Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 13 - ಕನ್ನಡ ಸಮಕಾಲಿಕ ಅನುವಾದ


ಸ್ವಾಧೀನಪಡಿಸಿಕೊಳ್ಳತಕ್ಕ ಪ್ರದೇಶಗಳು

1 ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವ ದೇವರು ಅವನಿಗೆ, “ನೀನು ಈಗ ಮುದುಕನಾದಿ, ಸ್ವಾಧೀನ ಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇವೆ.

2 “ಅವು ಯಾವುವೆಂದರೆ: “ಫಿಲಿಷ್ಟಿಯರ ಮತ್ತು ಗೆಷೂರ್ಯರ ದೇಶವೆಲ್ಲಾ ಅಂದರೆ,

3 ಈಜಿಪ್ಟಿಗೆ ಎದುರಾದ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗೂ ಅಂದರೆ, ಗಾಜಾ, ಅಷ್ಡೋದ್, ಅಷ್ಕೆಲೋನ್, ಗಾತ್, ಎಕ್ರೋನ್ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ದಕ್ಷಿಣ ಪ್ರಾಂತ್ಯದಲ್ಲಿದ್ದ ಅವ್ವೀಯರ ಸೀಮೆ;

4 ಸೀದೋನ್ಯರ ಆರಾ ಪ್ರದೇಶದಿಂದ ಅಫೇಕ್ ಮತ್ತು ಅಮೋರಿಯರ ಮೇರೆಯವರೆಗೆ ಕಾನಾನ್ಯರ ಎಲ್ಲಾ ದೇಶವು,

5 ಅದರೊಂದಿಗೆ ಗೆಬಾಲ್ಯರ ಪ್ರಾಂತ್ಯ, ಹೆರ್ಮೋನ್ ಬೆಟ್ಟದ ಕೆಳಗೆ ಇರುವ ಬಾಲ್ಗಾದಿನಿಂದ ಹಮಾತಿನ ದಾರಿಯವರೆಗೂ ಇರುವ ಲೆಬನೋನಿನ ಪೂರ್ವ ಪ್ರದೇಶ.

6 “ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಸೀದೋನ್ಯರನ್ನೂ ನಾನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ, ಇಸ್ರಾಯೇಲರಿಗೆ ಸೊತ್ತಾಗಿ ಪಾಲು ಕೊಡಬೇಕು.

7 ಈಗ ಈ ದೇಶವನ್ನು ಒಂಬತ್ತು ಗೋತ್ರಗಳಿಗೂ ಮನಸ್ಸೆ ಕುಲದ ಅರ್ಧ ಗೋತ್ರಕ್ಕೆ ಸೊತ್ತಾಗಿ ಪಾಲು ಮಾಡಿಕೊಡು,” ಎಂದು ಹೇಳಿದರು.


ಯೊರ್ದನ್ ನದಿ ಪೂರ್ವದಿಕ್ಕಿನಲ್ಲಿರುವ ಪ್ರದೇಶದ ವಿಭಜನೆ

8 ಮನಸ್ಸೆ ಕುಲದ ಉಳಿದ ಅರ್ಧ ಗೋತ್ರದವರೂ ರೂಬೇನ್ಯರೂ ಗಾದ್ಯರೂ ತಮ್ಮ ಸೊತ್ತನ್ನು ಯೆಹೋವ ದೇವರ ಸೇವಕನಾದ ಮೋಶೆಯು ಯೊರ್ದನ್ ನದಿ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಬೇಕೆಂದು ನಿರ್ಣಯಿಸಿದ ಸ್ಥಳಗಳು ಅವರಿಗೆ ಕೊಡಲಾದವು. ಅವುಗಳು ಯಾವುವೆಂದರೆ:

9 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬಾದ ಸಮನಾದ ಭೂಮಿಯೂ

10 ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಮೇರೆಯವರೆಗೂ ಇದ್ದ ಸಕಲ ಪಟ್ಟಣಗಳು.

11 ಅದರೊಂದಿಗೆ ಗಿಲ್ಯಾದ್, ಗೆಷೂರ್ಯರ, ಮಾಕಾತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಸಲೆಕಾವರೆಗೆ ಇರುವ ಇಡೀ ಬಾಷಾನ್ ಪೂರ್ತಿಯಾಗಿ.

