ಯೆಶಾಯ 4 - ಕನ್ನಡ ಸಮಕಾಲಿಕ ಅನುವಾದ1 ಆ ದಿವಸದಲ್ಲಿ ಏಳುಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು, “ನಾವು ಸ್ವಂತವಾಗಿ ದುಡಿದು ಉಣ್ಣುವೆವು, ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು, ನಮ್ಮ ನಿಂದೆಯನ್ನು ನೀಗಿಸುವುದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು,” ಎಂದು ಕೇಳಿಕೊಳ್ಳುವರು. ಯೆಹೋವ ದೇವರ ಕೊಂಬೆ 2 ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು. 3 ಹೀಗಿರುವಲ್ಲಿ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಹಾಗೂ ಯೆರೂಸಲೇಮಿನಲ್ಲಿ ವಾಸಿಸುವವರೆಂದೂ ದಾಖಲೆಗೊಂಡ ಪ್ರತಿಯೊಬ್ಬರೂ ಪವಿತ್ರರು ಎಂದು ಕರೆಯಲಾಗುವರು. 4 ಯೆಹೋವ ದೇವರು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಪುತ್ರಿಯರ ಕಲ್ಮಷವನ್ನು ತೊಳೆದು, ಯೆರೂಸಲೇಮಿನ ಮೇಲಿನ ರಕ್ತದ ಕಲೆಗಳನ್ನು ತೆಗೆದುಹಾಕುವರು. 5 ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು. 6 ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ, ಬಿರುಗಾಳಿಗೂ, ಮಳೆಗೂ ಆಶ್ರಯವನ್ನು ಕೊಡುವ ಮಂಟಪವಾಗಿ ಇರುವುದು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.