ಯೆಹೆಜ್ಕೇಲನು 5 - ಕನ್ನಡ ಸಮಕಾಲಿಕ ಅನುವಾದದೇವರ ಕ್ಷೌರಿಕನ ಕತ್ತಿಯ ತೀರ್ಪಿನ 1 “ಮನುಷ್ಯಪುತ್ರನೇ, ನೀನು ಹರಿತವಾದ ಖಡ್ಗವನ್ನು ತೆಗೆದುಕೊಂಡು ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ, ಅದರಿಂದ ನಿನ್ನ ತಲೆಯನ್ನೂ ನಿನ್ನ ಗಡ್ಡವನ್ನೂ ಬೋಳಿಸಿಬಿಟ್ಟು, ಆಮೇಲೆ ಅದನ್ನು ತೂಕ ಮಾಡುವುದಕ್ಕೆ ತಕ್ಕಡಿಯನ್ನು ತೆಗೆದುಕೋ. ಆ ಕೂದಲನ್ನು ಭಾಗ ಮಾಡು. 2 ಅದರ ಮೂರನೆಯ ಒಂದು ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು. ಮೂರನೆಯ ಒಂದು ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು. ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಖಡ್ಗವನ್ನು ಬೀಸುವೆನು. 3 ನೀನು ಅವುಗಳೊಳಗಿಂದ ಕೆಲವು ಕೂದಲನ್ನು ಲೆಕ್ಕದಲ್ಲಿ ತೆಗೆದು, ನಿನ್ನ ಸೆರಗುಗಳಲ್ಲಿ ಕಟ್ಟು,” ಎಂದನು. 4 ಆಮೇಲೆ ಅವುಗಳೊಳಗಿಂದ ಕೆಲವನ್ನು ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ, ಅವುಗಳನ್ನು ಬೆಂಕಿಯಿಂದ ಸುಡು. ಏಕೆಂದರೆ ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರಿಗೂ ಹೋಗುವುದು. 5 “ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ಇದು ಯೆರೂಸಲೇಮು; ನಾನು ಅದನ್ನು ಅದರ ಸುತ್ತಲೂ ಇರುವ ಜನಾಂಗಗಳ ದೇಶಗಳ ನಡುವೆ ಇಟ್ಟಿದ್ದೇನೆ. 6 ಆಕೆಯು ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ, ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತನಕ್ಕೆ ತಿರುಗಿಸಿಬಿಟ್ಟಳು. ಅವರು ನನ್ನ ನ್ಯಾಯಗಳನ್ನೂ ಅನುಸರಿಸದೆ ನನ್ನ ನಿಯಮಗಳನ್ನೂ ನಿರಾಕರಿಸಿದ್ದಾರೆ. 7 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ನಿಮ್ಮ ಸುತ್ತಲಿರುವ ಜನಾಂಗಗಳಿಗಿಂತ ಅಧಿಕವಾದುದರಿಂದ ನನ್ನ ನಿಯಮಗಳಲ್ಲಿ ನಡೆಯದೇ ಹೋದದ್ದರಿಂದಲೂ, ನನ್ನ ನ್ಯಾಯಗಳನ್ನು ಪಾಲಿಸದೇ ಇದ್ದುದರಿಂದಲೂ, ನಿಮ್ಮ ಸುತ್ತಲಿರುವ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದರಿಂದಲೂ, 8 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನೇ, ನಿನಗೆ ವಿರೋಧವಾಗಿದ್ದೇನೆ. ಜನಾಂಗಗಳ ಕಣ್ಣುಗಳ ಮುಂದೆ ನಿಮ್ಮ ಜನರನ್ನು ದಂಡಿಸುವೆನು. 9 ನಾನು ಮಾಡದೆ ಇದ್ದದ್ದನ್ನೂ, ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿಮ್ಮ ಅಸಹ್ಯಗಳ ನಿಮಿತ್ತವಾಗಿ ನಿಮ್ಮಲ್ಲಿ ಮಾಡುತ್ತೇನೆ. 10 ಆದ್ದರಿಂದ ನಿಮ್ಮ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು. ಮಕ್ಕಳು ಅವರ ತಂದೆಗಳನ್ನು ತಿನ್ನುವರು. ಹೀಗೆ ನಿಮ್ಮಲ್ಲಿ ನ್ಯಾಯತೀರ್ಪನ್ನು ನಡಿಸುವೆನು. ನಿಮ್ಮಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು. 11 ಆದಕಾರಣ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನಿಶ್ಚಯವಾಗಿ ನೀವು ನನ್ನ ಪರಿಶುದ್ಧ ಸ್ಥಳವನ್ನು ನಿಮ್ಮ ಎಲ್ಲಾ ಹೇಸಿಗೆಗಳಿಂದಲೂ, ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ, ನಾನೂ ಸಹ ನಿಮ್ಮನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. 12 ನಿನ್ನಲ್ಲಿಯ ಮೂರನೆಯ ಒಂದು ಪಾಲು ಜನರು ವ್ಯಾಧಿಗಳಿಂದ ಸಾಯುವರು, ಕ್ಷಾಮದಿಂದ ನಿಮ್ಮಲ್ಲಿ ಅವರು ನಾಶವಾಗುವರು. ಮೂರನೆಯ ಒಂದು ಪಾಲು ನಿಮ್ಮ ಸುತ್ತಲೂ ಖಡ್ಗ ಹಿಡಿದು ಬೀಳುವರು. ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ ಗಾಳಿಗೆ ತೂರಿ ಚದರಿಸಿ, ಅವರ ಮೇಲೆ ಖಡ್ಗವನ್ನು ಬೀಸುವೆನು. 13 “ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ರೋಷವನ್ನು ಅವರ ಮೇಲೆ ಕಾರಿ, ಸಮಾಧಾನ ಹೊಂದುವೆನು. ಹೀಗೆ ನಾನು ನನ್ನ ರೋಷವನ್ನು ಅವರ ಮೇಲೆ ತೀರಿಸಿದ ತರುವಾಯ, ಯೆಹೋವ ದೇವರಾದ ನಾನು ರೋಷದಿಂದ ಮಾತನಾಡಿದ್ದೇನೆ ಎಂದು ಅವರು ತಿಳಿಯುವರು. 14 “ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳು ಮಾಡಿ, ಸುತ್ತಲಿನ ಜನಾಂಗಗಳ ನಿಂದೆಗೆ ಗುರಿಮಾಡುವೆನು. 15 ಹೀಗೆ ನಾನು ಕೋಪದಿಂದಲೂ, ರೋಷದಿಂದಲೂ, ಉಗ್ರಖಂಡನೆಯಿಂದಲೂ ನಿಮ್ಮಲ್ಲಿ ನ್ಯಾಯತೀರ್ಪುಗಳನ್ನು ನಡೆಸುವಾಗ, ನಿಮ್ಮ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ, ದೂಷಣೆಯೂ, ಶಿಕ್ಷೆಯೂ, ಭಯವೂ ಆಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ. 16 ಆಗ ನಾನು ನಿನ್ನನ್ನು ಹಾಳುಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು. ನಿನ್ನ ಮೇಲೆ ಭಯಂಕರವಾದ ಕ್ಷಾಮವನ್ನು ಬರಮಾಡಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17 ನಾನು ಕಳುಹಿಸುವ ಕ್ಷಾಮದಿಂದ ದುಷ್ಟಮೃಗಗಳಿಂದ ನಿನಗೆ ಪುತ್ರ ಶೋಕ ಪ್ರಾಪ್ತಿಯಾಗುವುದು. ವ್ಯಾಧಿಯೂ, ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು, ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು. ಇದು ಯೆಹೋವ ದೇವರಾದ ನನ್ನ ನುಡಿ.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.