Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಹಾನ 14 - ಕನ್ನಡ ಸಮಕಾಲಿಕ ಅನುವಾದ


ಯೇಸುಸ್ವಾಮಿಯ ಆದರಣೆಯ ಮಾತುಗಳು

1 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ನೀವು ದೇವರನ್ನು ನಂಬಿರಿ; ನನ್ನನ್ನೂ ನಂಬಿರಿ.

2 ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ. ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು. ನಾನು ನಿಮಗಾಗಿ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ.

3 ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಮಾಡಿದ ಮೇಲೆ ಪುನಃ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಆಗ ನಾನಿರುವಲ್ಲಿ ನೀವು ಸಹ ಇರುವಿರಿ.

4 ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದಿದೆ,” ಎಂದರು.


ತಂದೆಯನ್ನು ಸೇರುವುದಕ್ಕೆ ಯೇಸುವೇ ಮಾರ್ಗ

5 ಆಗ ತೋಮನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರೋ ನಮಗೆ ತಿಳಿಯದು. ಆದ್ದರಿಂದ ನಮಗೆ ಮಾರ್ಗವು ಹೇಗೆ ತಿಳಿದೀತು?” ಎಂದನು.

6 ಯೇಸು ಅವನಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರಲಾರರು.

7 ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿಯುತ್ತಿದ್ದೀರಿ. ಈಗಿನಿಂದ ನೀವು ತಂದೆಯನ್ನು ತಿಳಿದಿದ್ದೀರಿ ಮತ್ತು ಅವರನ್ನು ಕಂಡಿದ್ದೀರಿ,” ಎಂದು ಹೇಳಿದರು.

8 ಅದಕ್ಕೆ ಫಿಲಿಪ್ಪನು, “ಸ್ವಾಮೀ, ತಂದೆಯನ್ನು ನಮಗೆ ತೋರಿಸಿರಿ, ನಮಗೆ ಅಷ್ಟೇ ಸಾಕು,” ಎಂದನು.

9 ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟುಕಾಲ ನಿಮ್ಮೊಂದಿಗೆ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲ. ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ಹಾಗಾದರೆ, ‘ತಂದೆಯನ್ನು ನಮಗೆ ತೋರಿಸಿರಿ’ ಎಂದು ನೀನು ಕೇಳುವುದು ಹೇಗೆ?

10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾರೆ ಎಂದು ನೀನು ನಂಬುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವುದಿಲ್ಲ; ನನ್ನಲ್ಲಿರುವ ತಂದೆಯೇ ತಮ್ಮ ಕ್ರಿಯೆಗಳನ್ನು ಮಾಡುತ್ತಾರೆ.

11 ನಾನು ತಂದೆಯಲ್ಲಿಯೂ ತಂದೆಯು ನನ್ನಲ್ಲಿಯೂ ಇದ್ದಾರೆಂದು ಹೇಳುವಾಗ ನೀವು ನನ್ನನ್ನು ನಂಬಿರಿ, ಇಲ್ಲದಿದ್ದರೆ ಆ ಕ್ರಿಯೆಗಳನ್ನಾದರೂ ನೀವು ನಂಬಿರಿ.

12 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಾನು ಮಾಡುವ ಕ್ರಿಯೆಗಳನ್ನು ತಾವು ಸಹ ಮಾಡುವರು. ಇವುಗಳಿಗಿಂತ ಮಹತ್ತಾದವುಗಳನ್ನು ಅವರು ಮಾಡುವರು. ಏಕೆಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.

13 ನನ್ನ ಹೆಸರಿನಲ್ಲಿ ನೀವು ಏನೇನು ಕೇಳಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ತಂದೆಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು.

14 ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು.


ಪರಿಶುದ್ಧಾತ್ಮರನ್ನು ಕುರಿತು ಯೇಸು ವಾಗ್ದಾನ ಮಾಡಿದ್ದು

15 “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಅನುಸರಿಸುವಿರಿ.

16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ತಂದೆ ನಿಮಗೆ ಬೇರೊಬ್ಬ ಸಹಾಯಕರನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕೊಡುವರು.

17 ಅವರೇ ಸತ್ಯದ ಆತ್ಮರಾಗಿದ್ದಾರೆ. ಲೋಕವು ಅವರನ್ನು ನೋಡದೆಯೂ ತಿಳಿಯದೆಯೂ ಇರುವುದರಿಂದ ಸತ್ಯದ ಆತ್ಮರಾಗಿರುವ ಅವರನ್ನು ಸ್ವೀಕರಿಸಲಾರದು. ನೀವು ಅವರನ್ನು ಬಲ್ಲಿರಿ. ಏಕೆಂದರೆ ಅವರು ನಿಮ್ಮೊಂದಿಗಿರುವರು ಮತ್ತು ನಿಮ್ಮೊಳಗೂ ನೆಲೆಸಿರುವರು.

18 ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ. ನಿಮ್ಮ ಬಳಿಗೆ ನಾನು ಬರುತ್ತೇನೆ.

19 ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ಕಾಣುವುದಿಲ್ಲ. ಆದರೆ ನೀವು ನನ್ನನ್ನು ಕಾಣುವಿರಿ. ಏಕೆಂದರೆ ನಾನು ಜೀವಿಸುವುದರಿಂದ ನೀವು ಸಹ ಜೀವಿಸುವಿರಿ.

20 ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.

21 ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಗೊಳ್ಳುವವರೇ ನನ್ನನ್ನು ಪ್ರೀತಿಸುವವರು. ನನ್ನನ್ನು ಪ್ರೀತಿಸುವವನು ತನ್ನ ತಂದೆಗೆ ಪ್ರಿಯನಾಗಿರುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಿಸಿಕೊಳ್ಳುವೆನು,” ಎಂದು ಹೇಳಿದರು.

22 ಇಸ್ಕರಿಯೋತ ಅಲ್ಲದ ಮತ್ತೊಬ್ಬ ಯೂದನು, “ಸ್ವಾಮೀ, ನೀವು ಲೋಕಕ್ಕೆ ಪ್ರಕಟವಾಗದೆ ನಮಗೆ ಮಾತ್ರ ಪ್ರಕಟವಾಗುವುದು ಏಕೆ?” ಎಂದು ಕೇಳಿದನು.

23 ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ವಾಕ್ಯವನ್ನು ಕೈಗೊಳ್ಳುವನು. ನನ್ನ ತಂದೆಯು ಅವನನ್ನು ಪ್ರೀತಿಸುವರು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಿವಾಸಮಾಡಿಕೊಳ್ಳುವೆವು.

24 ನನ್ನನ್ನು ಪ್ರೀತಿಸದವನು ನನ್ನ ವಾಕ್ಯಗಳನ್ನು ಕೈಗೊಳ್ಳುವುದಿಲ್ಲ. ನೀವು ಕೇಳಿದ ವಾಕ್ಯವು ನನ್ನ ವಾಕ್ಯಗಳಲ್ಲ. ಅವು ನನ್ನನ್ನು ಕಳುಹಿಸಿದ ನನ್ನ ತಂದೆಯ ವಾಕ್ಯಗಳಾಗಿವೆ.

25 “ನಾನು ಇನ್ನೂ ನಿಮ್ಮೊಡನೆ ಇರುವಾಗಲೇ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ.

26 ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಸಹಾಯಕ ‘ಪವಿತ್ರಾತ್ಮರು’ ಎಲ್ಲವನ್ನೂ ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.

27 ನಾನು ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ. ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಅಂಜದಿರಲಿ.

28 “ ‘ನಾನು ಹೋಗಿ ತಿರುಗಿ ನಿಮ್ಮ ಬಳಿಗೆ ಬರುತ್ತೇನೆ,’ ಎಂದು ನಾನು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ತಂದೆಯ ಬಳಿಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಸಂತೋಷ ಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವರು.

29 ಅದು ನಡೆಯುವಾಗ ನೀವು ನಂಬುವಂತೆ ಇದೆಲ್ಲಾ ನಡೆಯುವುದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.

30 ಇನ್ನು ಮೇಲೆ ನಾನು ನಿಮ್ಮೊಂದಿಗೆ ಹೆಚ್ಚು ವಿಷಯಗಳನ್ನು ಮಾತನಾಡುವುದಿಲ್ಲ. ಏಕೆಂದರೆ ಇಹಲೋಕದ ಅಧಿಪತಿಯು ಬರಲಿದ್ದಾನೆ. ನನ್ನಲ್ಲಿ ಅವನಿಗೆ ಸೇರಿದ್ದು ಒಂದೂ ಇರುವುದಿಲ್ಲ.

31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆಂದು ಲೋಕವು ತಿಳಿಯುವಂತೆ ತಂದೆ ನನಗೆ ಆಜ್ಞಾಪಿಸಿದಂತೆಯೇ ನಾನು ಮಾಡುತ್ತೇನೆ. “ಏಳಿರಿ, ನಾವು ಇಲ್ಲಿಂದ ಹೋಗೋಣ,” ಎಂದರು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು