Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 56 - ಕನ್ನಡ ಸಮಕಾಲಿಕ ಅನುವಾದ


ಇತರರಿಗೂ ಜನರಿಗೆ ರಕ್ಷಣೆ

1 ಯೆಹೋವ ದೇವರು ಹೇಳುವುದೇನೆಂದರೆ: “ನ್ಯಾಯವನ್ನು ಕೈಗೊಳ್ಳಿರಿ, ನೀತಿಯಲ್ಲಿ ನಡೆಯಿರಿ. ಏಕೆಂದರೆ ನನ್ನ ರಕ್ಷಣೆಯು ಬರುವುದಕ್ಕೂ, ನನ್ನ ನೀತಿಯು ಪ್ರಕಟವಾಗುವುದಕ್ಕೂ ಸಮೀಪವಾಗಿದೆ.

2 ಇದನ್ನು ಮಾಡುವ ಮನುಷ್ಯನೂ, ಇದನ್ನು ಹಿಡಿದುಕೊಳ್ಳುವವರ ಪುತ್ರನೂ ಎಂದರೆ ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಗೊಳ್ಳುವವನೂ ಮತ್ತು ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.”

3 ಯೆಹೋವ ದೇವರನ್ನು ಸೇರಿಕೊಂಡ ವಿದೇಶೀಯನು, “ಯೆಹೋವ ದೇವರು ತಮ್ಮ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವರು,” ಎಂದು ಹೇಳದಿರಲಿ. ಮತ್ತು ನಪುಂಸಕನು, “ನಾನು ಕೇವಲ ಒಣಗಿದ ಮರ,” ಎಂದು ಹೇಳದಿರಲಿ.

4 ಯೆಹೋವ ದೇವರು ಹೇಳುವುದೇನೆಂದರೆ, “ನನ್ನ ಸಬ್ಬತ್ ದಿನವನ್ನು ಕೈಗೊಂಡು, ನನಗೆ ಮೆಚ್ಚಿಗೆಯಾದದ್ದನ್ನು ಆಯ್ದುಕೊಂಡು, ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವ ನಪುಂಸಕರಿಗೆ,

5 ನನ್ನ ಆಲಯದಲ್ಲಿಯೂ ಗೋಡೆಗಳ ಬಳಿಗೂ ಪುತ್ರ ಪುತ್ರಿಯರಿಗಿಂತ ಉತ್ತಮವಾದ ಸ್ಥಳವನ್ನೂ, ಹೆಸರನ್ನೂ ನಾನು ಕೊಡುತ್ತೇನೆ. ನಾನು ಅವರಿಗೆ ಎಂದಿಗೂ ಅಳಿಯದ ಶಾಶ್ವತವಾದ ಹೆಸರನ್ನು ಕೊಡುವೆನು.

6 ಯೆಹೋವ ದೇವರಾದ ನನ್ನನ್ನು ಸೇವಿಸುವುದಕ್ಕೂ, ನನ್ನ ಹೆಸರನ್ನು ಪ್ರೀತಿಸಿ, ನನಗೆ ಸೇವಕರಾಗಿರಲು ತಾವಾಗಿ ಯೆಹೋವ ದೇವರೊಂದಿಗೆ ಸೇರಿಕೊಂಡಿರುವ ವಿದೇಶಿಯರು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ, ಅದನ್ನು ಕೈಗೊಂಡು, ನನ್ನ ಒಡಂಬಡಿಕೆಯನ್ನು ಭದ್ರವಾಗಿ ಪಾಲಿಸುವವರನ್ನು

7 ನನ್ನ ಪರಿಶುದ್ಧ ಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವನ್ನು ಉಂಟುಮಾಡುವೆನು. ನನ್ನ ಬಲಿಪೀಠದ ಮೇಲೆ ಅವರು ಅರ್ಪಿಸುವ ದಹನಬಲಿಗಳು, ಯಜ್ಞಗಳು ನನಗೆ ಒಪ್ಪಿಗೆಯಾಗುವುವು, ಏಕೆಂದರೆ ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವು ಎಂದು ಎನಿಸಿಕೊಳ್ಳುವುದು.”

8 ಇಸ್ರಾಯೇಲಿನ ಸೆರೆಹೋದ ಜನರನ್ನು ಕೂಡಿಸುವಂಥ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು.”


ಅಧಿಪತಿಗಳ ಅತ್ಯಾಸೆ, ಜನರ ದ್ರೋಹ

9 ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವುದಕ್ಕೆ ಬನ್ನಿರಿ.

10 ಇಸ್ರಾಯೇಲಿನ ಕಾವಲುಗಾರರು ಕುರುಡರು. ಅವರೆಲ್ಲರೂ ಅರಿವಿಲ್ಲದವರು. ಅವರೆಲ್ಲರೂ ಮೂಕ ನಾಯಿಗಳು, ಅವು ಬೊಗಳಲಾರವು, ಕನಸು ಕಾಣುತ್ತವೆ, ಬಿದ್ದುಕೊಂಡಿರುತ್ತವೆ. ನಿದ್ರೆಯನ್ನು ಪ್ರೀತಿಸುತ್ತವೆ.

11 ಹೌದು, ಎಂದಿಗೂ ಸಾಕೆನ್ನದ ಹೊಟ್ಟೆಬಾಕ ನಾಯಿಗಳು ಮತ್ತು ಅವರು ಗ್ರಹಿಕೆ ಇಲ್ಲದ ಕುರುಬರು, ಅವರೆಲ್ಲರೂ ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ, ಪ್ರತಿಯೊಬ್ಬನೂ ತನ್ನ ಲಾಭ ಸಿಕ್ಕುವ ಕಡೆಗೂ ತಿರುಗಿಕೊಳ್ಳುವನು.

12 “ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು. ನಮ್ಮನ್ನು ನಾವೇ ಬೇಕಾದಷ್ಟು ಮದ್ಯದಿಂದ ತುಂಬಿಕೊಳ್ಳುವ! ನಾಳೆಯು ಈ ದಿವಸದಂತೆಯೇ ಇರುವುದು. ಅಥವಾ ಇದಕ್ಕಿಂತಲೂ ಚೆನ್ನಾಗಿರುವುದು,” ಎಂದು ಪ್ರತಿಯೊಬ್ಬನೂ ಹೇಳುತ್ತಾನೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು