Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 22 - ಕನ್ನಡ ಸಮಕಾಲಿಕ ಅನುವಾದ


ಎಲೀಫಜನ ವಾದ

1 ಆಮೇಲೆ ತೇಮಾನ್ಯನಾದ ಎಲೀಫಜನು ಹೀಗೆಂದನು:

2 “ಮನುಷ್ಯನಿಂದ ದೇವರಿಗೆ ಪ್ರಯೋಜನವೇನು? ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ?

3 ನೀನು ನೀತಿವಂತನಾಗಿದ್ದರೆ, ಸರ್ವಶಕ್ತರಿಗೆ ಮೆಚ್ಚಿಕೆಯೋ? ನಿನ್ನ ಮಾರ್ಗಗಳು ನಿರ್ದೋಷವಾಗಿದ್ದರೆ, ದೇವರಿಗೆ ಲಾಭವೇನು?

4 “ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?

5 ನಿನ್ನ ದುಷ್ಟತನವು ಬಹಳವಲ್ಲವೋ? ನಿನ್ನ ಪಾಪಗಳಿಗೆ ಅಂತ್ಯವೇ ಇಲ್ಲಾ.

6 ನೀನು ಕಾರಣವಿಲ್ಲದೆ ನಿನ್ನ ಸಹೋದರರಿಂದ ಈಡು ತೆಗೆದುಕೊಂಡಿದ್ದೀ; ಅವರ ವಸ್ತ್ರಗಳನ್ನು ಸಹ ನೀನು ಕಿತ್ತುಕೊಂಡಿರುವೆ.

7 ನೀನು ದಣಿದವರಿಗೆ ನೀರು ಕೊಡಲಿಲ್ಲ; ಹಸಿದವರಿಗೆ ಆಹಾರವನ್ನು ಬಡಿಸಲಿಲ್ಲ.

8 ನೀನು ಬಲಿಷ್ಠನಾಗಿದ್ದರೂ, ಜಮೀನು ಬಹಳವಾಗಿದ್ದರೂ, ಗೌರವಕ್ಕೆ ಯೋಗ್ಯನಾದ ಮನುಷ್ಯನಾಗಿ ಊರಲ್ಲಿ ವಾಸಿಸಿದರೂ,

9 ವಿಧವೆಯರನ್ನು ಬರಿದಾಗಿ ಕಳುಹಿಸಿಬಿಟ್ಟೆ; ದಿಕ್ಕಿಲ್ಲದವರ ತೋಳುಗಳನ್ನು ಮುರಿದುಬಿಟ್ಟೆ.

10 ಆದ್ದರಿಂದ ನಿನ್ನ ಸುತ್ತಲೂ ಉರುಲುಗಳು ಕಾದಿವೆ; ಹಠಾತ್ತಾಗಿ ಬರುವ ವಿಪತ್ತು ನಿನ್ನನ್ನು ತಲ್ಲಣಗೊಳಿಸುತ್ತದೆ.

11 ಇದಲ್ಲದೆ ನೀನು ಕಾಣದಷ್ಟು ಕತ್ತಲು ನಿನಗಿರುವುದು; ಜಲಪ್ರವಾಹವೂ ನಿನ್ನನ್ನು ಮುಳುಗಿಸುವುದು.

12 “ದೇವರು ಸ್ವರ್ಗದಲ್ಲಿ ಇದ್ದಾರಲ್ಲವೇ? ನಕ್ಷತ್ರಮಂಡಲವನ್ನು ನೋಡು, ಅವು ಎಷ್ಟು ಉನ್ನತ!

13 ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿರುವಾಗ ದೇವರು ನ್ಯಾಯತೀರಿಸಲು ಸಾಧ್ಯವೇ?

14 ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದ ದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ. ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ ಎಂದು ಹೇಳಿಕೊಂಡಿರುವೆ ಅಲ್ಲವೇ?

15 ದುಷ್ಟರು ಮೊದಲಿನಿಂದಲೂ ನಡೆದ ದಾರಿಯಲ್ಲಿ ನೀನು ನಡೆಯುವಿಯಾ?

16 ಅಕಾಲ ಮರಣವು ಅವರನ್ನು ಅಪಹರಿಸಿತು; ಅವರ ಅಡಿಪಾಯವು ಪ್ರವಾಹದಿಂದ ಕೊಚ್ಚಿಹೋಯಿತು.

17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು! ಸರ್ವಶಕ್ತ ನಮಗೇನು ಮಾಡಲು ಸಾಧ್ಯ?’ ಎಂದು ಹೇಳಿಕೊಳ್ಳುತ್ತಿದ್ದರು.

18 ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು. ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!

19 ನೀತಿವಂತರು ದುಷ್ಟರ ದುರ್ಗತಿಯನ್ನು ನೋಡಿ ಹಿಗ್ಗುವರು. ನಿರ್ದೋಷಿಗಳು ಹೀಗೆಂದು ದುಷ್ಟರನ್ನು ಅಣಕಿಸುವರು:

20 ‘ನಮಗೆ ವಿರುದ್ಧವಾಗಿ ಎದ್ದವರು ಹಾಳಾಗಿ ಹೋದರು. ಅವರ ಸೊತ್ತನ್ನು ಬೆಂಕಿಯು ನಾಶಮಾಡಿತು!’

21 “ದೇವರಿಗೆ ಅಧೀನವಾಗಿ, ದೇವರೊಂದಿಗೆ ಸಮಾಧಾನದಿಂದಿರು; ಇದರಿಂದ ನಿನಗೆ ಸಮೃದ್ಧಿ ಬರುವುದು.

22 ದೇವರ ಬಾಯಿಂದಲೇ ಶಿಕ್ಷಣವನ್ನು ಸ್ವೀಕರಿಸು; ದೇವರ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.

23 ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರಮಾಡಿ, ಸರ್ವಶಕ್ತರ ಕಡೆಗೆ ನೀನು ತಿರುಗಿಕೊಂಡರೆ, ನೀನು ಪುನಃಸ್ಥಾಪಿತವಾಗುವೆ.

24 ನೀನು ಬಂಗಾರವನ್ನು ಧೂಳಿನಂತೆಯೂ, ಓಫೀರ್ ದೇಶದ ಬಂಗಾರವನ್ನು ನದಿಯ ಕಲ್ಲುಗಳಂತೆಯೂ ಎಣಿಸು.

25 ಆಗ ಸರ್ವಶಕ್ತರು ನಿನಗೆ ಬಂಗಾರವಾಗಿರುವರು. ದೇವರು ನಿನಗೆ ಸಮೃದ್ಧಿಯಾದ ಬೆಳ್ಳಿಯೂ ಆಗಿರುವರು.

26 ನಿಶ್ಚಯವಾಗಿ ಸರ್ವಶಕ್ತರಲ್ಲಿ ನೀನು ಆನಂದಗೊಳ್ಳುವೆ. ನಿನ್ನ ಮುಖವನ್ನು ದೇವರ ಕಡೆಗೆ ಎತ್ತುವೆ.

27 ನೀನು ದೇವರಿಗೆ ಪ್ರಾರ್ಥನೆಮಾಡುವೆ, ನಿನ್ನ ಪ್ರಾರ್ಥನೆಯನ್ನು ದೇವರು ಕೇಳುವರು; ನೀನು ಮಾಡಿದ ಹರಕೆಗಳನ್ನು ಸಲ್ಲಿಸುವೆ.

28 ನೀನು ಏನಾದರೂ ನಿರ್ಣಯಿಸಿದ್ದರೆ, ಅದು ನಿನಗೆ ನೆರವೇರುವುದು ಮತ್ತು ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.

29 ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ‘ಮೇಲಕ್ಕೆ ಎತ್ತು!’ ಎಂದು ನೀನು ದೇವರಿಗೆ ಮೊರೆಯಿಡಲು, ದೇವರು ಬಿದ್ದವರನ್ನು ರಕ್ಷಿಸುವರು.

30 ನಿರ್ದೋಷಿಯಾಗಿ ಇಲ್ಲದವರನ್ನು ಸಹ ದೇವರು ವಿಮೋಚಿಸುತ್ತಾರೆ; ನಿನ್ನ ಕೈಗಳ ಶುದ್ಧತ್ವದಿಂದ ಅಂಥವರು ಬಿಡುಗಡೆಯಾಗುವರು.”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು