ಯೋಬ 33 - ಕನ್ನಡ ಸಮಕಾಲಿಕ ಅನುವಾದ1 “ಆದ್ದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು. ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ. 2 ಈಗ ನಾನು ಮಾತಾಡಲು ಪ್ರಾರಂಭಿಸಿದ್ದೇನೆ; ನನ್ನ ಮಾತುಗಳು ನನ್ನ ನಾಲಿಗೆಯ ತುದಿಯಲ್ಲಿವೆ. 3 ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುತ್ತವೆ; ನನ್ನ ತುಟಿಗಳು ನಾನು ತಿಳಿದುಕೊಂಡಿದ್ದನ್ನೇ ಯಥಾರ್ಥವಾಗಿ ಹೇಳುತ್ತವೆ. 4 ದೇವರ ಆತ್ಮರು ನನ್ನನ್ನು ಉಂಟುಮಾಡಿದರು. ಸರ್ವಶಕ್ತರ ಶ್ವಾಸವೇ ನನಗೆ ಜೀವವನ್ನು ಕೊಟ್ಟಿತು. 5 ನಿನಗೆ ಸಾಧ್ಯವಾದರೆ ನನಗೆ ಉತ್ತರಕೊಡು; ನನ್ನ ಎದುರಿನಲ್ಲೇ ನಿನ್ನ ವ್ಯಾಜ್ಯವನ್ನು ವಾದಿಸು. 6 ನೋಡು, ದೇವರ ದೃಷ್ಟಿಯಲ್ಲಿ ನಾನು ನಿನ್ನಂತೆಯೇ ಇದ್ದೇನೆ; ನಾನು ಸಹ ಜೇಡಿಮಣ್ಣಿನಿಂದ ರೂಪಿತವಾಗಿದ್ದೇನೆ. 7 ಆದ್ದರಿಂದ ನನ್ನ ಭೀತಿ ನಿನ್ನನ್ನು ಎಚ್ಚರಿಸದಿರಲಿ; ನನ್ನ ಒತ್ತಾಯ ನಿನ್ನ ಮೇಲೆ ಭಾರವಾಗಿರಬಾರದು. 8 “ನಿಶ್ಚಯವಾಗಿ, ನೀನು ಆಡಿದ್ದೆಲ್ಲಾ ನನ್ನ ಕಿವಿಗೆ ಬಿದ್ದಿವೆ. ನಾನೇ ಈ ರೀತಿಯಾಗಿ ನೀನು ಆಡಿದ ಮಾತುಗಳನ್ನು ಕೇಳಿದ್ದೇನೆ: 9 ‘ನಾನು ಶುದ್ಧನು, ನಾನು ತಪ್ಪುಮಾಡಲಿಲ್ಲ; ನಾನು ನಿರ್ದೋಷಿ, ನನ್ನಲ್ಲಿ ಏನೂ ಪಾಪವಿಲ್ಲ. 10 ಆದರೂ ದೇವರು ನನ್ನಲ್ಲಿ ತಪ್ಪು ಕಂಡುಹಿಡಿಯುತ್ತಿದ್ದಾರೆ; ದೇವರು ನನ್ನನ್ನು ಶತ್ರುವೆಂದು ಎಣಿಸುತ್ತಿದ್ದಾರೆ. 11 ದೇವರು ನನ್ನ ಕಾಲುಗಳಿಗೆ ಕೋಳ ಹಾಕಿದ್ದಾರೆ; ದೇವರು ನನ್ನ ಎಲ್ಲಾ ಹಾದಿಗಳನ್ನೂ ಪರಿಶೋಧಿಸುತ್ತಿದ್ದಾರೆ.’ 12 “ಹೀಗೆಲ್ಲಾ ನೀನು ಮಾತಾಡಿದ್ದು ಸರಿಯಲ್ಲವೆಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ದೇವರು ಮನುಷ್ಯರಿಗಿಂತ ಬಹಳ ದೊಡ್ಡವರು. 13 ದೇವರು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ಕೊಡಲಿಲ್ಲ ಎಂದು ನೀನು ದೇವರೊಂದಿಗೆ ವ್ಯಾಜ್ಯವಾಡುವುದೇಕೆ? 14 ಏಕೆಂದರೆ ದೇವರು ಮಾತನಾಡುತ್ತಾರೆ. ಹೌದು, ವಿವಿಧ ರೀತಿಯಿಂದ ಮಾತನಾಡುತ್ತಾರೆ; ಆದರೂ ಯಾರು ದೇವರ ಸ್ವರವನ್ನು ಗ್ರಹಿಸಿಕೊಳ್ಳುವುದಿಲ್ಲ. 15 ಸ್ವಪ್ನದಲ್ಲಿ, ರಾತ್ರಿಯ ದರ್ಶನದಲ್ಲಿ, ಗಾಢನಿದ್ರೆಯು ಮನುಷ್ಯರಿಗೆ ಬಂದಾಗ, ಹಾಸಿಗೆಯ ಮೇಲಿನ ತೂಕಡಿಕೆಗಳಲ್ಲಿ ಸಹ, 16 ದೇವರು ಮನುಷ್ಯರ ಕಿವಿಗಳನ್ನು ತೆರೆದು, ಎಚ್ಚರಿಕೆಗಳಿಂದ ಮುದ್ರೆಹಾಕಿ ಮಾತಾಡುತ್ತಾರೆ. 17 ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವದಕ್ಕೂ, ಅವನ ಗರ್ವವನ್ನು ಅಡಗಿಸುವುದಕ್ಕೂ ದೇವರು ಹಾಗೆ ಮಾಡುತ್ತಾರೆ. 18 ಮನುಷ್ಯನ ಪ್ರಾಣವನ್ನು ಕುಣಿಯಿಂದ ತಡೆಯುತ್ತಾರೆ, ಅವನ ಜೀವವನ್ನು ಖಡ್ಗದಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾರೆ. 19 “ಇದಲ್ಲದೆ ಮನುಷ್ಯನು ತನ್ನ ಹಾಸಿಗೆಯಲ್ಲಿ ನೋವಿನಿಂದ ಬಿದ್ದಿರುವಾಗ, ಅವನ ಎಲುಬುಗಳಿಗೆ ನೋವು ಉಂಟಾದಾಗ, ದೇವರು ಅವನನ್ನು ತಿದ್ದುತ್ತಾರೆ. 20 ಆಗ ಮನುಷ್ಯನು ತನ್ನ ಹಸಿವನ್ನು ಕಳೆದುಕೊಳ್ಳುತ್ತಾನೆ, ಅವನ ಜೀವಕ್ಕೆ ಸವಿ ಊಟವೂ ಅಸಹ್ಯವಾಗುವುದು. 21 ಅವನ ಶರೀರವು ಕಾಣದ ಹಾಗೆ ಸವೆಯುವುದು; ಕಾಣದಿದ್ದ ಅವನ ಎಲುಬುಗಳು ಸಹ ಬಯಲಾಗುತ್ತವೆ. 22 ಹೀಗೆ ಮನುಷ್ಯನ ಆತ್ಮವು ಸಮಾಧಿಗೆ ಸಮೀಪಿಸುವುದು. ಅವನ ಪ್ರಾಣವು ಸಾವಿನ ಸಂದೇಶವಾಹಕರ ಹತ್ತಿರವಾಗುವುದು. 23 ಆಗ ಸಹಸ್ರ ದೂತರಲ್ಲಿ ಒಬ್ಬನು ಮಧ್ಯಸ್ಥನಾಗಿ ಆ ಮನುಷ್ಯನ ಯಥಾರ್ಥತೆಯನ್ನು ತಿಳಿಸುವುದಕ್ಕೆ ಅವನ ಬಳಿಯಲ್ಲಿದ್ದರೆ, 24 ಆ ಮಧ್ಯಸ್ಥನು ಅವನನ್ನು ಕರುಣಿಸಿ ದೇವರಿಗೆ, ‘ಅಧೋಲೋಕವೆಂಬ ಕುಣಿಗೆ ಇಳಿಯುವುದರಿಂದ ಇವನನ್ನು ಕಾಪಾಡಿರಿ; ನಾನು ಇವನಿಗಾಗಿ ವಿಮೋಚನೆಯ ಕ್ರಯವನ್ನು ಕಂಡುಹಿಡಿದಿದ್ದೇನೆ. 25 ಅವನ ದೇಹವು ಮಗುವಿನ ದೇಹಕ್ಕಿಂತ ಮೃದುವಾಗಿರಲಿ; ಅವನು ಪುನಃ ತನ್ನ ಯೌವನದ ದಿನಗಳಿಗೆ ಹಿಂದಿರುಗಲಿ,’ ಎಂದು ಹೇಳುತ್ತಿದ್ದನು. 26 ಆಗ ಆ ಮನುಷ್ಯನು ದೇವರಿಗೆ ಪ್ರಾರ್ಥನೆಮಾಡುವನು; ದೇವರು ಅವನಿಗೆ ತಮ್ಮ ಮೆಚ್ಚುಗೆಯನ್ನು ನೀಡುವರು; ಅವನು ಆನಂದ ಧ್ವನಿಯಿಂದ ದೇವರ ಮುಖವನ್ನು ನೋಡುವನು; ದೇವರು ಅವನನ್ನು ನೀತಿವಂತನೆಂದು ಪುನಃಸ್ಥಾಪಿಸುವರು. 27 ಅವನು ಜನರ ಮುಂದೆ ಹಾಡುತ್ತಾ ಹೀಗೆ ಹೇಳುವನು: ‘ನಾನು ಪಾಪಮಾಡಿದೆ, ನ್ಯಾಯವನ್ನು ಬಿಟ್ಟು ನಡೆದೆ. ಆದರೂ ದೇವರು ನನ್ನ ಪಾಪಕ್ಕೆ ತಕ್ಕಂತೆ ದಂಡಿಸಲಿಲ್ಲ. ದೇವರು ಮುಯ್ಯಿತೀರಿಸಲಿಲ್ಲ, 28 ದೇವರು ನನ್ನನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾರೆ; ನಾನು ಜೀವ ಬೆಳಕನ್ನು ಆನಂದಿಸಲು ಬಾಳುವೆನು.’ 29 “ನೋಡು, ದೇವರು ಎರಡು ಸಾರಿಯಲ್ಲದೆ, ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮನುಷ್ಯರಿಗಾಗಿ ಮಾಡುವರು. 30 ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ ಬಂದು, ಜೀವ ಬೆಳಕನ್ನು ಅನುಭವಿಸುವಂತೆಯೇ ದೇವರು ಹೀಗೆ ಮಾಡುವರು. 31 “ಯೋಬನೇ, ನನ್ನ ಮಾತನ್ನು ಗಮನಕೊಟ್ಟು ಕೇಳು. ಮೌನವಾಗಿದ್ದು ಕೇಳು, ಈಗ ನಾನು ಮಾತನಾಡುತ್ತೇನೆ. 32 ನಿನಗೆ ಹೇಳುವುದಕ್ಕೆ ಏನಾದರೂ ಇದ್ದರೆ ಹೇಳು, ನನಗೆ ಉತ್ತರಕೊಡು, ಮಾತನಾಡು, ಏಕೆಂದರೆ ನಾನು ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ. 33 ಇಲ್ಲವಾದರೆ ನಾನು ಹೇಳುವುದನ್ನು ಕೇಳು; ಮೌನವಾಗಿರು, ಈಗ ನಾನು ನಿನಗೆ ಜ್ಞಾನವನ್ನು ಬೋಧಿಸುತ್ತೇನೆ.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.