12 ಅಂದರೆ, ಬಾಷಾನಿನಲ್ಲಿ ಅಷ್ಟಾರೋತ್, ಎದ್ರೈ ಎಂಬ ಊರುಗಳಲ್ಲಿ ಆಳಿದ ರೆಫಾಯರ ವಂಶಸ್ಥನಾದ ಓಗನ ಸಮಸ್ತ ರಾಜ್ಯವೆಲ್ಲಾ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ, ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು.

13 ಆದಾಗ್ಯೂ ಇಸ್ರಾಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿಬಿಡಲಿಲ್ಲ. ಏಕೆಂದರೆ ಗೆಷೂರ್ಯರೂ ಮಾಕಾತೀಯರೂ ಈ ದಿನದವರೆಗೆ ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿದ್ದಾರೆ.

14 ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಅವನು ಅವರಿಗೆ ಹೇಳಿದ ಪ್ರಕಾರ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದ್ದರಿಂದ, ಇಸ್ರಾಯೇಲಿನ ದೇವರೇ ಅವರ ಸೊತ್ತು.

15 ಮೋಶೆಯು ರೂಬೇನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಕೊಟ್ಟ ಸೊತ್ತು ಇವು:

16 ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮೊದಲುಗೊಂಡು, ಮೇದೆಬಾದ ಬಳಿಯಲ್ಲಿರುವ ಸಕಲ ಸಮನಾದ ಭೂಮಿಯೂ,

17 ಸಮನಾದ ಭೂಮಿಯಲ್ಲಿರುವ ಹೆಷ್ಬೋನ್ ಪಟ್ಟಣವೂ ಅದರ ಎಲ್ಲಾ ಪಟ್ಟಣಗಳಾದ ದೀಬೋನ್, ಬಾಮೋತ್ ಬಾಳ್, ಬೇತ್ ಬಾಳ್ ಮೆಯೋನ್,

18 ಯಹಚ, ಕೆದೇಮೋತ್, ಮೇಫಾತ್,

19 ಕಿರ್ಯಾತಯಿಮ್, ಸಿಬ್ಮಾ, ತಗ್ಗಿನ ಬೆಟ್ಟದಲ್ಲಿರುವ ಚೆರೆತ್ ಶಹರ್,

20 ಬೇತ್ ಪೆಗೋರ್ ಎಂಬ ಪಟ್ಟಣಗಳೂ ಪಿಸ್ಗಾದ ಕೆಳಗಡೆ ಇರುವ ಸೀಮೆ, ಬೇತ್ ಯೆಷೀಮೋತ್,

21 ಸಮನಾದ ಭೂಮಿಯ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳಿದ ಸೀಹೋನೆಂಬ ಅಮೋರಿಯರ ಅರಸನ ರಾಜ್ಯವೆಲ್ಲವೂ ಅವರ ಮೇರೆಗೊಳಗಾದವು. ಮೋಶೆಯು ಅವನನ್ನೂ ದೇಶದಲ್ಲಿ ಅವನ ಅಧಿಪತಿಗಳಾದಂಥ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬವರನ್ನೂ ಸೆದೆಬಡಿದನು.

22 ಇದಲ್ಲದೆ ಇಸ್ರಾಯೇಲರು ಸಂಹರಿಸಿದ ಇತರರ ಸಂಗಡ ಬೆಯೋರನ ಮಗನಾದ ಬಿಳಾಮನೆಂಬ ಕಣಿ ಹೇಳುವವನನ್ನು ಖಡ್ಗದಿಂದ ಕೊಂದುಹಾಕಿದರು.

23 ಯೊರ್ದನ್ ನದಿಯು ರೂಬೇನ್ ಗೋತ್ರಗಳ ಮೇರೆಯಾಗಿತ್ತು. ಈ ಪಟ್ಟಣಗಳೂ ಇವುಗಳ ಗ್ರಾಮಗಳೂ ರೂಬೇನನ ಮಕ್ಕಳಿಗೆ ಅವರ ಗೋತ್ರಗಳ ಪ್ರಕಾರ ದೊರಕಿದ ಸೊತ್ತು.

24 ಮೋಶೆಯು ಗಾದನ ಗೋತ್ರಗಳಿಗೆ ಅವರ ಕುಟುಂಬಗಳ ಪ್ರಕಾರ ಕೊಟ್ಟ ಸೊತ್ತು ಇವು:

25 ಯಜ್ಜೇರ್ ಪ್ರದೇಶ, ಗಿಲ್ಯಾದಿನ ಸಮಸ್ತ ಪಟ್ಟಣಗಳೂ ರಬ್ಬಾ ಊರಿನ ಎದುರಾಗಿರುವ ಅರೋಯೇರ್ ಪಟ್ಟಣವರೆಗೂ ಇರುವ ಅಮ್ಮೋನಿಯರ ಅರ್ಧ ದೇಶವು.

26 ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೊನೀಮ್ ಎಂಬ ಊರುಗಳವರೆಗೂ ಮಹನಯಿಮಿನಿಂದ ದೆಬೀರ್ ಮೇರೆಯವರೆಗೂ ಇರುವ ದೇಶವು.

27 ತಗ್ಗಿನಲ್ಲಿರುವ ಬೇತ್‌ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಪೋನ್ ಎಂಬ ಪಟ್ಟಣಗಳು ಹೆಷ್ಬೋನಿನ ಅರಸನಾದ ಸೀಹೋನನ ಉಳಿದ ರಾಜ್ಯವೂ ಯೊರ್ದನ್ ನದಿ ತೀರವಾಗಿ ಕಿನ್ನೆರೆತ್ ಸಮುದ್ರದ ಪರ್ಯಂತರಕ್ಕೂ ಇರುವ ದೇಶವು ಅವರ ಮೇರೆಗೆ ಒಳಗಾದವು.

28 ಈ ಪಟ್ಟಣಗಳೂ, ಇವುಗಳ ಗ್ರಾಮಗಳೂ ಗಾದ್ಯರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿವೆ.

29 ಇದಲ್ಲದೆ ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಅವರ ಕುಟುಂಬದ ಪ್ರಕಾರ ಕೊಟ್ಟ ಸೊತ್ತು ಇವು:

30 ಮಹನಯಿಮಿನಿಂದ ಬಾಷಾನಿನ ಅರಸನಾದ ಓಗನ ಸಮಸ್ತ ರಾಜ್ಯವಾಗಿರುವ ಬಾಷಾನೆಲ್ಲವೂ, ಬಾಷಾನಿನಲ್ಲಿರುವ ಯಾಯೀರನ ಸಮಸ್ತ ಊರುಗಳಾದ ಅರವತ್ತು ಪಟ್ಟಣಗಳೂ ಅವರ ಮೇರೆಗೆ ಒಳಗಾದವು.

31 ಗಿಲ್ಯಾದಿನ ಅರ್ಧ ಭಾಗ, ಬಾಷಾನಿನಲ್ಲಿರುವ ಓಗ್ ರಾಜನ ಪಟ್ಟಣಗಳಾದ ಅಷ್ಟಾರೋತ್, ಎದ್ರೈ, ಇವೆಲ್ಲವೂ ಮನಸ್ಸೆಯ ಮಗ ಮಾಕೀರನ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಮಾಕೀರನ ಮಕ್ಕಳಲ್ಲಿ ಅರ್ಧ ಜನರಿಗೆ ಕೊಟ್ಟನು.

32 ಹೀಗೆಯೇ ಮೋಶೆಯು ಯೊರ್ದನ್ ನದಿಗೆ ಆಚೆ ಯೆರಿಕೋವಿನ ಪೂರ್ವದಿಕ್ಕಿನಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಬಾಧ್ಯತೆಯಾಗಿ ಹಂಚಿದ ದೇಶಗಳು ಇವೆ.

33 ಆದರೆ ಲೇವಿಯರ ಗೋತ್ರಕ್ಕೆ ಮೋಶೆಯು ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ದೇವರು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲರ ದೇವರಾದ ಯೆಹೋವ ದೇವರೇ ಅವರ ಸೊತ್ತು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು