Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 18 - ಕನ್ನಡ ಸಮಕಾಲಿಕ ಅನುವಾದ


ಬಿಲ್ದದನ ವಾದ

1 ಆಗ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೀಗೆಂದನು:

2 “ಯೋಬನೇ, ಈ ಮಾತುಗಳನ್ನು ನೀನು ಯಾವಾಗ ಕೊನೆಗೊಳಿಸುತ್ತೀ? ವಿವೇಕಿಯಾಗು, ಆಮೇಲೆ ಮಾತನಾಡೋಣ.

3 ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?

4 ಕೋಪದಿಂದ ನಿನ್ನನ್ನು ನೀನೇ ಸೀಳಿಕೊಳ್ಳುವೆಯಾ? ನಿನ್ನ ನಿಮಿತ್ತ ಭೂಮಿ ಹಾಳಾಗಬೇಕೋ? ಬಂಡೆಯು ತನ್ನ ಸ್ಥಳದಿಂದ ತೊಲಗಬೇಕೋ?

5 “ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು; ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು.

6 ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು; ಅವನ ಮೇಲಣ ತೂಗು ದೀಪವು ಆರಿಹೋಗುವುದು.

7 ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು; ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು.

8 ಏಕೆಂದರೆ ದುಷ್ಟನು ತನ್ನ ಹೆಜ್ಜೆಗಳಿಂದಲೇ ಬಲೆಯಲ್ಲಿ ಬೀಳುವನು; ಅವನು ಕುಣಿಯಲ್ಲಿ ಬಿದ್ದು ಅಲೆದಾಡುವನು.

9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು; ಉರುಳು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು.

10 ನೆಲದ ಮೇಲೆ ಪಾಶವೂ, ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವುವು.

11 ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ, ಅವನ ಕಾಲುಗಳನ್ನು ಓಡುವಂತೆ ಮಾಡುವುವು.

12 ಅವನ ಬಲವು ಕುಸಿಯುವುದು; ವಿನಾಶವು ಅವನ ಬೀಳುವಿಕೆಗಾಗಿ ಸಿದ್ಧವಾಗಿರುವುದು.

13 ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು; ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು.

14 ಅವನು ಭದ್ರತೆಯ ಗುಡಾರದಿಂದ ಹೊರಬೀಳುವನು. ಅವನು ಭಯಂಕರ ಅರಸನ ಬಳಿಗೆ ಸಾಗಬೇಕಾಗುವುದು.

15 ಬೆಂಕಿಯು ಅವನ ಮನೆಯನ್ನು ಸುಡುವುದು; ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು.

16 ಬುಡದಿಂದ ಅವನ ಬೇರುಗಳು ಒಣಗುವುವು; ಮೇಲಿನಿಂದ ಅವನ ರೆಂಬೆಯು ಬಾಡುವುದು.

17 ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು; ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು.

18 ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು; ಅವನು ಲೋಕದಿಂದ ಬಹಿಷ್ಕರಿಸಲಾಗುವನು.

19 ಅವನ ಜನರಲ್ಲಿ ಅವನಿಗೆ ಮಗನೂ, ಮೊಮ್ಮಗನೂ ಇರುವುದಿಲ್ಲ, ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.

20 ಪಶ್ಚಿಮ ಜನರು ಅವನ ಸ್ಥಿತಿಯನ್ನು ನೋಡಿ ಆಶ್ಚರ್ಯಪಡುವರು; ಪೂರ್ವದ ಕಡೆಯವರನ್ನು ದಿಗಿಲು ಹಿಡಿಯುವುದು.

21 ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು; ದೇವರನ್ನು ಅರಿಯದವನ ಸ್ಥಿತಿ ಇದೇ.”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು