Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 17 - ಕನ್ನಡ ಸಮಕಾಲಿಕ ಅನುವಾದ


ಎರಡು ಹದ್ದುಗಳು ಮತ್ತು ದ್ರಾಕ್ಷಿಗಿಡ

1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,

2 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನ್ನು ಒಗಟಾಗಿ ಹೇಳು.

3 ಅವರಿಗೆ ಹೇಳತಕ್ಕದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಶಕ್ತಿಶಾಲಿ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ಮತ್ತು ವಿಧವಿಧವಾದ ಬಣ್ಣಬಣ್ಣದ ಪುಕ್ಕಗಳಿಂದ ತುಂಬಿದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಕೊಂಬೆಯನ್ನು ಹಿಡಿದು,

4 ಅದರ ಚಿಗುರುಗಳ ಕೊನೆಯನ್ನು ಕಿತ್ತು, ವ್ಯಾಪಾರದ ದೇಶಕ್ಕೆ ತೆಗೆದುಕೊಂಡುಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು.

5 “ ‘ಅದು ದೇಶದ ಬೀಜವನ್ನೂ ಸಹ ತೆಗೆದುಕೊಂಡುಹೋಗಿ ಫಲವತ್ತಾದ ಭೂಮಿಯಲ್ಲಿ ಇರಿಸಿತು. ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿತು.

6 ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷಿಗಿಡವಾಯಿತು. ಅದರ ರೆಂಬೆಗಳು ಅವನ ಕಡೆಗೆ ತಿರುಗಿಕೊಂಡವು. ಅದರ ಬೇರುಗಳು ಅದರ ಕೆಳಗಿದ್ದವು. ಹೀಗೆ ಅದು ದ್ರಾಕ್ಷಿಗಿಡವಾಯಿತು. ಕೊಂಬೆಗಳು ಹುಟ್ಟಿಕೊಂಡು ಬಳ್ಳಿಗಳು ಹಬ್ಬಿದವು.

7 “ ‘ಶಕ್ತಿಶಾಲಿ ರೆಕ್ಕೆಗಳೂ, ಬಹಳ ಗರಿಗಳೂ ಇದ್ದ ಇನ್ನೊಂದು ದೊಡ್ಡ ಹದ್ದು ಇತ್ತು. ಆಗ ಆ ದ್ರಾಕ್ಷಿ ಗಿಡವು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅವನ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅವನ ಮೂಲಕ ನೀರನ್ನು ಪಡೆಯುತ್ತಿತ್ತು.

8 ಅದು ಕೊಂಬೆಗಳನ್ನು ಬೆಳೆಸಿ ಫಲಕೊಡುವ ಹಾಗೆಯೂ, ಒಳ್ಳೆಯ ದ್ರಾಕ್ಷಿಗಿಡ ಆಗುವ ಹಾಗೆಯೂ, ಒಳ್ಳೆಯ ಭೂಮಿಯಲ್ಲಿ ಹೆಚ್ಚು ನೀರಿನ ಬಳಿಯಲ್ಲಿ ಬೆಳೆಸಲಾಗಿತ್ತು.’

9 “ಅವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮೃದ್ಧಿಯಾಗಿರುವುದೋ? ಅದರ ಬೇರುಗಳನ್ನು ಕಿತ್ತು ಅದರ ಹಣ್ಣುಗಳನ್ನು ತೆಗೆದುಬಿಟ್ಟರೆ, ಅದು ಒಣಗುವುದಿಲ್ಲವೇ? ಅದರ ಮೊಳಕೆಯ ಎಲೆಗಳೆಲ್ಲಾ ಒಣಗಿ ಹೋದಾಗ, ಅದನ್ನು ಬೇರುಸಹಿತ ಕೀಳಬೇಕಾದರೆ ಮಹಾಬಲವಾಗಲಿ ಅಥವಾ ಬಹಳ ಜನರಾಗಲಿ ಇರಬೇಕಿಲ್ಲ.

10 ಹೌದು, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವುದೇ? ಅದಕ್ಕೆ ಪೂರ್ವದಿಕ್ಕಿನ ಗಾಳಿ ಬಡಿಯುವಾಗ ಅದು ಸಂಪೂರ್ಣವಾಗಿ ಒಣಗುವುದಿಲ್ಲವೇ? ಅದು ಮೊಳೆತ ಪಾತಿಗಳಲ್ಲಿಯೇ ಒಣಗಿ ಹೋಗುವುದಿಲ್ಲವೇ?’ ”

11 ಯೆಹೋವ ದೇವರ ವಾಕ್ಯವು ನನಗೆ ಬಂದಿತು,

12 “ ‘ಇದರ ಅಭಿಪ್ರಾಯ ನಿಮಗೆ ತಿಳಿಯುವುದಿಲ್ಲವೋ?’ ಎಂದು ತಿರುಗಿಬೀಳುವ ಮನೆಯವರಿಗೆ ಹೇಳು ಮತ್ತು ಅವರಿಗೆ, ‘ಇಗೋ, ಬಾಬಿಲೋನಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸನನ್ನೂ, ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಒಯ್ದಿದ್ದಾನೆ.

