Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 8 - ಕನ್ನಡ ಸಮಕಾಲಿಕ ಅನುವಾದ


ದೇವಾಲಯದಲ್ಲಿ ವಿಗ್ರಹಾರಾಧನೆ

1 ಆರನೆಯ ವರ್ಷದ ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ, ಯೆಹೂದದ ಹಿರಿಯರೂ ನನ್ನ ಮನೆಯಲ್ಲಿ ಕುಳಿತುಕೊಂಡಿರುವಾಗ, ಅಲ್ಲಿ ಸಾರ್ವಭೌಮ ಯೆಹೋವ ದೇವರ ಹಸ್ತ ನನ್ನ ಮೇಲೆ ಸ್ಪರ್ಶವಾಯಿತು.

2 ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು ಕಾಣಿಸಿತು. ಸೊಂಟದ ಕೆಳಗಿನ ರೂಪವು ಬೆಂಕಿಯಂತಿತ್ತು ಮತ್ತು ಅವನ ಸೊಂಟದ ಮೇಲಿನ ಭಾಗವು ಹೊಳೆಯುವ ಲೋಹದಂತೆ ಪ್ರಕಾಶಮಾನವಾಗಿತ್ತು.

3 ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿದನು. ಆಗ ದೇವರಾತ್ಮರು ದೇವದರ್ಶನದಲ್ಲಿ ಯೆರೂಸಲೇಮಿನ ಉತ್ತರದ ಕಡೆಗೆ ಎದುರಾಗಿರುವ ಒಳ ಅಂಗಳದ ಕಡೆಗೆ, ರೋಷಗೊಳಿಸುವ ವಿಗ್ರಹವು ಇದ್ದಲ್ಲಿಗೆ ನನ್ನನ್ನು ಎತ್ತಿಕೊಂಡು ಹೋದರು.

4 ಇಸ್ರಾಯೇಲಿನ ದೇವರ ಮಹಿಮೆಯು, ನಾನು ಆ ಬಯಲುಸೀಮೆಯಲ್ಲಿ ನೋಡಿದ ಆಕಾರದ ಪ್ರಕಾರವೇ ಅಲ್ಲಿ ಇತ್ತು.

5 ಆಗ ಅವರು ನನಗೆ, “ಮನುಷ್ಯಪುತ್ರನೇ, ಉತ್ತರಕ್ಕೆ ಕಣ್ಣೆತ್ತಿ ನೋಡು,” ಎಂದು ಹೇಳಿದರು; ಅಂತೆಯೇ ನಾನು ಉತ್ತರಕ್ಕೆ ಕಣ್ಣೆತ್ತಿ ನೋಡಿದೆ. ಇಗೋ ದೇವರನ್ನು ರೋಷಗೊಳಿಸುವ ಅದೇ ವಿಗ್ರಹವು ಬಲಿಪೀಠದ ಬಾಗಿಲ ಉತ್ತರದ ಪ್ರವೇಶದ್ವಾರದ ಮುಂದೆ ನಿಂತಿತ್ತು.

6 ಅವರು ನನಗೆ, “ಮನುಷ್ಯಪುತ್ರನೇ, ಅವರು ಮಾಡುತ್ತಿರುವುದನ್ನು ನೋಡುತ್ತಿರುವೆಯಾ? ನಾನು ನನ್ನ ಪರಿಶುದ್ಧ ಸ್ಥಳವನ್ನು ಬಿಟ್ಟು ದೂರ ಹೋಗುವಹಾಗೆ, ಇಸ್ರಾಯೇಲಿನ ಮನೆತನದವರು ಇಲ್ಲಿ ನಡೆಸುತ್ತಿರುವ ದೊಡ್ಡ ಅಸಹ್ಯಗಳನ್ನು ನೋಡುತ್ತಿರುವೆಯಾ? ಆದರೆ ನೀನು ಇನ್ನೂ ಹೆಚ್ಚಿನ ಅಸಹ್ಯಗಳನ್ನು ನೋಡುವೆ,” ಎಂದನು.

7 ಆಗ ಅವನು ನನ್ನನ್ನು ಅಂಗಳದ ಬಾಗಿಲಿಗೆ ತಂದನು ಮತ್ತು ನಾನು ನೋಡುವಾಗ, ಗೋಡೆಯಲ್ಲಿ ಒಂದು ರಂಧ್ರವನ್ನು ಕಂಡೆನು.

8 ಆಮೇಲೆ ಆತನು ನನಗೆ, “ಮನುಷ್ಯಪುತ್ರನೇ, ಈಗ ಗೋಡೆಯಲ್ಲಿ ಕೊರೆ,” ಎಂದು ಹೇಳಿದನು. ನಾನು ಗೋಡೆಯನ್ನು ಕೊರೆದಾಗ ಒಂದು ಬಾಗಿಲನ್ನು ಕಂಡೆನು.

9 ಆಗ ಆತನು ನನಗೆ, “ನೀನು ಒಳಗೆ ಹೋಗಿ ಜನರು ಇಲ್ಲಿ ನಡೆಸುವ ಅಸಹ್ಯ ದುಷ್ಕಾರ್ಯಗಳನ್ನು ನೋಡು,” ಎಂದನು. ನಾನು ಒಳಗೆ ಹೋಗಿ ನೋಡಿದೆನು.

10 ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ, ಅಸಹ್ಯ ಮೃಗಗಳೂ, ಇಸ್ರಾಯೇಲರು ಪೂಜಿಸುವ ಸಕಲ ಮೂರ್ತಿಗಳೂ ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು.

11 ಇಸ್ರಾಯೇಲಿನ ಮನೆತನದವರಲ್ಲಿ ಎಪ್ಪತ್ತು ಮಂದಿ ಹಿರಿಯರೂ, ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿದ್ದರು. ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾರತಿ ಇತ್ತು. ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು.

12 ಆಗ ದೇವರು ನನಗೆ, “ಮನುಷ್ಯಪುತ್ರನೇ, ಇಸ್ರಾಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಯೆಹೋವ ದೇವರು ನಾಡನ್ನು ತೊರೆದುಬಿಟ್ಟಿದ್ದಾರೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.

13 ಇದಲ್ಲದೆ ಅವರು, “ಮತ್ತೊಂದು ಸಾರಿ ತಿರುಗಿಕೋ. ಅವರು ಮಾಡುವ ಇನ್ನೂ ಮಹಾ ಅಸಹ್ಯ ಕಾರ್ಯಗಳನ್ನು ನೋಡುವೆ,” ಎಂದರು.

14 ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಉತ್ತರದ ಕಡೆಗೆ ಎದುರಾಗಿದ್ದ ಬಾಗಿಲಿನ ಕಡೆಗೆ ತಂದನು. ಅಲ್ಲಿ ತಮ್ಮೂಜ್ ದೇವತೆಗೋಸ್ಕರ ಅಳುವ ಹೆಂಗಸರು ಕೂತಿದ್ದರು.

15 ಆಮೇಲೆ ಅವನು ನನಗೆ, “ಮನುಷ್ಯಪುತ್ರನೇ, ನೋಡಿದೆಯಾ? ಮತ್ತೊಂದು ಸಾರಿ ತಿರುಗಿಕೋ. ಇವುಗಳಿಂದ ಇನ್ನೂ ಅಸಹ್ಯವಾದವುಗಳನ್ನು ಕಾಣುವೆ,” ಎಂದು ಹೇಳಿದನು.

16 ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಬಂದನು. ಇಗೋ, ಯೆಹೋವ ದೇವರ ಮಂದಿರದ ಬಾಗಿಲಲ್ಲಿ ದ್ವಾರಾಂಗಳಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಸುಮಾರು ಇಪ್ಪತ್ತೈದು ಮಂದಿಯು ಯೆಹೋವ ದೇವರ ಮಂದಿರಕ್ಕೆ ಬೆನ್ನುಹಾಕಿ, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನಿಟ್ಟು, ಸೂರ್ಯನಮಸ್ಕಾರ ಮಾಡುತ್ತಿದ್ದರು.

17 ಆಗ ಅವರು ನನಗೆ, “ಮನುಷ್ಯಪುತ್ರನೇ, ನೋಡಿದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದ ಮನೆತನದವರಿಗಲ್ಲವೇ? ಏಕೆಂದರೆ ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ, ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರಲ್ಲವೇ? ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟುಕೊಳ್ಳುತ್ತಾರೆ.

18 ಆದ್ದರಿಂದ ನಾನು ಸಹ ರೋಷದಿಂದಲೇ ಇರುವೆನು. ನಾನು ಅವರನ್ನು ಕನಿಕರಿಸುವುದೂ ಇಲ್ಲ, ನಾನು ಅವರನ್ನು ಉಳಿಸುವುದೂ ಇಲ್ಲ. ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರುಚಿದರೂ, ನಾನು ಅವರನ್ನು ಕೇಳಿಸಿಕೊಳ್ಳುವುದೂ ಇಲ್ಲ,” ಎಂದನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು