Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 6 - ಕನ್ನಡ ಸಮಕಾಲಿಕ ಅನುವಾದ


ಯೆಶಾಯನ ಆಯೋಗ

1 ಅರಸನಾದ ಉಜ್ಜೀಯನು ಮರಣ ಹೊಂದಿದ ವರುಷದಲ್ಲಿ ಯೆಹೋವ ದೇವರು ಉನ್ನತೋನ್ನತವಾಗಿ ಸಿಂಹಾಸನದ ಮೇಲೆ ಕೂತಿರುವುದನ್ನು ಕಂಡೆನು. ಅವರ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.

2 ಅವರ ಮೇಲೆ ಸೆರಾಫಿಯರು ನಿಂತಿದ್ದರು. ಪ್ರತಿಯೊಬ್ಬನಿಗೂ ಆರು ರೆಕ್ಕೆಗಳಿದ್ದವು. ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದರು.

3 ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರ ಯೆಹೋವ ದೇವರು ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು. ಭೂಮಂಡಲವೆಲ್ಲಾ ಅವರ ಮಹಿಮೆಯಿಂದ ತುಂಬಿದೆ,” ಎಂದು ಕೂಗಿ ಹೇಳಿದನು.

4 ಕೂಗುವವನ ಸ್ವರಕ್ಕೆ ದ್ವಾರದ ನಿಲುವುಗಳು ಕದಲಿದವು; ಧೂಮವು ಆಲಯವನ್ನೆಲ್ಲ ತುಂಬಿತು.

5 ಆಗ ನಾನು, “ಅಯ್ಯೋ, ನಾನು ನಾಶವಾದೆನಲ್ಲಾ! ಏಕೆಂದರೆ, ನಾನು ಅಶುದ್ಧ ತುಟಿಯವನು. ನಾನು ಅಶುದ್ಧ ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು. ನನ್ನ ಕಣ್ಣುಗಳು ರಾಜಾಧಿರಾಜರೂ ಸೇನಾಧೀಶ್ವರ ಯೆಹೋವ ದೇವರನ್ನು ಕಂಡವು!” ಎಂದೆನು.

6 ಆಗ ಸೆರಾಫಿಯರಲ್ಲಿ ಒಬ್ಬನು ಬಲಿಪೀಠದಿಂದ ತಾನು ಉರಿಯುವ ಕೆಂಡವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಹಾರಿ ಬಂದು,

7 ಅದರಿಂದ ನನ್ನ ಬಾಯಿಗೆ ಮುಟ್ಟಿಸಿ, “ಇಗೋ, ಇದು ನಿನ್ನ ತುಟಿಗಳನ್ನು ತಗಲಿದೆ. ನಿನ್ನ ದೋಷವು ತೊಲಗಿದೆ, ನಿನ್ನ ಪಾಪಪರಿಹಾರ ಆಯಿತು,” ಎಂದು ಹೇಳಿದನು.

8 ಆಗ, “ಯಾರನ್ನು ಕಳುಹಿಸಲಿ, ಯಾರು ನಮಗೋಸ್ಕರ ಹೋಗುವರು?” ಎಂಬ ಯೆಹೋವ ದೇವರ ನುಡಿಯನ್ನು ನಾನು ಕೇಳಿ, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿರಿ,” ಎಂದೆನು.

9 ಅದಕ್ಕೆ ಅವರು, “ನೀನು ಈ ಜನರ ಬಳಿಗೆ ಹೋಗಿ: “ ‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ,’

10 ತಮ್ಮ ಕಣ್ಣುಗಳಿಂದ ನೋಡದಂತೆಯೂ, ತಮ್ಮ ಕಿವಿಗಳಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗದಂತೆಯೂ ಈ ಜನರ ಹೃದಯವನ್ನು ಕಠಿಣಗೊಳಿಸಿ, ಅವರ ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣುಗಳನ್ನು ಮೊಬ್ಬಾಗಿಸು,” ಎಂದು ನನಗೆ ಹೇಳಿದರು.

11 ಆಗ ನಾನು, “ಯೆಹೋವ ದೇವರೇ, ಇದು ಎಷ್ಟರವರೆಗೆ?” ಎಂದೆನು. ಅದಕ್ಕೆ ಅವರು ಹೀಗೆ ಉತ್ತರಕೊಟ್ಟರು, “ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯನಿಲ್ಲದೆ, ಹೊಲಗಳು ಸಂಪೂರ್ಣವಾಗಿ ಹಾಳಾಗುವವರೆಗೂ,

12 ಯೆಹೋವ ದೇವರಾದ ನಾನು ಮನುಷ್ಯರನ್ನು ದೂರ ಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗಿರುವುದು.

13 ಆದರೆ ದೇಶದಲ್ಲಿ ಹತ್ತನೆಯ ಪಾಲು ಉಳಿದಿದ್ದರೂ, ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ. ಅದೇ ರೀತಿಯಾಗಿ ಪವಿತ್ರ ಜನರು ದೇಶದಲ್ಲಿ ಬುಡವಾಗಿ ಉಳಿದಿರುವರು.”

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು