ಯೋಹಾನ 17 - ಕನ್ನಡ ಸಮಕಾಲಿಕ ಅನುವಾದಯೇಸು ಮಹಿಮೆಗಾಗಿ ಪ್ರಾರ್ಥಿಸಿದ್ದು 1 ಯೇಸು ಇಷ್ಟೆಲ್ಲಾ ಮಾತನಾಡಿ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ, “ತಂದೆಯೇ, ಸಮಯ ಬಂದಿದೆ. ನಿಮ್ಮ ಪುತ್ರನು ನಿಮ್ಮನ್ನು ಮಹಿಮೆಪಡಿಸುವುದಕ್ಕಾಗುವಂತೆ ಆತನನ್ನು ಮಹಿಮೆಪಡಿಸಿರಿ. 2 ನೀವು ಎಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವಿರಿ. 3 ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವ. 4 ಮಾಡಬೇಕೆಂದು ನೀವು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಮಿಯ ಮೇಲೆ ನಾನು ನಿಮ್ಮನ್ನು ಮಹಿಮೆಪಡಿಸಿದ್ದೇನೆ. 5 ತಂದೆಯೇ, ಲೋಕವು ಉಂಟಾಗುವದಕ್ಕಿಂತ ಮುಂಚೆ ನಿಮ್ಮೊಡನೆ ನನಗಿದ್ದ ಮಹಿಮೆಯಿಂದ ಈಗ ನೀವು ನನ್ನನ್ನು ಮಹಿಮೆಪಡಿಸಿರಿ. ಯೇಸು ಶಿಷ್ಯರಿಗಾಗಿ ಪ್ರಾರ್ಥಿಸಿದ್ದು 6 “ಲೋಕದೊಳಗಿಂದ ನೀವು ನನಗೆ ಕೊಟ್ಟ ಈ ನನ್ನ ಶಿಷ್ಯರಿಗೆ ನಾನು ನಿಮ್ಮ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ನೀವು ಇವರನ್ನು ನನಗೆ ಕೊಟ್ಟಿದ್ದೀರಿ. ಇವರು ನಿಮ್ಮ ವಾಕ್ಯವನ್ನು ಕೈಗೊಂಡಿದ್ದಾರೆ. 7 ನೀವು ನನಗೆ ಕೊಟ್ಟಿದ್ದೆಲ್ಲವೂ ನಿಮ್ಮಿಂದಲೇ ಬಂದಿವೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ. 8 ಏಕೆಂದರೆ ನೀವು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ, ಇವರು ಅಂಗೀಕರಿಸಿದ್ದಾರೆ ಮತ್ತು ನಾನು ನಿಮ್ಮ ಬಳಿಯಿಂದ ಬಂದವನೆಂದು ಇವರು ನಿಶ್ಚಯವಾಗಿ ತಿಳಿದು, ನೀವೇ ನನ್ನನ್ನು ಕಳುಹಿಸಿದ್ದೀರಿ, ಎಂದು ನಂಬಿದ್ದಾರೆ. 9 ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ನೀವು ನನಗೆ ಕೊಟ್ಟವರಿಗಾಗಿಯೇ ಹೊರತು ನಾನು ಲೋಕಕ್ಕಾಗಿ ಬೇಡಿಕೊಳ್ಳುವುದಿಲ್ಲ. ಏಕೆಂದರೆ ಇವರು ನಿಮ್ಮವರು. 10 ನನ್ನದೆಲ್ಲವೂ ನಿಮ್ಮದೇ. ನಿಮ್ಮದೆಲ್ಲವೂ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ. 11 ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತೇನೆ. ಪರಿಶುದ್ಧ ತಂದೆಯೇ, ನಾವು ಒಂದಾಗಿರುವಂತೆಯೇ ಇವರೂ ಒಂದಾಗಿರಬೇಕೆಂದು ನೀವು ನನಗೆ ಕೊಟ್ಟ ನಿಮ್ಮ ಹೆಸರಿನ ಶಕ್ತಿಯಿಂದ ಇವರನ್ನು ಕಾಪಾಡಿರಿ. 12 ನಾನು ಇವರೊಡನೆ ಇದ್ದಾಗ ನೀವು ನನಗೆ ಕೊಟ್ಟ ನಿಮ್ಮ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಪವಿತ್ರ ವಾಕ್ಯವು ನೆರವೇರುವಂತೆ ಆ ನಾಶದ ಮಗನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ. 13 “ಈಗ ನಾನು ನಿಮ್ಮ ಬಳಿಗೆ ಬರುತ್ತೇನೆ. ನನ್ನ ಆನಂದವು ಅವರಲ್ಲಿ ಪರಿಪೂರ್ಣವಾಗುವಂತೆ ನಾನು ಲೋಕದಲ್ಲಿ ಇದ್ದು ಇವೆಲ್ಲವನ್ನು ಮಾತನಾಡುತ್ತೇನೆ. 14 ನಾನು ನಿಮ್ಮ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ. ಇವರು ನನ್ನಂತೆ ಲೋಕದವರಲ್ಲದ ಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ. 15 ನೀವು ಇವರನ್ನು ಲೋಕದಿಂದ ತೆಗೆಯಬೇಕೆಂದು ಬೇಡಿಕೊಳ್ಳದೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. 16 ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ. 17 ನೀವು ಸತ್ಯದಿಂದ ಇವರನ್ನು ಸಮರ್ಪಿಸಿರಿ. ನಿಮ್ಮ ವಾಕ್ಯವೇ ಸತ್ಯವು. 18 ನೀವು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ. 19 ಇವರು ನಿಜವಾಗಿಯೂ ಸಮರ್ಪಿತರಾಗಬೇಕೆಂದು ನನ್ನನ್ನು ನಾನೇ ಇವರಿಗೋಸ್ಕರ ಸಮರ್ಪಿಸಿಕೊಳ್ಳುತ್ತೇನೆ. ಯೇಸು ಎಲ್ಲಾ ವಿಶ್ವಾಸಿಗಳಿಗಾಗಿ ಪ್ರಾರ್ಥಿಸಿದ್ದು 20 “ಆದರೆ ಇವರಿಗಾಗಿ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನಲ್ಲಿ ನಂಬುವವರಿಗಾಗಿಯೂ ಬೇಡಿಕೊಳ್ಳುತ್ತೇನೆ. 21 ತಂದೆಯೇ, ನೀವು ನನ್ನನ್ನು ಕಳುಹಿಸಿದ್ದೀರಿ ಎಂದು ಲೋಕವು ನಂಬುವುದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವ ಹಾಗೆಯೇ ಅವರು ಸಹ ನಮ್ಮಲ್ಲಿ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ. 22 ನಾವು ಒಂದಾಗಿರುವ ಹಾಗೆಯೇ ಇವರೂ ಒಂದಾಗಿರುವಂತೆ ನೀವು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. 23 ಹೀಗೆ ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣವಾಗಿರಲಿ. ಆಗ ನೀವು ನನ್ನನ್ನು ಕಳುಹಿಸಿದ್ದೀರಿ ಎಂದೂ ನನ್ನನ್ನು ಪ್ರೀತಿಸಿದಂತೆ ಇವರನ್ನು ನೀವು ಪ್ರೀತಿಸಿದ್ದೀರಿ ಎಂದೂ ಲೋಕವು ತಿಳಿದುಕೊಳ್ಳುವುದು. 24 “ತಂದೆಯೇ, ನೀವು ನನಗೆ ಕೊಟ್ಟವರು ನಾನಿರುವಲ್ಲಿಯೇ ನನ್ನೊಂದಿಗೆ ಇದ್ದುಕೊಂಡು ಜಗದುತ್ಪತ್ತಿಗೆ ಮುಂಚೆ ನೀವು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ಇವರು ಕಾಣಬೇಕೆಂದು ನಾನು ಅಪೇಕ್ಷಿಸುತ್ತೇನೆ. 25 “ನೀತಿಯುಳ್ಳ ತಂದೆಯೇ, ಲೋಕವು ನಿಜವಾಗಿಯೂ ನಿಮ್ಮನ್ನು ತಿಳಿಯಲಿಲ್ಲ. ಆದರೆ ನಾನು ನಿಮ್ಮನ್ನು ತಿಳಿದಿದ್ದೇನೆ ಮತ್ತು ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ಇವರು ತಿಳಿದಿದ್ದಾರೆ. 26 ನೀವು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಇವರಲ್ಲಿ ಇರಬೇಕೆಂತಲೂ ನಾನು ಅವರಲ್ಲಿ ಇರುವಂತೆಯೂ ನಾನು ಅವರಿಗೆ ನಿಮ್ಮ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು,” ಎಂದರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.