13 ಅರಸನ ಸಂತಾನದವರನ್ನು ಕರೆದುಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿ, ಅವನಿಂದ ಪ್ರಮಾಣ ಮಾಡಿಸಿ, ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.

14 ಆ ರಾಜ್ಯವು ಮೇಲೇಳದ ಹಾಗಿದ್ದರೂ, ಅವನು ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.

15 ಆದರೆ ಅರಸನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು, ತನ್ನ ರಾಯಭಾರಿಗಳನ್ನು ಈಜಿಪ್ಟಿಗೆ ಕಳುಹಿಸಿ, ತನಗೆ ಕುದುರೆಗಳನ್ನೂ, ಬಹಳ ಜನರನ್ನೂ ಕೊಡಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿಯಾಗುವನೋ? ಇಂತಹ ಸಂಗತಿಗಳನ್ನು ಮಾಡುವವನು ತಪ್ಪಿಸಿಕೊಳ್ಳುವನೋ ಅಥವಾ ಒಡಂಬಡಿಕೆಯನ್ನು ಮುರಿದು ತಪ್ಪಿಸಿಕೊಳ್ಳಲಾಗುವುದೋ?

16 “ ‘ನಿಶ್ಚಯವಾಗಿ ಯಾವನಿಂದ ಅರಸನಾಗಿ ಆಯ್ಕೆಗೊಂಡನೋ ಎಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಡಂಬಡಿಕೆಯನ್ನು ಮೀರಿದನೋ, ನನ್ನ ಜೀವದಾಣೆ ಅವನು ಇರುವಲ್ಲಿಯೇ ಬಾಬಿಲೋನಿನ ಮಧ್ಯದಲ್ಲಿ ಇವನು ಸಾಯುವನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

17 ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನೂ, ಕೋಟೆಗಳನ್ನೂ ಕಟ್ಟಿದರೂ ಯುದ್ಧದಲ್ಲಿ ಅವನಿಗೆ ಏನೂ ಪ್ರಯೋಜನವಾಗುವುದಿಲ್ಲ.

18 ಅವನು ಒಡಂಬಡಿಕೆಯನ್ನು ಮುರಿದು, ಪ್ರಮಾಣ ವಚನವನ್ನು ತಿರಸ್ಕರಿಸಿದನು. ಅವನು ಒಡಂಬಡಿಕೆಯಲ್ಲಿ ತನ್ನ ಹಸ್ತವನ್ನಿಟ್ಟಿದ್ದರೂ ಈ ಎಲ್ಲಾ ಸಂಗತಿಗಳನ್ನು ಮಾಡಿದ್ದರಿಂದ ಅವನು ತಪ್ಪಿಸಿಕೊಳ್ಳಲಾರನು.

19 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ ನಿಶ್ಚಯವಾಗಿ ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ, ಅವನು ಮೀರಿದ ಒಡಂಬಡಿಕೆಯನ್ನೂ ಅವನ ತಲೆಯ ಮೇಲೆಯೇ ಹೊರಿಸುವೆನು.

20 ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ. ಆಗ ಅವನು ನನ್ನ ಉರುಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಬಾಬಿಲೋನಿಗೆ ಕರೆತಂದಿದ್ದೇನೆ ಮತ್ತು ಅವನು ನನಗೆ ನಂಬಿಕೆದ್ರೋಹ ಮಾಡಿದ ಕಾರಣ ಅಲ್ಲಿ ಅವನಿಗೆ ನ್ಯಾಯತೀರ್ಪು ವಿಧಿಸುತ್ತೇನೆ.

21 ಅವನ ಸೈನ್ಯಗಳೆಲ್ಲಾ ಖಡ್ಗದಿಂದ ಬೀಳುವುದು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಹೋಗುವರು. ಆಗ ಯೆಹೋವ ದೇವರಾದ ನಾನೇ ಅದನ್ನು ಹೇಳಿದೆನೆಂದು ನಿಮಗೆ ತಿಳಿಯುವುದು.

22 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು. ಇದರ ತುದಿಯಲ್ಲಿರುವ ಎಳೆಯದಾದ ಕೊಂಬೆಯನ್ನು ಕತ್ತರಿಸಿ, ಎತ್ತರವಾದ ಪರ್ವತದ ಮೇಲೆ ನಾಟುವೆನು.

23 ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು. ಅದು ಕೊಂಬೆಗಳಲ್ಲಿ ಹುಟ್ಟಿಕೊಂಡು ಫಲಫಲಿಸುವುದು; ಸೊಂಪಾದ ದೇವದಾರು ಆಗುವುದು. ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಗಳೂ, ಅದರ ಕೊಂಬೆಗಳ ನೆರಳಿನ ಕೆಳಗೆ ವಾಸಮಾಡುವುವು.

24 ಯೆಹೋವ ದೇವರಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರ ಪಡಿಸಿ, ಹಸುರಾಗಿರುವುದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ, ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವುದು. “ ‘ಯೆಹೋವ ದೇವರಾದ ನಾನೇ ಮಾತನಾಡಿ, ಅದನ್ನು ನಡೆಸಿದ್ದೇನೆ.’ ”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು