ಯೋಬ 10 - ಕನ್ನಡ ಸಮಕಾಲಿಕ ಅನುವಾದ1 “ನನ್ನ ಜೀವನವೇ ನನಗೆ ಬೇಸರವಾಗಿದೆ; ನನ್ನ ದೂರುಗಳನ್ನು ಮನಬಿಚ್ಚಿ ನುಡಿಯುವೆನು; ನನ್ನ ಪ್ರಾಣದ ಕಹಿಯಿಂದ ಮಾತನಾಡುವೆನು. 2 ನಾನು ದೇವರಿಗೆ ಹೀಗೆ ಹೇಳುತ್ತೇನೆ: ನನ್ನನ್ನು ಅಪರಾಧಿ ಎಂದು ನಿರ್ಣಯಿಸಬೇಡಿರಿ. ನನ್ನ ಮೇಲೆ ನಿಮಗಿರುವ ಆಪಾದನೆಗಳನ್ನು ನನಗೆ ತಿಳಿಸಿರಿ. 3 ದೇವರೇ, ನಿಮ್ಮ ಕೈಕೃತಿಯಾಗಿರುವ ನನ್ನನ್ನು ಜಜ್ಜುವುದೂ ನಿಮಗೆ ಮೆಚ್ಚಿಕೆಯೋ? ನೀವು ನನ್ನನ್ನು ಅಲಕ್ಷ್ಯ ಮಾಡುವಿರೋ? ನೀವು ದುಷ್ಟರ ಯೋಜನೆಯನ್ನು ಮೆಚ್ಚುವಿರೋ? 4 ನಿಮಗೆ ಮಾಂಸದ ಕಣ್ಣುಗಳುಂಟೋ? ಮನುಷ್ಯರು ನೋಡುವಂತೆಯೇ ನೀವೂ ನೋಡುತ್ತೀರೋ? 5 ದೇವರೇ, ನಿಮ್ಮ ದಿನಗಳು ಮನುಷ್ಯರ ದಿನಗಳ ಹಾಗಿವೆಯೋ? ನಿಮ್ಮ ವರ್ಷಗಳು ಮನುಷ್ಯರ ವರ್ಷಗಳಂತಿವೆಯೋ? 6 ಏಕೆಂದರೆ ನನ್ನ ತಪ್ಪುಗಳನ್ನು ಹುಡುಕುವ ನಿಮಗೆ ಗೊತ್ತಿದೆ; ಹೌದು, ನನ್ನ ಪಾಪವನ್ನು ವಿಚಾರಿಸುವ ನಿಮಗೇ ಗೊತ್ತಿದೆ. 7 ನಾನು ಅಪರಾಧಿಯಲ್ಲವೆಂದು ನಿಮಗೆ ಗೊತ್ತಿದೆ, ನಿಮ್ಮ ಕೈಯಿಂದ ತಪ್ಪಿಸುವವರು ಯಾರೂ ಇಲ್ಲವೆಂದೂ ನಿಮಗೆ ಗೊತ್ತಿದೆಯಲ್ಲವೇ? 8 “ನಿಮ್ಮ ಕೈಗಳು ನನ್ನನ್ನು ನಿರ್ಮಿಸಿದೆ, ನೀವೇ ನನ್ನನ್ನು ರೂಪಿಸಿದವರು; ಈಗ ನೀವೇ ನನಗೆ ವಿಮುಖರಾಗಿ ನನ್ನನ್ನು ತೆಗೆದುಹಾಕುವಿರಾ? 9 ನೀವು ಕುಂಬಾರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಈಗ ನೀವೇ ನನ್ನನ್ನು ಮಣ್ಣಿಗೆ ಸೇರಿಸುವಿರೋ? 10 ನೀವು ಹಾಲಿನಂತೆ ನನ್ನನ್ನು ಸುರಿಸಲಿಲ್ಲವೋ? ಮೊಸರಿನ ಹಾಗೆ ಹೆಪ್ಪುಗಟ್ಟಿಸಲಿಲ್ಲವೋ? 11 ದೇವರೇ, ನೀವು ಚರ್ಮವನ್ನೂ, ಮಾಂಸವನ್ನೂ ನನಗೆ ಹೊದಿಸಿದ್ದೀರಿ; ನೀವು ಎಲುಬು ನರಗಳಿಂದಲೂ ನನ್ನನ್ನು ಹೆಣೆದಿರುವಿರಿ. 12 ದೇವರೇ, ನೀವು ನನಗೆ ಜೀವ ಕೊಟ್ಟಿರಿ, ನೀವು ನನಗೆ ಒಡಂಬಡಿಕೆಯ ಪ್ರೀತಿಯನ್ನೂ ತೋರಿಸಿದ್ದೀರಿ; ನಿಮ್ಮ ಪರಾಮರಿಕೆಯಿಂದ ನನ್ನ ಆತ್ಮವನ್ನು ಕಾಪಾಡಿದ್ದೀರಿ. 