ಯೆಶಾಯ 7 - ಕನ್ನಡ ಸಮಕಾಲಿಕ ಅನುವಾದಇಮ್ಮಾನುಯೇಲನ ಸಂಕೇತ 1 ಯೋತಾಮನ ಮಗನೂ, ಉಜ್ಜೀಯನ ಮೊಮ್ಮಗನೂ, ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ, ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ, ಇಸ್ರಾಯೇಲರ ಅರಸನೂ ಆದ ಪೆಕಹ ಎಂಬುವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ. 2 ಸಿರಿಯಾದವರು ಎಫ್ರಾಯೀಮ್ಯರೊಂದಿಗೆ ಜತೆಗೂಡಿದ್ದಾರೆಂದು ದಾವೀದನ ವಂಶದವರಿಗೆ ತಿಳಿದಾಗ, ಆಹಾಜನ ಮತ್ತು ಅವರ ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು. 3 ಆಗ ಯೆಹೋವ ದೇವರು ಯೆಶಾಯನಿಗೆ, “ನೀನು ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗಿ, ಅಗಸರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಳ್ಳು. 4 ಅವನಿಗೆ, ಈ ಪ್ರಕಾರ ಹೇಳಬೇಕು: ‘ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ. ರೆಚೀನ, ಅರಾಮ್ಯರು, ಮತ್ತು ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ. 5 ಏಕೆಂದರೆ, ಸಿರಿಯಾದವರೂ ಎಫ್ರಾಯೀಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ಒಳಸಂಚುಮಾಡಿ, 6 “ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ, ಅದನ್ನು ವ್ಯಥೆಪಡಿಸಿ, ಅದರಲ್ಲಿ ನಮಗಾಗಿ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ, ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೆಯೇಲನ ಮಗನನ್ನು ನೇಮಿಸಿಕೊಳ್ಳೋಣ,” ಎಂದುಕೊಂಡಿದ್ದಾರೆ. 7 ಅದಕ್ಕೆ ಸಾರ್ವಭೌಮ ಯೆಹೋವ ದೇವರು, “ ‘ಅದು ನಿಲ್ಲುವುದಿಲ್ಲ, ಅದು ಆಗುವುದೇ ಇಲ್ಲ. 8 ಏಕೆಂದರೆ, ದಮಸ್ಕವು ಸಿರಿಯಾದ ರಾಜಧಾನಿ ಮತ್ತು ದಮಸ್ಕದ ತಲೆಯು ರೆಚೀನ ಮಾತ್ರ, ಅರವತ್ತೈದು ವರುಷಗಳೊಳಗೆ ಎಫ್ರಾಯೀಮರು ರಾಷ್ಟ್ರವಾಗದೆ ಭಂಗಪಡುವರು. 9 ಎಫ್ರಾಯೀಮಿನ ರಾಜಧಾನಿ ಸಮಾರ್ಯ. ಸಮಾರ್ಯದ ರಾಜಧಾನಿ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ,’ ಎಂದು ಹೇಳುತ್ತಾರೆ.” 10 ಯೆಹೋವ ದೇವರು ಆಹಾಜನಿಗೆ ಹೇಳಿದ್ದೇನೆಂದರೆ: 11 “ನಿನ್ನ ದೇವರಾದ ಯೆಹೋವ ದೇವರಿಂದ ಒಂದು ಗುರುತನ್ನು ಕೇಳು. ಅದು ಕೆಳಗೆ ಆಳದಲ್ಲಿದ್ದರೂ, ಮೇಲೆ ಎತ್ತರಲ್ಲಿದ್ದರೂ ಅದನ್ನು ಕೇಳಿಕೋ,” ಎಂದು ಹೇಳಿದರು. 12 ಆದರೆ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ; ಯೆಹೋವ ದೇವರನ್ನು ಪರೀಕ್ಷಿಸುವುದೂ ಇಲ್ಲ” ಎಂದನು. 13 ಅದಕ್ಕೆ ಯೆಶಾಯನು, “ದಾವೀದನ ವಂಶದವರೇ! ಈಗ ಕೇಳಿರಿ, ಮನುಷ್ಯರ ತಾಳ್ಮೆಯನ್ನು ಪರೀಕ್ಷಿಸುವುದು ಸಾಕಾಗುವುದಿಲ್ಲವೇ? ನೀವು ನನ್ನ ದೇವರ ತಾಳ್ಮೆಯನ್ನು ಪರೀಕ್ಷಿಸುವಿರಾ? 14 ಆದಕಾರಣ ಯೆಹೋವ ದೇವರು ತಾವೇ ಒಂದು ಗುರುತನ್ನು ನಿನಗೆ ಕೊಡುವರು. ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು. ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು. 15 ಆ ಮಗು ಬೆಳೆದು, ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವಳಿಕೆಯು ಬರುವ ತನಕ ಮೊಸರನ್ನು ಮತ್ತು ಜೇನನ್ನು ತಿನ್ನುವುದು. 16 ಹೌದು, ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವುದಕ್ಕಿಂತ ಮುಂಚೆಯೇ, ನೀನು ಭಯಪಡುವ ಆ ಅರಸರುಗಳ ದೇಶ ನಿರ್ಜನವಾಗುವುದು. 17 ಯೆಹೋವ ದೇವರು ನಿನ್ನ ಮೇಲೆಯೂ, ನಿನ್ನ ಜನರ ಮೇಲೆಯೂ, ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾಯೀಮು ಅಗಲಿದ ದಿನದಿಂದ ಅಂದರೆ ಅಸ್ಸೀರಿಯದ ಅರಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವರು.” ಯೆಹೋವ ದೇವರ ಉಪಕರಣವಾದ ಅಸ್ಸೀರಿಯ ದೇಶ 18 ಆ ದಿನದಲ್ಲಿ ಈಜಿಪ್ಟಿನ ನದಿಗಳ ಕಟ್ಟಕಡೆಯಿಂದ ನೊಣಕ್ಕೂ, ಅಸ್ಸೀರಿಯ ದೇಶದ ಜೇನುಹುಳಕ್ಕೂ ಯೆಹೋವ ದೇವರು ಸಿಳ್ಳುಹಾಕುವರು. 19 ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವುವು. 20 ಅದೇ ದಿನದಲ್ಲಿ ಯೆಹೋವ ದೇವರು ಯೂಫ್ರೇಟೀಸ್ ನದಿಯ ಆಚೆಗಿರುವ ಅಸ್ಸೀರಿಯದ ರಾಜನೆಂಬುವನಿಂದ ಬಾಡಿಗೆ ಕ್ಷೌರದ ಕತ್ತಿಯಿಂದ ಯೆಹೂದದ ತಲೆ ಮತ್ತು ಕಾಲಿನ ಕೂದಲನ್ನು ಬೋಳಿಸುವರು ಹಾಗೂ ಗಡ್ಡವನ್ನು ತೆಗೆದುಬಿಡುವರು. 21 ಆ ದಿನದಲ್ಲಿ ಮನುಷ್ಯನು ಒಂದು ಹಸುವಿನ ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು. 22 ಅವು ಸಮೃದ್ಧಿಯಾಗಿ ಹಾಲನ್ನು ಕೊಡುವುದರಿಂದ ಅವನು ಮೊಸರನ್ನು ತಿನ್ನುವನು. ಏಕೆಂದರೆ ಆ ದೇಶದಲ್ಲಿ ಉಳಿದಿರುವವರೆಲ್ಲರೂ ಮೊಸರನ್ನು ಮತ್ತು ಜೇನುತುಪ್ಪವನ್ನು ತಿನ್ನುವರು. 23 ಆ ದಿನದಲ್ಲಿ ಸಾವಿರ ಬೆಳ್ಳಿ ನಾಣ್ಯಗಳ ಬೆಲೆಯ ಸಮಸ್ತ ದ್ರಾಕ್ಷಿಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿಗಳಿಂದ ಆಗುವುದು. 24 ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವುದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು. 25 ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ. ಆದರೆ ಅದು ಎತ್ತುಗಳನ್ನು ಬಿಡುವುದಕ್ಕೂ, ಕುರಿಗಳು ತುಳಿದಾಡುವುದಕ್ಕೂ ಗುರಿಯಾಗುವುದು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.