ಯೆಶಾಯ 52 - ಕನ್ನಡ ಸಮಕಾಲಿಕ ಅನುವಾದ1 ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಧರಿಸಿಕೋ! ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ವೈಭವದ ಉಡುಪುಗಳನ್ನು ಹಾಕಿಕೋ ಏಕೆಂದರೆ ಇಂದಿನಿಂದ ಸುನ್ನತಿ ಇಲ್ಲದವರೂ, ಅಶುದ್ಧರೂ ನಿನ್ನೊಳಗೆ ಬರುವುದಿಲ್ಲ. 2 ಯೆರೂಸಲೇಮೇ ಧೂಳನ್ನು ಝಾಡಿಸಿಕೋ, ಎದ್ದು ಆಸನದ ಮೇಲೆ ಕುಳಿತುಕೋ. ಸೆರೆಯಾದ ಚೀಯೋನ್ ಪುತ್ರಿಯೇ, ನಿನ್ನ ಕುತ್ತಿಗೆಯ ಬಂಧನಗಳನ್ನು ಬಿಚ್ಚಿಕೋ. 3 ಏಕೆಂದರೆ ಯೆಹೋವ ದೇವರು ಹೇಳುವುದೇನೆಂದರೆ: “ನಿಮ್ಮನ್ನು ನೀವೇ ನಿಷ್ಪಲವಾಗಿ ಮಾಡಿಕೊಂಡಿರಿ. ಹಣವಿಲ್ಲದೆ ನೀವು ವಿಮೋಚನೆ ಹೊಂದುವಿರಿ.” 4 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವುದಕ್ಕೆ ಈಜಿಪ್ಟಿಗೆ ಹೋದರು. ಅಸ್ಸೀರಿಯದವರು ಕಾರಣವಿಲ್ಲದೆ ಅವರಿಗೆ ಬಾಧೆಪಡಿಸಿದರು. 5 “ಈಗ ನನಗೆ ಇಲ್ಲಿ ಏನಿದೆ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಜನರನ್ನು ವ್ಯರ್ಥವಾಗಿ ಒಯ್ದಿದ್ದಾರೆ. ಆಳುವವರು ಅವರನ್ನು ಗೋಳಾಡಿಸುತ್ತಿದ್ದಾರೆ. ನನ್ನ ನಾಮವು ಪ್ರತಿದಿನವೂ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ! ಎಂದು ಯೆಹೋವ ದೇವರು ಹೇಳುತ್ತಾರೆ. 6 ಆದ್ದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು. ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಅದು ನಾನೇ ಎಂದು ಅವರು ಗ್ರಹಿಸುವರು.” 7 ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಒಳ್ಳೆಯ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವವನ ಪಾದಗಳು ಪರ್ವತಗಳ ಮೇಲೆ ಎಷ್ಟೊಂದು ಅಂದವಾಗಿವೆ! 8 ನಿನ್ನ ಕಾವಲುಗಾರರು ಧ್ವನಿಯನ್ನೆತ್ತುವರು. ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು. ಏಕೆಂದರೆ ಯೆಹೋವ ದೇವರು ಚೀಯೋನನ್ನು ತಿರುಗಿ ತರುವಾಗ, ಅವರು ಅದನ್ನು ತಮ್ಮ ಕಣ್ಣಿನಿಂದಲೇ ಕಾಣುವರು. 9 ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ, ಒಟ್ಟಾಗಿ ಹಾಡಿರಿ. ಏಕೆಂದರೆ ಯೆಹೋವ ದೇವರು ತನ್ನ ಪ್ರಜೆಗಳನ್ನು ಸಂತೈಸಿದ್ದಾರೆ. ಆತನು ಯೆರೂಸಲೇಮನ್ನು ವಿಮೋಚಿಸಿದ್ದಾರೆ. 10 ಯೆಹೋವ ದೇವರು ತಮ್ಮ ಪವಿತ್ರ ಬಾಹುವನ್ನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತೋರಿಸಿಕೊಂಡಿದ್ದಾನೆ ಮತ್ತು ಭೂಮಿಯ ಅಂತ್ಯದವರೆಗೂ ನಮ್ಮ ದೇವರ ರಕ್ಷಣೆಯನ್ನು ಕಾಣುವರು. 11 ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ. ಅವಳ ಮಧ್ಯದಿಂದ ಹೊರಗೆ ಹೋಗಿರಿ. ಯೆಹೋವ ದೇವರ ದೇವಾಲಯದ ಪಾತ್ರೆಗಳನ್ನು ಹೊರುವವರೇ, ನೀವು ಶುದ್ಧರಾಗಿರಿ. 12 ನೀವು ತ್ವರೆಯಾಗಿ ಹೋಗುವುದಿಲ್ಲ, ಓಡಿ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರೇ ನಿಮ್ಮ ಮುಂದೆ ಹೋಗುವರು, ಇಸ್ರಾಯೇಲಿನ ದೇವರು ನಿಮ್ಮ ಹಿಂದೆ ಕಾವಲು ಕಾಯುವರು. ಯೆಹೋವ ದೇವರ ಸೇವಕನ ಶ್ರಮೆ ಮತ್ತು ಮಹಿಮೆ 13 ನನ್ನ ಸೇವಕನು ವಿವೇಕಿಯಾಗಿ ಕಾರ್ಯವನ್ನು ಸಾಧಿಸಿ, ಅವನು ಉನ್ನತನಾಗಿ ಮೇಲೆಕ್ಕೇರಿ ಮಹೋನ್ನತನಾಗಿರುವನು. 14 ಅವನ ಮುಖವು ಮನುಷ್ಯರಿಗಿಂತಲೂ, ಅವನ ಆಕಾರವು ನರಪುತ್ರರಿಗಿಂತಲೂ ಕುರೂಪವಾಗಿರುವುದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ, 15 ಹಾಗೆಯೇ ಅನೇಕ ಜನಾಂಗಗಳನ್ನು ಆತನು ವಿಸ್ಮಯಗೊಳಿಸುವನು. ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು. ಏಕೆಂದರೆ ಅವರಿಗೆ ತಿಳಿಸದಿರುವ ಸಂಗತಿಯನ್ನು ಅವರು ನೋಡುವರು, ಕೇಳದೇ ಇರುವುದನ್ನು ಗ್ರಹಿಸಿಕೊಳ್ಳುವರು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.