Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 2 - ಕನ್ನಡ ಸಮಕಾಲಿಕ ಅನುವಾದ

1 ಇನ್ನೊಂದು ದಿನ, ದೇವದೂತರು ಯೆಹೋವ ದೇವರ ಮುಂದೆ ಒಟ್ಟಾಗಿ ಸೇರಿ ಬಂದಿದ್ದರು. ಸೈತಾನನು ಸಹ ಅವರೊಂದಿಗೆ ಯೆಹೋವ ದೇವರ ಮುಂದೆ ಬಂದನು.

2 ಆಗ ಯೆಹೋವ ದೇವರು ಸೈತಾನನಿಗೆ, “ನೀನು ಎಲ್ಲಿಂದ ಬಂದೆ?” ಎಂದರು. ಸೈತಾನನು ಯೆಹೋವ ದೇವರಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗಾಡುತ್ತಾ ಇದ್ದು ಬಂದೆನು,” ಎಂದನು.

3 ಆಗ ಯೆಹೋವ ದೇವರು ಸೈತಾನನಿಗೆ, “ನನ್ನ ಸೇವಕ ಯೋಬನನ್ನು ಗಮನಿಸಿದೆಯಾ? ಅವನು ನಿರ್ದೋಷಿಯೂ, ಯಥಾರ್ಥನೂ, ದೇವರಿಗೆ ಭಯಪಡುವವನೂ, ಕೇಡನ್ನು ತೊರೆಯುವವನೂ ಆಗಿದ್ದಾನೆ. ಅವನ ಹಾಗೆ ಭೂಲೋಕದಲ್ಲಿ ಒಬ್ಬರೂ ಇಲ್ಲ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನಗೆ ಸೂಚಿಸಿದರೂ, ಅವನು ಇನ್ನೂ ತನ್ನ ಯಥಾರ್ಥತೆಯಲ್ಲಿ ದೃಢವಾಗಿದ್ದಾನೆ,” ಎಂದರು.

4 ಅದಕ್ಕೆ ಸೈತಾನನು, “ಚರ್ಮಕ್ಕೆ ಚರ್ಮ,” ಎಂದ ಹಾಗೆ, “ಒಬ್ಬ ಮನುಷ್ಯನು ತನ್ನ ಪ್ರಾಣ ಉಳಿಸಿಕೊಳ್ಳಲು ತನ್ನ ಸರ್ವಸ್ವವನ್ನೂ ಕೊಡುವನು.

5 ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು.

6 ಆಗ ಯೆಹೋವ ದೇವರು ಸೈತಾನನಿಗೆ, “ಹಾಗಾದರೆ ಅವನು ನಿನ್ನ ಕೈಯಲ್ಲಿ ಇದ್ದಾನೆ. ಅವನ ಪ್ರಾಣವನ್ನು ಮಾತ್ರ ಮುಟ್ಟಬಾರದು,” ಎಂದರು.

7 ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋಗಿ, ಯೋಬನಿಗೆ ಅಂಗಾಲಿನಿಂದ ನೆತ್ತಿಯವರೆಗೆ ಕೆಟ್ಟ ಹುಣ್ಣುಗಳು ಬರುವಂತೆ ಅವನನ್ನು ಬಾಧಿಸಿದನು.

8 ಯೋಬನು ಮುರಿದ ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯ ಮೇಲೆ ಕುಳಿತುಕೊಂಡನು.

9 ಆಗ ಯೋಬನ ಹೆಂಡತಿಯು ಅವನಿಗೆ, “ನೀನು ಇನ್ನೂ ಯಥಾರ್ಥತ್ವವನ್ನು ಬಿಡಲಿಲ್ಲವೇ? ದೇವರನ್ನು ಶಪಿಸಿ ಸತ್ತುಹೋಗು,” ಎಂದಳು.

10 ಆದರೆ ಯೋಬನು ಅವಳಿಗೆ, “ನೀನು ಹುಚ್ಚಳಂತೆ ಮಾತನಾಡುತ್ತಿರುವೆ? ನಾವು ದೇವರಿಂದ ಒಳ್ಳೆಯದನ್ನು ಹೊಂದಿದ್ದೇವೆ, ಕಷ್ಟವನ್ನು ಹೊಂದಬಾರದೋ?” ಎಂದನು. ಇವೆಲ್ಲವುಗಳಲ್ಲಿಯೂ ಪಾಪದ ಮಾತೊಂದೂ ಯೋಬನ ಬಾಯಿಂದ ಬರಲಿಲ್ಲ.

11 ಯೋಬನ ಮೂವರು ಸ್ನೇಹಿತರು, ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಅವನಿಗೆ ಬಂದ ಈ ಎಲ್ಲಾ ಕಷ್ಟನಷ್ಟವನ್ನು ಕುರಿತು ಕೇಳಿ, ಯೋಬನಿಗೆ ಸಂತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸುವುದಕ್ಕೆ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡು, ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.

12 ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.

13 ಅನಂತರ ಯೋಬನು ಅನುಭವಿಸುತ್ತಿದ್ದ ಬಾಧೆಯು ಎಷ್ಟು ಕ್ರೂರವೆಂದು ಅವರು ನೋಡಿ, ಅವನ ಸಂಗಡ ಏಳು ಹಗಲು, ಏಳು ರಾತ್ರಿ ನೆಲದ ಮೇಲೆ ಕುಳಿತುಕೊಂಡಿದ್ದರು. ಒಬ್ಬನಾದರೂ ಒಂದು ಮಾತನ್ನೂ ಯೋಬನಿಗೆ ಹೇಳಲಿಲ್ಲ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು