ಯೆಶಾಯ 35 - ಕನ್ನಡ ಸಮಕಾಲಿಕ ಅನುವಾದವಿಮೋಚನೆಯ ಸಂತೋಷ 1 ಅರಣ್ಯವೂ, ಮರುಭೂಮಿಯೂ ಆನಂದಿಸುವುದು: ಒಣ ನೆಲವು ಹರ್ಷಿಸಿ, ತಾವರೆಯಂತೆ ಕಳಕಳಿಸುವುದು. 2 ಅದು ಸಮೃದ್ಧಿಯಾಗಿ ಅರಳಿ, ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. ಲೆಬನೋನಿನ ಘನತೆಯು ಮತ್ತು ಕರ್ಮೆಲ್, ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. ಅವರು ಯೆಹೋವ ದೇವರ ಮಹಿಮೆಯನ್ನು ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು. 3 ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ. ನಡುಗುವ ಮೊಣಕಾಲುಗಳನ್ನು ದೃಢಪಡಿಸಿರಿ. 4 ಭಯಭ್ರಾಂತ ಹೃದಯವುಳ್ಳವರಿಗೆ ಬಲಗೊಳ್ಳಿರಿ, ಹೆದರಬೇಡಿರಿ. ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವುದಕ್ಕೂ, ದೇವರು ಪ್ರತಿಫಲವನ್ನು ಕೊಡುವುದಕ್ಕೂ ತಾವೇ ಬಂದು ನಿಮ್ಮನ್ನು ರಕ್ಷಿಸುವರು, ಎಂದು ಅವರಿಗೆ ಹೇಳಿರಿ. 5 ಆಗ, ಕುರುಡರ ಕಣ್ಣು ಕಾಣುವುದು. ಕಿವುಡರ ಕಿವಿಗಳು ಕೇಳಿಸುವುವು. 6 ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು. 7 ಒಣ ನೆಲವು ಸರೋವರವಾಗುವುದು, ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗುವುದು. ನರಿಗಳು ವಾಸಿಸುವ ಪ್ರತಿಯೊಂದು ಮಲಗುವ ಸ್ಥಳದಲ್ಲಿ ಹುಲ್ಲು, ಜೊಂಡು, ಆಪು ಹುಲ್ಲುಗಳಿಂದ ತುಂಬಿರುವುದು. 8 ಅಲ್ಲಿ ರಾಜಮಾರ್ಗ ಇರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನು ಅದರ ಮೇಲೆ ಹಾದು ಹೋಗನು. ಆದರೆ ಅದು ದೇವಜನರಿಗಾಗಿ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿ ತಪ್ಪನು. 9 ಸಿಂಹವು ಅಲ್ಲಿ ಇರದು, ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗವು. ಅದು ಅಲ್ಲಿ ಕಾಣುವುದೇ ಇಲ್ಲ. ಆದರೆ ಬಿಡುಗಡೆಯಾದವರೇ ಅಲ್ಲಿ ನಡೆಯುವರು. 10 ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.