Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 16 - ಕನ್ನಡ ಸಮಕಾಲಿಕ ಅನುವಾದ


ಯೋಬನ ಉತ್ತರ

1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:

2 “ನಾನು ಇವುಗಳ ಹಾಗೆ ಅನೇಕ ಮಾತುಗಳನ್ನು ಕೇಳಿದ್ದೇನೆ; ನೀವೆಲ್ಲರೂ ಆದರಣೆ ಕೊಡುವವರಲ್ಲ, ಬಾಧಿಸುವವರೇ.

3 ನಿಮ್ಮ ವ್ಯರ್ಥ ಮಾತುಗಳಿಗೆ ಅಂತ್ಯ ಇಲ್ಲವೋ? ನನ್ನೊಂದಿಗೆ ವಾದಿಸಲು ನಿಮ್ಮನ್ನು ಒತ್ತಾಯಪಡಿಸಿದ್ದೇನು?

4 ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ, ನಾನು ಸಹ ನಿಮ್ಮ ಹಾಗೆ ಮಾತಾಡುತ್ತಿದ್ದೆ; ನಾನು ನಿಮ್ಮ ವಿರುದ್ಧ ಪದಪ್ರಯೋಗಿಸಿ ಮಾತಾಡಬಹುದಾಗಿತ್ತು; ಹೌದು, ನಿಮ್ಮ ವಿಷಯದಲ್ಲಿ ಗೇಲಿ ಮಾಡುತ್ತಾ, ನಾನು ನನ್ನ ತಲೆಯಾಡಿಸಬಹುದಾಗಿತ್ತು.

5 ಆದರೆ, ನಾನು ನನ್ನ ಬಾಯಿಮಾತಿನಿಂದ ನಿಮ್ಮನ್ನು ಪ್ರೋತ್ಸಾಹಿಸುವೆನು; ನನ್ನ ಆದರಣೆಯ ಮಾತುಗಳು ನಿಮಗೆ ಉಪಶಮನ ಮಾಡುವುದು.

6 “ನಾನು ಮಾತನಾಡಿದರೂ ನನ್ನ ನೋವಿಗೆ ಉಪಶಮನವಾಗುವುದಿಲ್ಲ; ನಾನು ಮೌನವಾಗಿದ್ದರೂ, ನನ್ನ ನೋವು ನಿವಾರಣೆಯಾಗುವುದಿಲ್ಲ.

7 ದೇವರೇ, ನೀವು ನನ್ನನ್ನು ಬಲಹೀನಪಡಿಸಿದ್ದೀರಿ; ನೀವು ನನ್ನ ಕುಟುಂಬದವರನ್ನೆಲ್ಲಾ ಇಲ್ಲದಂತೆ ಮಾಡಿದ್ದೀರಿ.

8 ನೀವು ನನ್ನ ಮುಖವೆಲ್ಲಾ ಸುಕ್ಕುಗಳಿಂದ ತುಂಬಿಸಿದ್ದೀರಿ; ನನ್ನ ಬಿಕ್ಕಟ್ಟೇ ನನಗೆ ವಿರೋಧವಾಗಿ ಎದ್ದು ಸಾಕ್ಷಿ ಕೊಡುತ್ತವೆ;

9 ದೇವರು ತಮ್ಮ ಬೇಸರದಲ್ಲಿ ನನ್ನನ್ನು ದಂಡಿಸಿದ್ದಾರೆ; ನನ್ನ ದೇವರು ನನ್ನ ಮೇಲೆ ಅತೃಪ್ತರಾಗಿದ್ದಾರೆ; ನನ್ನ ವೈರಿಯು ನನ್ನನ್ನು ದ್ವೇಷದಿಂದ ನೋಡುತ್ತಿದ್ದಾನೆ.

10 ನನ್ನ ಮೇಲೆ ಜನರು ತಮ್ಮ ಬಾಯಿ ಕಿಸಿಯುತ್ತಾರೆ; ನಿಂದಿಸಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ, ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ.

11 ದೇವರು ನನ್ನನ್ನು ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾರೆ; ಹೌದು, ದುಷ್ಟರ ಕೈಗೆ ನನ್ನನ್ನು ಎಸೆದುಬಿಟ್ಟಿದ್ದಾರೆ.

12 ನಾನು ನೆಮ್ಮದಿಯಿಂದ ಇದ್ದಾಗ ದೇವರು ನನ್ನನ್ನು ಚದರಿಸಿದ್ದಾರೆ; ನಾನು ಮಡಕೆ ಒಡೆದುಬಿದ್ದಂತೆ ಇದ್ದೇನೆ. ನನ್ನನ್ನು ತಮಗೆ ಗುರಿ ಹಲಗೆಯಾಗಿ ನಿಲ್ಲಿಸಿಕೊಂಡಿದ್ದಾರೆ.

13 ದೇವರ ಬಾಣಗಳು ನನ್ನನ್ನು ಸುತ್ತುವರಿದಿವೆ; ನಾನು ಕರುಣೆಯಿಲ್ಲದೆ ನೆಲದ ಮೇಲೆ ಪಿತ್ತವನ್ನು ಸುರಿದು ಬಿದ್ದವನಂತೆ ಇದ್ದೇನೆ. ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾರೆ.

14 ದೇವರು ಮತ್ತೆ ಮತ್ತೆ ನನ್ನನ್ನು ಮುರಿಯುತ್ತಿದ್ದಾರೆ; ಅದು ಶೂರನು ಓಡಿಬಂದು ನನ್ನ ಮೇಲೆ ದಾಳಿಮಾಡಿದಂತಿದೆ.

15 “ನಾನು ಗೋಣಿತಟ್ಟು ಹೊಲಿದು ನನ್ನ ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಗೌರವವನ್ನು ಧೂಳಿನಲ್ಲಿ ಮರೆಮಾಡಿದ್ದೇನೆ.

16 ನನ್ನ ಮುಖವು ಅಳುವುದರಿಂದ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ಅಂಧಕಾರವು ಕವಿದಿದೆ.

17 ಆದರೂ ನನ್ನ ಕೈಗಳಲ್ಲಿ ಹಿಂಸಾಚಾರವಿಲ್ಲ; ನನ್ನ ಪ್ರಾರ್ಥನೆಯು ಶುದ್ಧವಾಗಿದೆ.

18 “ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ, ನನ್ನ ಕೂಗು ವಿಶ್ರಾಂತಿ ಹೊಂದದಿರಲಿ!

19 ಈಗಲೂ ಪರಲೋಕದಲ್ಲಿ ನನಗೆ ಒಬ್ಬ ಸಾಕ್ಷಿ ಇದ್ದಾರೆ; ಹೌದು, ನನ್ನ ವಕೀಲರು ಉನ್ನತದಲ್ಲಿದ್ದಾರೆ.

20 ಆದರೆ ನನ್ನ ಮಿತ್ರ ನನಗಾಗಿ ವಿಜ್ಞಾಪನೆಮಾಡುತ್ತಿದ್ದಾರೆ; ನನ್ನ ಕಣ್ಣುಗಳು ದೇವರ ಮುಂದೆ ಕಣ್ಣೀರು ಸುರಿಸುತ್ತವೆ.

21 ಒಬ್ಬ ಮನುಷ್ಯನು ತನ್ನ ಮಿತ್ರನಿಗೋಸ್ಕರ ಬೇಡಿಕೊಳ್ಳುವಂತೆ, ಅವರು ಸಹ ಮನುಷ್ಯನಿಗಾಗಿ ದೇವರ ಮುಂದೆ ವಾದಿಸುತ್ತಿದ್ದಾರೆ.

22 “ನಾನು ಹಿಂದಿರುಗಿ ಬಾರದ ದಾರಿಯನ್ನು ಹಿಡಿಯಲು, ಇನ್ನೂ ಕೆಲವೇ ವರ್ಷಗಳು ಉಳಿದಿವೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು