ಯೋಬ 7 - ಕನ್ನಡ ಸಮಕಾಲಿಕ ಅನುವಾದ1 “ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ? 2 ಗುಲಾಮನು ಸಾಯಂಕಾಲದ ನೆರಳನ್ನು ಅಪೇಕ್ಷಿಸುವ ಪ್ರಕಾರವೂ, ನಾನು ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾರವೂ ಇದ್ದೇನೆ. 3 ನನಗೆ ನಿರರ್ಥಕತೆಯ ತಿಂಗಳುಗಳನ್ನು ನೀಡಲಾಗಿದೆ; ಬೇಸರಿಕೆಯ ರಾತ್ರಿಗಳು ನನಗೆ ನೇಮಕವಾಗಿವೆ. 4 ಮಲಗುವ ವೇಳೆಯಲ್ಲಿ, ‘ಯಾವಾಗ ಏಳುವೆನೋ?’ ಅಂದುಕೊಳ್ಳುವೆನು, ರಾತ್ರಿ ಬೆಳೆಯುತ್ತಾ ಹೋಗುತ್ತದೆ; ಉದಯದವರೆಗೂ ಹೊರಳಿ ಹೊರಳಿ ಸಾಕಾಗುತ್ತದೆ. 5 ನನ್ನ ದೇಹವು ಹುಳಹಕ್ಕಳೆಗಳನ್ನೂ ಧರಿಸಿಕೊಂಡಿದೆ; ನನ್ನ ಚರ್ಮವು ಕಜ್ಜಿಯಿಂದ ಬಿರಿದು ಹೋಗಿದೆ. 6 “ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ದಿನಗಳು ನಿರೀಕ್ಷೆ ಇಲ್ಲದೆ ಮುಗಿಯುತ್ತವೆ. 7 ಓ ದೇವರೇ, ನನ್ನ ಜೀವವು ಕೇವಲ ಉಸಿರೆಂದು ನೆನಪುಮಾಡಿಕೊಳ್ಳಿರಿ. ನನ್ನ ಕಣ್ಣು ತಿರುಗಿ ಸಂತೋಷವನ್ನು ಕಾಣುವುದಿಲ್ಲ. 8 ನನ್ನನ್ನು ನೋಡುವವನ ಕಣ್ಣು, ಇನ್ನು ಮೇಲೆ ನನ್ನನ್ನು ನೋಡದು; ನೀವು ನನ್ನನ್ನು ನೋಡಿದರೂ, ನಾನು ಬದುಕಿರುವುದಿಲ್ಲ. 9 ಮೋಡವು ಕರಗಿ ಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು. 10 ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವುದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು. 11 “ಆದ್ದರಿಂದ ನಾನು ನನ್ನ ಬಾಯಿ ಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತಾಡುವೆನು, ನನ್ನ ಆತ್ಮದ ಕಹಿಯಲ್ಲಿ ನಾನು ವಾದಿಸುವೆನು. 12 ನೀವು ನನಗೆ ಕಾವಲಿಡುವುದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಿಲವೋ? 13 ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು; ನನ್ನ ಮಂಚವು ನನ್ನ ಚಿಂತೆಯನ್ನು ಶಮನ ಮಾಡಲಿ ಎಂದುಕೊಳ್ಳುವಾಗ, 14 ನೀವು ಸ್ವಪ್ನಗಳಿಂದ ನನ್ನನ್ನು ಹೆದರಿಸುತ್ತೀರಿ; ದರ್ಶನಗಳಿಂದ ನನ್ನನ್ನು ಭಯಪಡಿಸುತ್ತೀರಿ. 15 ಆದ್ದರಿಂದ ನನ್ನ ದೇಹದಲ್ಲಿ ಸಂಕಟಪಡುವುದಕ್ಕಿಂತಲೂ ಉಸಿರುಕಟ್ಟಿ, ನಾನು ನನ್ನ ಪ್ರಾಣಬಿಡುವುದು ಲೇಸು. 16 ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ; ನಿರಂತರ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟುಬಿಡಿರಿ; ನನ್ನ ಬಾಳಿನ ದಿನಗಳಿಗೆ ಅರ್ಥವಿಲ್ಲ. 17 “ದೇವರೇ, ಮಾನವನು ಎಷ್ಟರವನು? ನೀವು ಮಾನವನಿಗೆ ಬಹು ಗೌರವ ಕೊಡುತ್ತೀರಿ, ಅವನ ಕಡೆಗೆ ಗಮನಹರಿಸುತ್ತೀರಿ. 18 ಮನುಷ್ಯನನ್ನು ಪ್ರತಿ ಉದಯದಲ್ಲಿ ವಿಚಾರಿಸುತ್ತೀರಿ, ನೀವು ಕ್ಷಣಕ್ಷಣಕ್ಕೆ ಅವನನ್ನು ಪರೀಕ್ಷಿಸುವುದೇಕೆ? 19 ನೀವು ನನ್ನ ಕಡೆಯಿಂದ ದೃಷ್ಟಿಯನ್ನು ತೊಲಗಿಸುವುದಿಲ್ಲವೋ? ನಾನು ಒಂದು ಕ್ಷಣ ಉಗುಳು ನುಂಗುವುದಕ್ಕೂ ನನ್ನನ್ನು ಬಿಡುವುದಿಲ್ಲ? 20 ಮನುಷ್ಯರನ್ನು ಕಾಯುವವರೇ, ನಾನು ಪಾಪಮಾಡಿದ್ದರೆ, ನಾವು ಮಾಡುವ ಪ್ರತಿಯೊಂದನ್ನೂ ನೋಡುವವರೇ, ನಾನು ನಿಮಗೆ ಏನು ಮಾಡಿದೆ? ನಾನು ನಿಮಗೆ ಭಾರವಾಗಿದ್ದೇನೋ? ನನ್ನನ್ನು ನಿಮ್ಮ ಗುರಿಯಾಗಿ ಇಟ್ಟುಕೊಳ್ಳುವುದು ಏಕೆ? 21 ನೀವು ನನ್ನ ಅಪರಾಧವನ್ನು ಪರಿಹರಿಸಬಾರದೇ? ನನ್ನ ಪಾಪವನ್ನು ಕ್ಷಮಿಸಬಾರದೇ? ನಾನು ಬೇಗ ಮಣ್ಣಿಗೆ ಸೇರಿಬಿಡುವೆನು; ನೀವು ನನ್ನನ್ನು ಹುಡುಕಿದರೆ ನಾನು ಇರುವುದಿಲ್ಲ.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.