ಯೆಶಾಯ 60 - ಕನ್ನಡ ಸಮಕಾಲಿಕ ಅನುವಾದಚೀಯೋನಿನ ಮಹಿಮೆ 1 ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು, ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು. 2 ಇಗೋ, ಕತ್ತಲೆ ಭೂಮಿಯನ್ನೂ, ಗಾಢಾಂಧಕಾರವು ಜನರನ್ನೂ ಮುಚ್ಚುವುದು. ಆದರೆ ನಿನ್ನ ಮೇಲೆ ಯೆಹೋವ ದೇವರು ಉದಯಿಸುವರು. ಆತನ ಮಹಿಮೆಯು ನಿನ್ನ ಮೇಲೆ ಕಾಣಬರುವುದು. 3 ಇತರ ಜನಾಂಗಗಳು ನಿನ್ನ ಪ್ರಕಾಶಕ್ಕೂ, ಅರಸರು ನಿನ್ನ ಉದಯದ ಕಾಂತಿಗೂ ಬರುವರು. 4 ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು. ಅವರೆಲ್ಲರು ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ. ನಿನ್ನ ಪುತ್ರರು ದೂರದಿಂದ ಬರುವರು, ನಿನ್ನ ಪುತ್ರಿಯರು ಕಂಕುಳಿನಲ್ಲಿ ಕುಳಿತು ಬರುವರು. 5 ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವುದು, ಏಕೆಂದರೆ ಸಮುದ್ರದ ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವುದು. ಇತರ ಜನಾಂಗಗಳ ಆಸ್ತಿಯು ನಿನ್ನ ಬಳಿಗೆ ಬರುವುದು. 6 ಒಂಟೆಗಳ ಸಮೂಹವು ನಿನ್ನ ದೇಶದಲ್ಲಿ ತುಂಬಿಕೊಳ್ಳುವುದು. ಮಿದ್ಯಾನಿನ ಏಫಾದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೆಬದಿಂದಲೂ ಬರುವುವು. ಬಂಗಾರವನ್ನೂ, ಧೂಪವನ್ನೂ ತರುವುವು. ಯೆಹೋವ ದೇವರ ಸ್ತೋತ್ರಗಳನ್ನು ಸಾರುವುವು. 7 ಕೇದಾರಿನ ಮಂದೆಗಳೆಲ್ಲಾ ನಿನ್ನಲ್ಲಿ ಸೇರಿಬರುವುವು. ನೆಬಾಯೋತಿನ ಟಗರುಗಳು ನಿನ್ನನ್ನು ಸೇವಿಸುವುವು. ನನ್ನ ಬಲಿಪೀಠದ ಮೇಲೆ ಮೆಚ್ಚಿಕೆಯಿಂದ ಏರುವುವು. ನನ್ನ ಮಹಿಮೆಯ ಆಲಯವನ್ನು ಘನಪಡಿಸುವೆನು. 8 ಮೇಘದಂತೆಯೂ, ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? 9 ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ ನನಗೋಸ್ಕರ ದೂರದಿಂದ ನಿನ್ನ ಪುತ್ರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಯೆಹೋವ ದೇವರ ಬಳಿಗೂ, ನಿನ್ನನ್ನು ವೈಭವದಿಂದ ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವುದರಲ್ಲಿ ಮುಂದಾಗುತ್ತಿವೆ. 10 ಇದಲ್ಲದೆ ವಿದೇಶಿಯರು ನಿನ್ನ ಗೋಡೆಗಳನ್ನು ಕಟ್ಟುವರು. ಅವರ ಅರಸರು ಸಹ ನಿನಗೆ ಸೇವೆಮಾಡುವರು. ಏಕೆಂದರೆ ನನ್ನ ಬೇಸರದಲ್ಲಿ ನಿನ್ನನ್ನು ಹೊಡೆದೆನು. ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. 11 ಆದ್ದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವುವು. ಇತರ ಜನಾಂಗಗಳ ಆಸ್ತಿ ನಿನ್ನ ಬಳಿಗೆ ತರುತ್ತಿರುವರು. ಅವರ ಅರಸರು ಸಹ ಬಂಧುಗಳಾಗಿ ನಿನ್ನ ಮೆರವಣಿಗೆಯಲ್ಲಿ ಮುನ್ನಡೆಸಿದರು ಹಗಲುರಾತ್ರಿ ಅವು ಮುಚ್ಚಿರುವುದಿಲ್ಲ. 12 ನಿನ್ನನ್ನು ಸೇವಿಸದ ಜನಾಂಗವೂ, ರಾಜ್ಯವೂ ನಾಶವಾಗುವುದು. ಆ ಜನಾಂಗಗಳು ಸಂಪೂರ್ಣವಾಗಿ ಹಾಳಾಗುವುವು. 13 ಲೆಬನೋನಿನ ವೈಭವವು ತುರಾಯಿ, ಅಗಸೆ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವುದಕ್ಕೆ ನಿನ್ನ ಬಳಿಗೆ ಬರುವುವು. ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. 14 ಆಗ ನಿನ್ನನ್ನು ಕುಗ್ಗಿಸಿದವರು, ಬಗ್ಗಿಕೊಂಡು ನಿನ್ನ ಬಳಿಗೆ ಬರುವರು. ನಿನ್ನನ್ನು ಅಸಹ್ಯಿಸಿದವರೆಲ್ಲರೂ ನಿನ್ನ ಪಾದಗಳಿಗೆ ಅಡ್ಡಬಿದ್ದು, ನಿನ್ನನ್ನು ಯೆಹೋವ ದೇವರ ಪಟ್ಟಣವೆಂದೂ, ಇಸ್ರಾಯೇಲಿನ ಪರಿಶುದ್ಧನ ಚೀಯೋನೆಂದೂ ಕರೆಯುವರು. 15 ನಿನ್ನೊಳಗೆ ನಿವಾಸಿಗಳು ಬಿಟ್ಟುಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು ನಿತ್ಯ ಘನತೆಯನ್ನು ದಯಪಾಲಿಸಿ ನಿನ್ನನ್ನು ಎಲ್ಲಾ ಸಂತತಿಗಳಲ್ಲಿಯೂ ಉಲ್ಲಾಸವಾಗಿರುವಂತೆ ಮಾಡುವೆನು. 16 ಇತರ ಜನಾಂಗಗಳವರಿಂದ ಹಾಲನ್ನು ಕುಡಿಯುವೆ. ಅರಸರು ನಿನಗೆ ಹಾಲು ಕುಡಿಸುವರು. ಯೆಹೋವನಾದ ನಾನೇ ನಿನ್ನ ರಕ್ಷಕನೂ, ನಿನ್ನ ವಿಮೋಚಕನೂ, ಯಾಕೋಬಿನ ಪರಾಕ್ರಮಿಯೂ ಎಂದು ತಿಳಿದುಕೊಳ್ಳುವೆ. 17 ಕಂಚಿನ ಬದಲಾಗಿ ನಿನಗೆ ಬಂಗಾರವನ್ನು ತರುವೆನು. ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ, ಮರಕ್ಕೆ ಬದಲಾಗಿ ಕಂಚನ್ನೂ, ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು. ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ನೀತಿಯನ್ನು ನಿನಗೆ ಅಧಿಕಾರಿಯನ್ನಾಗಿ ಮಾಡುವೆನು. 18 ಬಲಾತ್ಕಾರವೂ, ನಿನ್ನ ದೇಶದೊಳಗೆ ಹಾಳಾದದ್ದೂ, ನಾಶವೂ, ನಿನ್ನ ಮೇರೆಗಳಲ್ಲಿ ಕೇಳಿಬರುವುದಿಲ್ಲ. ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ, ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿಡುವೆ. 19 ಇನ್ನು ಮೇಲೆ ಸೂರ್ಯನು ನಿನಗೆ ಹಗಲಿನಲ್ಲಿ ಬೆಳಕಾಗಿರುವುದಿಲ್ಲ. ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವುದಿಲ್ಲ. ಆದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನಿನ್ನ ದೇವರು ನಿನ್ನ ಬೆಳಗುವ ತೇಜಸ್ಸಾಗಿರುವರು. 20 ನಿನ್ನ ಸೂರ್ಯನು ಅಸ್ತಮಿಸುವುದಿಲ್ಲ. ನಿನ್ನ ಚಂದ್ರನು ಕಾಣದೆ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನೀನು ದುಃಖಿಸುವ ದಿನಗಳು ಸಮಾಪ್ತಿಯಾಗುವುದು. 21 ನಿನ್ನ ಜನರೆಲ್ಲರೂ ನೀತಿವಂತರಾಗಿರುವರು. ದೇಶವನ್ನು ಸದಾಕಾಲಕ್ಕೆ ಸ್ವಾಧೀನಮಾಡಿಕೊಳ್ಳುವರು. ನಾನು ಮಹಿಮೆ ಹೊಂದುವುದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ, ನನ್ನ ಕೈ ಸೃಷ್ಟಿಯೂ ಆಗಿರುವರು. 22 ಕನಿಷ್ಠನು ಸಾವಿರವಾಗುವನು, ಅಲ್ಪನಿಂದ ಬಲವಾದ ಜನಾಂಗವಾಗುವುದು. ಯೆಹೋವನೆಂಬ ನಾನು ಕ್ಲುಪ್ತ ಕಾಲದಲ್ಲಿ ಇದನ್ನು ಬಹು ಬೇಗನೆ ಉಂಟುಮಾಡುವೆನು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.