ಯೆಹೆಜ್ಕೇಲನು 13 - ಕನ್ನಡ ಸಮಕಾಲಿಕ ಅನುವಾದಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು 1 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 2 “ನರಪುತ್ರನೇ, ಪ್ರವಾದಿಸುತ್ತಿರುವ ಇಸ್ರಾಯೇಲಿನ ಮನೆತನದ ಪ್ರವಾದಿಗಳಿಗೆ ವಿರುದ್ಧವಾಗಿ ನೀನು ಪ್ರವಾದಿಸಿ, ತಮ್ಮ ಸ್ವಂತ ಕಲ್ಪನೆಗಳಿಂದ ಪ್ರವಾದಿಸುತ್ತಿರುವವರಿಗೆ ಹೀಗೆ ಹೇಳು: ‘ಯೆಹೋವ ದೇವರ ವಾಕ್ಯವನ್ನು ಕೇಳಿರಿ; 3 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುತ್ತಿರುವ ಮೂರ್ಖ ಪ್ರವಾದಿಗಳೇ ನಿಮಗೆ ಕಷ್ಟ! 4 ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳಂತಿದ್ದಾರೆ. 5 ಯೆಹೋವ ದೇವರ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ಇಸ್ರಾಯೇಲ್ ಮನೆತನದವರ ಸುತ್ತಲೂ ಗೋಡೆಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರಲಿಲ್ಲ. 6 “ಯೆಹೋವ ದೇವರು ಇಂತೆನ್ನುತ್ತಾರೆ,” ಎಂದು ನುಡಿ: ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು, ಯೆಹೋವ ದೇವರು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ. 7 ನಾನು ಮಾತಾಡದೇ ಇದ್ದರೂ, “ಯೆಹೋವ ದೇವರು ಇಂತೆನ್ನುತ್ತಾರೆ,” ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನ ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು. 8 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಸುಳ್ಳಾಗಿ ಮಾತನಾಡಿದ್ದರಿಂದಲೂ, ಸುಳ್ಳನ್ನು ದರ್ಶಿಸಿದ್ದರಿಂದಲೂ ಇಗೋ, ನಾನು ನಿಮಗೆ ವಿರೋಧವಾಗಿರುವೆನು. ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. 9 ಸುಳ್ಳಾದದ್ದನ್ನು ದರ್ಶಿಸಿ, ಸುಳ್ಳು ಕಣಿ ಹೇಳುವ ಪ್ರವಾದಿಗಳಿಗೆ ವಿರುದ್ಧವಾಗಿ ನನ್ನ ಹಸ್ತವಿರುವುದು. ಅವರು ನನ್ನ ಜನರ ಸಭೆಯಲ್ಲಿ ಇರುವುದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲಾಗುವುದೂ ಇಲ್ಲ. ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವುದೂ ಇಲ್ಲ. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. 10 “ ‘ಏಕೆಂದರೆ ಸಮಾಧಾನವಿಲ್ಲದಿರುವಾಗ ಅವರು, “ಸಮಾಧಾನವಿದೆ,” ಎಂದು ಹೇಳಿ, ನನ್ನ ಜನರನ್ನು ತಪ್ಪು ದಾರಿಗೆ ನಡೆಸಿದ್ದಾರೆ. ಒಬ್ಬನು ದುರ್ಬಲ ಗೋಡೆಯನ್ನು ಕಟ್ಟಿದರೆ, ಈ ಪ್ರವಾದಿಗಳ ಗುಂಪು ಅದಕ್ಕೆ ಸುಣ್ಣ ಹಚ್ಚಿದ್ದಾರೆ. 11 ಆದ್ದರಿಂದ ಸುಣ್ಣ ಹಚ್ಚುತ್ತಿರುವವನಿಗೆ ಅದು ಬೀಳುವುದೆಂದು ಹೇಳು. ಅಲ್ಲಿ ವಿಪರೀತ ಮಳೆ ಬರುವುದು ಮತ್ತು ದೊಡ್ಡ ಕಲ್ಮಳೆಯು ಬೀಳುವುದು. ಬಿರುಗಾಳಿಯು ಅದನ್ನು ಸೀಳಿಬಿಡುವುದು. 12 “ಗೋಡೆ ಬಿದ್ದುಹೋದ ಮೇಲೆ, ನೀವು ಹಚ್ಚಿದ ಸುಣ್ಣ ಎಲ್ಲಿ?” ಎಂದು ನಿಮಗೆ ಕೇಳುವರಲ್ಲವೆ? 13 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದನ್ನು ನನ್ನ ರೋಷದಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ, ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳು ಸುರಿಯುವುವು. 14 ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ, ನೆಲಸಮಮಾಡಿ, ಅದರ ಅಸ್ತಿವಾರವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವಾಗ, ನೀವು ಅದರಲ್ಲಿ ನಾಶವಾಗುವಿರಿ. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿದುಬರುವುದು. 15 ಹೀಗೆ ನಾನು ಗೋಡೆಯಲ್ಲಿಯೂ, ಅದಕ್ಕೆ ಸುಣ್ಣ ಬಳಿದವರಲ್ಲಿಯೂ ರೋಷವನ್ನು ತೀರಿಸಿಕೊಂಡು, “ಇನ್ನು ಗೋಡೆಯಾದರೂ ಅದಕ್ಕೆ ಸುಣ್ಣ ಹಚ್ಚಿದವರಾದರೂ ಇರುವುದಿಲ್ಲವೆಂದೂ, 16 ಯೆರೂಸಲೇಮಿನ ವಿಷಯ ಪ್ರವಾದಿಸಿ, ಸಮಾಧಾನವಿಲ್ಲದಿರುವಾಗ ಅದಕ್ಕೆ ಸಮಾಧಾನದ ದರ್ಶನವನ್ನು ಕಂಡ ಇಸ್ರಾಯೇಲಿನ ಪ್ರವಾದಿಗಳು ಇರುವುದಿಲ್ಲವೆಂದೂ, ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.” ’ 17 “ಈಗ ಮನುಷ್ಯಪುತ್ರನೇ, ನೀನು ತಮ್ಮ ಸ್ವಂತ ಕಲ್ಪನೆಯಿಂದ ಪ್ರವಾದಿಸುವ ನಿನ್ನ ಜನರ ಪುತ್ರಿಯರಿಗೆ ವಿರೋಧವಾಗಿ ನಿನ್ನ ಮುಖವನ್ನಿಟ್ಟು, ಅವರಿಗೆ ವಿರೋಧವಾಗಿ ಪ್ರವಾದಿಸಿ, 18 ಹೀಗೆ ಹೇಳು ಎಂದು, ‘ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಪ್ರಾಣಗಳನ್ನು ಬೇಟೆಯಾಡಬೇಕೆಂದು ಎಲ್ಲರ ಮೊಣಕೈಗಳಿಗೆ ದಿಂಡುಗಳನ್ನು ಹೊಲೆದು ಮತ್ತು ಪ್ರತಿಯೊಬ್ಬನ ಎತ್ತರದ ತಲೆಗಳಿಗೆ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಪುತ್ರಿಯರಿಗೆ ಕಷ್ಟ! ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ, ನಿಮ್ಮ ಬಳಿಗೆ ಬರುವ ಪ್ರಾಣಗಳನ್ನು ಬದುಕಿಸುವಿರೋ? 19 ಸುಳ್ಳಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಸಾಯದಿರುವವರನ್ನು ಸಾಯಿಸಿ, ಸಾಯುವವರನ್ನು ಬದುಕಿಸಿ, ಒಂದು ಹಿಡಿ ಜವೆಗೋಧಿಗೂ, ತುಂಡು ರೊಟ್ಟಿಗೂ ನನ್ನನ್ನು ನನ್ನ ಜನರೊಳಗೆ ಅಪವಿತ್ರಗೊಳಿಸುವಿರೋ? 20 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ವಿರೋಧವಾಗಿದ್ದೇನೆ. ಅವುಗಳನ್ನು ನಿಮ್ಮ ತೋಳುಗಳಿಂದ ಹರಿದುಬಿಡುವೆನು. ನೀವು ಬೇಟೆಯಾಡುವಂತೆ ಬೇಟೆಯಾಡಿದ ಪ್ರಾಣಗಳನ್ನು ಬಿಡಿಸುತ್ತೇನೆ. 21 ನಿಮ್ಮ ವಸ್ತ್ರಗಳನ್ನು ಹರಿದು, ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುತ್ತೇನೆ. ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ. ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. 22 ಏಕೆಂದರೆ ನಾನು ಯಾವನನ್ನು ದುಃಖಪಡಿಸಲಿಲ್ಲವೋ, ಆ ನೀತಿವಂತರ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು, ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವರನ್ನು ಪ್ರೋತ್ಸಾಹಿಸಿದ್ದೀರಿ. 23 ಆದ್ದರಿಂದ ನೀವು ಇನ್ನು ಮೇಲೆ ಸುಳ್ಳು ದರ್ಶನಗಳನ್ನು ಕಾಣುವುದಿಲ್ಲ ಮತ್ತು ಸುಳ್ಳು ದೈವೋಕ್ತಿಗಳನ್ನು ಅಭ್ಯಾಸಿಸುವುದಿಲ್ಲ. ಏಕೆಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ಬಿಡಿಸುವೆನು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.’ ” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.