13 “ಆದರೂ ನೀವು ಇವುಗಳನ್ನು ನಿಮ್ಮ ಹೃದಯದಲ್ಲಿ ಮರೆಮಾಡಿಕೊಂಡಿದ್ದೀರಿ; ಇದು ನಿಮ್ಮ ಉದ್ದೇಶ ಎಂದು ನನಗೆ ಗೊತ್ತಿದೆ: 14 ಅದೇನೆಂದರೆ, ನಾನು ಒಂದು ವೇಳೆ ಪಾಪಮಾಡಿದರೆ, ನೀವು ಅದನ್ನು ಕಂಡುಹಿಡಿದು ನನ್ನ ಅಪರಾಧಕ್ಕಾಗಿ ನನ್ನನ್ನು ದಂಡಿಸದೇ ಬಿಡುವುದಿಲ್ಲ ಎಂಬುದೇ. 15 ನಾನು ಅಪರಾಧಿಯಾಗಿದ್ದರೆ ನನಗೆ ಕಷ್ಟ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತಲಾರೆ; ಏಕೆಂದರೆ, ನಾಚಿಕೆಯಿಂದ ನಾನು ತುಂಬಿದ್ದೇನೆ, ನಾನು ಬಾಧೆಯಿಂದ ಮುಳುಗಿಹೋಗಿದ್ದೇನೆ. 16 ನಾನು ತಲೆಯೆತ್ತಿದರೆ, ಸಿಂಹದಂತೆ ನನ್ನನ್ನು ಬೇಟೆಯಾಡುತ್ತೀರಿ; ನನ್ನ ವಿರುದ್ಧ ನಿಮ್ಮ ಅದ್ಭುತ ಶಕ್ತಿಯನ್ನು ಪ್ರದರ್ಶಿಸುವಿರಿ. 17 ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ತರುತ್ತೀರಿ; ನನ್ನ ಮೇಲೆ ಅಧಿಕಬೇಸರಗೊಳ್ಳುತ್ತೀರಿ; ಅಲೆ ಅಲೆಯಾಗಿ ನಿಮ್ಮ ಸೈನ್ಯವು ನನಗೆ ಎದುರಾಗಿವೆ. 18 “ಹಾಗಾದರೆ ಏಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದ್ದೀರಿ? ಯಾರೂ ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು. 19 ನಾನು ಬದುಕಿರದೇ, ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು. 20 ನನ್ನ ಅಲ್ಪದಿನಗಳು ಮುಗಿದಿಲ್ಲವೋ? ಸ್ವಲ್ಪ ಹೊತ್ತು ಆನಂದಿಸಲು ನನ್ನನ್ನು ಬಿಟ್ಟುಬಿಡಿರಿ. 21 ನಾನು ಹಿಂದಿರುಗಲಾಗದ ಮಬ್ಬಾಗಿರುವ ಕತ್ತಲೆಯ ದೇಶಕ್ಕೆ ಸೇರಲಿರುವೆನು. 22 ಆ ದೇಶದಲ್ಲಿ ಕಾರ್ಗತ್ತಲೂ, ಗಾಢಾಂಧಕಾರವೂ ಮರಣದ ತುಂಬಿರುವುದು. ಕ್ರಮವಿಲ್ಲದ ಆ ದೇಶದಲ್ಲಿ ಬೆಳಕೂ ಕತ್ತಲೆಯೇ.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.