕೊಳ್ಳುವವನು ಒಬ್ಬನೂ ಇಲ್ಲ. ದೇವರನ್ನು ಹುಡುಕುವವನು ಒಬ್ಬನೂ ಇಲ್ಲ.

12 ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಲಸಕ್ಕೆ ಬಾರದವರಾಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ ಒಬ್ಬನಾದರೂ ಇಲ್ಲ.”

13 “ಅವರ ಗಂಟಲುಗಳು ತೆರೆದ ಸಮಾಧಿಗಳು. ಅವರ ನಾಲಿಗೆಯು ವಂಚನೆಯನ್ನು ನುಡಿಯುತ್ತದೆ.” “ಅವರ ತುಟಿಗಳಲ್ಲಿ ಹಾವಿನ ವಿಷವಿದೆ.”

14 “ಅವರ ಬಾಯಿ ಶಾಪದಿಂದಲೂ ಕಹಿಯಿಂದಲೂ ತುಂಬಿರುತ್ತವೆ.”

15 “ಅವರ ಕಾಲುಗಳು ರಕ್ತಪಾತಕ್ಕೆ ಆತುರಗೊಂಡಿವೆ.

16 ನಾಶ, ಸಂಕಟಗಳು ಅವರ ಮಾರ್ಗಗಳಲ್ಲಿ ಹಿಂಬಾಲಿಸುತ್ತವೆ.

17 ಸಮಾಧಾನದ ಮಾರ್ಗವನ್ನೇ ಅವರು ಅರಿಯರು.”

18 “ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ.”

19 ನಿಯಮವು ಏನೇ ಹೇಳುವುದಾದರೂ ಅದು ನಿಯಮಕ್ಕೆ ಒಳಪಟ್ಟಿರುವವರಿಗೇ ಅನ್ವಯವಾಗುವುದೆಂದು ನಾವು ಬಲ್ಲೆವು. ಹೀಗೆ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಲೋಕವೆಲ್ಲಾ ದೇವರ ತೀರ್ಪಿಗೆ ಒಳಗಾಗಿರುವುದು.

20 ಆದ್ದರಿಂದ ಯಾರೂ ದೇವರ ದೃಷ್ಟಿಯಲ್ಲಿ ನಿಯಮದ ಕೃತ್ಯಗಳಿಂದ ನೀತಿವಂತರೆಂದು ನಿರ್ಣಯಿಸಲಾಗುವುದಿಲ್ಲ. ನಿಯಮದಿಂದ ಪಾಪದ ಪ್ರಜ್ಞೆ ಉಂಟಾಗುತ್ತದಷ್ಟೆ.


ನಂಬಿಕೆಯ ಮೂಲಕ ನೀತಿವಂತರೆಂಬ ನಿರ್ಣಯ

21 ಆದರೆ ಈಗ ನಿಯಮವಿಲ್ಲದೆ ದೇವರ ನೀತಿಯು ಪ್ರಕಟವಾಗಿದೆ. ಅದಕ್ಕೆ ನಿಯಮವೂ ಪ್ರವಾದಿಗಳೂ ಸಾಕ್ಷಿಕೊಡುತ್ತಾರೆ.

22 ದೇವರ ನೀತಿಯು ನಂಬುವವರೆಲ್ಲರಿಗೆ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಡುವುದರ ಮೂಲಕ ಲಭಿಸುತ್ತದೆ. ಇಲ್ಲಿ ಯಾವ ಭೇದವೂ ಇರುವುದಿಲ್ಲ.

23 ಏಕೆಂದರೆ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.

24 ಆದರೆ ಕ್ರಿಸ್ತ ಯೇಸುವಿನಲ್ಲಿ ಬಂದ ವಿಮೋಚನೆಯ ಮೂಲಕ ಅವರು ದೇವರ ಕೃಪೆಯಿಂದ ಉಚಿತವಾಗಿ ನೀತಿವಂತರೆಂದು ನಿರ್ಣಯ ಹೊಂದುತ್ತಾರೆ.

25 ಇದನ್ನು ನಂಬಿಕೆಯಿಂದ ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೊರಕುವಂತೆ ದೇವರು ಕ್ರಿಸ್ತ ಯೇಸುವನ್ನು ನಮಗಾಗಿ ಪ್ರಾಯಶ್ಚಿತ್ತ ಬಲಿಯಾಗಿ ಒಪ್ಪಿಸಿದರು. ದೇವರು ಹಿಂದಿನ ಕಾಲದಲ್ಲಿ ಜನರು ಮಾಡಿರುವ ಪಾಪಗಳನ್ನು ದಂಡಿಸದೆ ತಮ್ಮ ನೀತಿಯನ್ನು ತೋರಿಸಿಕೊಡುವುದಕ್ಕಾಗಿಯೂ

26 ಈಗಿನ ಕಾಲದಲ್ಲಿ ದೇವರು ತಮ್ಮ ನೀತಿಯನ್ನು ತೋರ್ಪಡಿಸಲೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕಾಗಿಯೂ ದೀರ್ಘಶಾಂತರಾಗಿದ್ದಾರೆ.

27 ಹಾಗಾದರೆ, ನಾವು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವೆಲ್ಲಿ? ಆಸ್ಪದವೇ ಇಲ್ಲ. ನೀತಿವಂತರೆಂಬ ನಿರ್ಣಯ ನಿಯಮದಿಂದಲೋ? ಕ್ರಿಯೆಗಳಿಂದಲೋ? ಇಲ್ಲ, ಅದು ಇಲ್ಲದೆ ಹೋಯಿತು. ಅದು ನಂಬಿಕೆಯ ನಿಯಮದಿಂದಲೇ.

28 ಏಕೆಂದರೆ ನಿಯಮವನ್ನು ಕೈಕೊಳ್ಳುವುದರಿಂದಲೇ. ನಂಬಿಕೆಯಿಂದಲೇ ಒಬ್ಬ ಮನುಷ್ಯನು ನೀತಿವಂತನೆಂದು ನಿರ್ಣಯ ಹೊಂದುತ್ತಾನೆಂದು ಎಣಿಸುತ್ತೇವೆ.

29 ದೇವರು ಯೆಹೂದ್ಯರಿಗೆ ಮಾತ್ರ ದೇವರೋ? ದೇವರು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿರುವುದಿಲ್ಲವೋ? ಹೌದು, ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾರೆ.

30 ಸುನ್ನತಿಯವರಿಗೂ ಸುನ್ನತಿಯಿಲ್ಲದವರಿಗೂ ಒಂದೇ ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ.

31 ಹಾಗಾದರೆ, ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ. ಹಾಗಾದರೆ, ನಾವು ನಂಬಿಕೆಯ ಮೂಲಕ ನಿಯಮವನ್ನು ನಿರರ್ಥಕಗೊಳಿಸುತ್ತೇವೋ? ಎಂದಿಗೂ ಇಲ್ಲ. ನಾವು ನಿಯಮವನ್ನು ಸ್ಥಿರಪಡಿಸುತ್ತೇವಷ್ಟೇ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು