ಯೋಬ 19 - ಕನ್ನಡ ಸಮಕಾಲಿಕ ಅನುವಾದಯೋಬನ ಉತ್ತರ 1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ: 2 “ಎಷ್ಟರವರೆಗೆ ನನ್ನ ನೋಯಿಸಿ, ನನ್ನನ್ನು ಮಾತುಗಳಿಂದ ಜಜ್ಜುವಿರಿ? 3 ಈಗ ಹತ್ತು ಸಾರಿ ನನ್ನನ್ನು ನಿಂದಿಸಿದ್ದೀರಿ; ನಾಚಿಕೆಯಿಲ್ಲದೆ ನೀವು ನನ್ನ ಮೇಲೆ ಆಕ್ರಮಣ ಮಾಡುತ್ತೀರಿ. 4 ನಿಜವಾಗಿ ನಾನು ತಪ್ಪು ಮಾಡಿದ್ದರೆ ನಿಮಗೇನು? ನನ್ನ ತಪ್ಪು ನನ್ನ ಸಂಗಡ ಇರಲಿ. 5 ನೀವು ನನಗಿಂತ ಉತ್ತಮರು ಎಂದು ಭಾವಿಸುತ್ತಿದ್ದೀರಿ; ನನಗಾದ ಹೀನಸ್ಥಿತಿಯನ್ನು ನನಗೆ ವಿರೋಧವಾಗಿ ಉಪಯೋಗಿಸುತ್ತೀರಿ. 6 ದೇವರಿಂದಲೇ ನನಗೆ ಅನ್ಯಾಯವಾಗಿದೆ; ದೇವರು ತಮ್ಮ ಬಲೆಯನ್ನು ನನ್ನ ಮೇಲೆ ಬೀಸಿದ್ದಾರೆಂದು ನಿಮಗೆ ತಿಳಿದಿರಲಿ. 7 “ ‘ಹಿಂಸೆ,’ ಎಂದು ನಾನು ಕೂಗಿಕೊಂಡರೂ ನನಗೆ ಉತ್ತರ ಕೊಡುವವರಿಲ್ಲ; ಗಟ್ಟಿಯಾಗಿ ಮೊರೆಯಿಟ್ಟರೂ ನ್ಯಾಯ ದೊರಕುವುದಿಲ್ಲ. 8 ನಾನು ಮುಂದೆ ಹೋಗದಂತೆ ದೇವರು ನನ್ನ ದಾರಿಗೆ ಬೇಲಿ ಹಾಕಿದ್ದಾರೆ; ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾರೆ. 9 ದೇವರು ನನ್ನ ಘನತೆಯನ್ನು ತೆಗೆದುಹಾಕಿದ್ದಾರೆ; ನನ್ನ ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾರೆ. 10 ನನ್ನ ಸುತ್ತಲೂ ದಾಳಿಯಾಗಿದ್ದರಿಂದ, ನಾನು ಕ್ಷಯಿಸುತ್ತಿದ್ದೇನೆ; ಮರವನ್ನು ಕೀಳುವ ಹಾಗೆ ದೇವರು ನನ್ನ ನಿರೀಕ್ಷೆಯನ್ನು ಕಿತ್ತುಹಾಕಿದ್ದಾರೆ. 11 ದೇವರ ಶಿಕ್ಷೆಯು ನನ್ನ ಮೇಲೆ ಉರಿಯುತ್ತಿದೆ; ನಾನು ದೇವರಿಗೆ ವೈರಿಯಂತೆ ಪರಿಗಣಿಸಲಾಗಿದ್ದೇನೆ. 12 ದೇವರ ಸೇನೆ ಒಟ್ಟಿಗೆ ಬಂದು, ನನಗೆ ವಿರೋಧವಾಗಿ ದಿಬ್ಬನ್ನು ಕಟ್ಟಿ, ನನ್ನ ಗುಡಾರದ ಸುತ್ತಲೂ ಇಳಿದಿವೆ. 13 “ದೇವರು ನನ್ನ ಕುಟುಂಬದವರನ್ನು ನನ್ನಿಂದ ಅಗಲಿಸಿದ್ದಾರೆ; ನನ್ನ ಪರಿಚಿತರೆಲ್ಲರೂ ನನ್ನನ್ನು ತೊರೆದಿದ್ದಾರೆ. 14 ನನ್ನ ಬಂಧುಗಳು ನನ್ನನ್ನು ಕೈಬಿಟ್ಟಿದ್ದಾರೆ; ನನ್ನ ಆಪ್ತ ಸ್ನೇಹಿತರು ನನ್ನನ್ನು ಮರೆತುಬಿಟ್ಟಿದ್ದಾರೆ. 15 ನನ್ನ ಅತಿಥಿಗಳು, ನನ್ನ ದಾಸದಾಸಿಯರೂ ನನ್ನನ್ನು ಅನ್ಯನೆಂದು ಎಣಿಸುತ್ತಾರೆ; ಅವರ ದೃಷ್ಟಿಯಲ್ಲಿ ನಾನು ಪರದೇಶದವನ ಹಾಗೆ ಇದ್ದೇನೆ. 16 ನನ್ನ ಸೇವಕನನ್ನು ಕರೆದರೂ, ಅವನು ನನಗೆ ಉತ್ತರ ಕೊಡುವುದಿಲ್ಲ; ನನ್ನ ಬಾಯಿತೆರೆದು ಅವನನ್ನು ಬೇಡಿಕೊಂಡರೂ ಅವನು ಬರುವುದಿಲ್ಲ. 17 ನನ್ನ ಶ್ವಾಸವು ನನ್ನ ಹೆಂಡತಿಗೆ ಅಸಹ್ಯವಾಗಿದೆ, ನನ್ನ ಕುಟುಂಬದವರಿಗೆ ನಾನು ಹೇಸಿಕೆಯಾದೆ. 18 ಚಿಕ್ಕವರೂ ಸಹ ನನ್ನನ್ನು ತಿರಸ್ಕರಿಸುತ್ತಾರೆ; ನಾನು ಕಾಣಿಸಿಕೊಂಡಾಗ ನನ್ನನ್ನು ಹಾಸ್ಯಮಾಡುತ್ತಾರೆ. 19 ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನಾನು ಪ್ರೀತಿ ಮಾಡಿದವರೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ. 20 ನಾನು ಕೇವಲ ಎಲುಬೂ ತೊಗಲೂ ಆಗಿಬಿಟ್ಟಿದ್ದೇನೆ; ನಾನು ನನ್ನ ಹಲ್ಲು ಚರ್ಮದಿಂದಲೇ ತಪ್ಪಿಸಿಕೊಂಡೆನು. 21 “ಕನಿಕರಿಸಿರಿ, ನನ್ನ ಸ್ನೇಹಿತರೇ, ನನ್ನನ್ನು ಕನಿಕರಿಸಿರಿ, ಏಕೆಂದರೆ ದೇವರ ಕೈ ನನ್ನನ್ನು ದಂಡಿಸಿದೆ. 22 ದೇವರಂತೆ ನೀವು ನನ್ನನ್ನು ಏಕೆ ಹಿಂಸಿಸುತ್ತೀರಿ? ನನಗೆ ತೊಂದರೆಪಡಿಸಿದ್ದು ಸಾಲದೋ? 23 “ಆಹಾ, ನನ್ನ ಮಾತುಗಳು ದಾಖಲಿಸಿದ್ದರೆ, ಆ ಮಾತುಗಳನ್ನು ಸುರುಳಿಗಳಲ್ಲಿ ಬರೆದಿದ್ದರೆ, 24 ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಅವುಗಳನ್ನು ಶಾಶ್ವತ ಶಾಸನವಾಗಿ ಮಾಡಿದ್ದರೆ ಎಷ್ಟೋ ಒಳಿತು! 25 ನನ್ನ ವಿಮೋಚಕರು ಜೀವಿಸುತ್ತಿದ್ದಾರೆ ಎಂದು ತಿಳಿದಿದ್ದೇನೆ. ಕಡೆಯ ದಿನದಲ್ಲಿ ಭೂಮಿಯ ಮೇಲೆ ನನ್ನ ವಿಮೋಚಕರು ಬಂದು ನಿಲ್ಲುವರೆಂದೂ ತಿಳಿದಿದ್ದೇನೆ. 26 ನನ್ನ ಚರ್ಮವು ಬಿರಿದು ಹಾಳಾದ ಬಳಿಕವೂ, ನಾನು ದೇಹದಾರಿಯಾಗಿಯೇ ದೇವರನ್ನು ನೋಡುವೆನು. 27 ದೇವರನ್ನು ನಾನೇ ನೋಡುವೆನು; ಬೇರೆಯವರಲ್ಲ, ನನ್ನ ಕಣ್ಣಾರೆ ಅವರನ್ನು ಕಾಣುವೆನು; ಅದಕ್ಕಾಗಿ ನನ್ನ ಹೃದಯವು ನನ್ನೊಳಗೆ ಹಂಬಲಿಕೆಯಿಂದ ಹಾರೈಸುತ್ತಿದೆ! 28 “ ‘ಸ್ನೇಹಿತರೇ, ಅವನ ದುರ್ಗತಿಗೆ ಕಾರಣ ಅವನಲ್ಲಿಯೇ ಇದೆ, ನಾವು ಅವನಿಗೆ ಹೇಗೆ ತೊಂದರೆಕೊಡೋಣ?’ ಎಂದು ನೀವು ಹೇಳಿದರೆ, 29 ನೀವು ಖಡ್ಗಕ್ಕೆ ಭಯಪಡಬೇಕಾಗುತ್ತದೆ; ಏಕೆಂದರೆ, ಕ್ರೋಧವು ದಂಡನೆಯನ್ನು ಖಡ್ಗದಿಂದ ತರುವುದು. ಆಗ ನ್ಯಾಯತೀರ್ಪು ಉಂಟೆಂದು ನಿಮಗೆ ತಿಳಿಯುವುದು.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.