Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋನನು 2 - ಕನ್ನಡ ಸಮಕಾಲಿಕ ಅನುವಾದ

1 ಆಗ ಯೋನನು ಮೀನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.

2 ಅವನು ಹೀಗೆ ಹೇಳಿದನು: “ನಾನು ನನ್ನ ವ್ಯಥೆಯಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟೆನು. ಅವರು ನನ್ನ ಕೂಗನ್ನು ಕೇಳಿದರು. ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ನಾನು ಕೂಗಿದೆನು, ಆಗ ನನ್ನ ಕರೆಯನ್ನು ನೀವು ಕೇಳಿದಿರಿ.

3 ನನ್ನನ್ನು ನೀವು ಅಗಾಧದಲ್ಲಿಯೂ, ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿರಿ. ಪ್ರವಾಹಗಳು ನನ್ನನ್ನು ಸುತ್ತಿಕೊಂಡವು. ನಿಮ್ಮ ಎಲ್ಲಾ ಅಲೆಗಳೂ ನಿಮ್ಮ ತೆರೆಗಳೂ ನನ್ನ ಮೇಲೆ ದಾಟಿಹೋದವು.

4 ಆಗ ನಾನು ಹೇಳಿದ್ದು, ‘ನಿಮ್ಮ ಕಣ್ಣುಗಳ ಎದುರಿನಿಂದ ಬಹಿಷ್ಕೃತನಾಗಿದ್ದೇನೆ. ಆದರೂ ನಾನು ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಪುನಃ ನೋಡುವೆನು.’

5 ನನ್ನನ್ನು ಸುತ್ತುತ್ತಿದ್ದ ನೀರು, ನನ್ನನ್ನು ಭಯಪಡಿಸಿತು. ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು. ಜಂಬು ಹುಲ್ಲು ನನ್ನ ತಲೆಗೆ ಸುತ್ತಲಾಗಿತ್ತು.

6 ಬೆಟ್ಟಗಳ ಅಡಿಗಳ ಪರ್ಯಂತರ ಇಳಿದು ಹೋದೆನು. ಕೆಳಗಿನ ಭೂಮಿಯು ನನ್ನನ್ನು ಶಾಶ್ವತವಾಗಿ ನಿರ್ಬಂಧಿಸಿತು. ಆದರೂ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನ ಪ್ರಾಣವನ್ನು ತಗ್ಗಿನಿಂದ ಮೇಲಕ್ಕೆ ಎಬ್ಬಿಸಿದ್ದೀರಿ.

7 “ನನ್ನ ಪ್ರಾಣವು ನನ್ನಲ್ಲಿ ಕುಂದಿ ಹೋದಾಗ, ಯೆಹೋವ ದೇವರೇ ನಿಮ್ಮನ್ನು ಜ್ಞಾಪಕಮಾಡಿಕೊಂಡೆನು. ನನ್ನ ಪ್ರಾರ್ಥನೆಯು ನಿಮ್ಮ ಬಳಿಗೆ ನಿಮ್ಮ ಪರಿಶುದ್ಧ ಮಂದಿರದೊಳಗೆ ಬಂದಿತು.

8 “ನಿರುಪಯೋಗ ಮೂರ್ತಿಗಳಿಗೆ ಅಂಟಿಕೊಳ್ಳುವವರು, ಅವರದಾಗುವ ದೇವರ ಪ್ರೀತಿಯನ್ನು ಕಳೆದುಕೊಳ್ಳುವರು.

9 ಆದರೆ ನಾನು ಸ್ತೋತ್ರದ ಗೀತೆಯಿಂದ ನಿಮಗೆ ಬಲಿ ಅರ್ಪಿಸುವೆನು. ನಾನು ಮಾಡಿದ ಹರಕೆಯನ್ನು ತೀರಿಸುವೆನು. ಆಗ ನಾನು, ‘ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು,’ ಎಂದು ಹೇಳಿದನು.”

10 ಆಗ ಯೆಹೋವ ದೇವರು ಮೀನಿಗೆ ಹೇಳಿದ್ದರಿಂದ, ಅದು ಯೋನನನ್ನು ಒಣಭೂಮಿಯ ಮೇಲೆ ಕಾರಿಬಿಟ್ಟಿತು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು