Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 34 - ಕನ್ನಡ ಸಮಕಾಲಿಕ ಅನುವಾದ


ರಾಷ್ಟ್ರಗಳ ವಿರುದ್ಧ ತೀರ್ಪು

1 ರಾಷ್ಟ್ರಗಳೇ, ಕೇಳುವುದಕ್ಕೆ ಹತ್ತಿರ ಬನ್ನಿರಿ, ಕಿವಿಗೊಡಿರಿ. ಭೂಮಿಯೂ, ಅದರಲ್ಲಿರುವ ಸಮಸ್ತವೂ; ಲೋಕವೂ, ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ.

2 ಯೆಹೋವ ದೇವರ ಕೋಪವು ಸಕಲ ರಾಷ್ಟ್ರಗಳ ಮೇಲೂ, ಅವುಗಳ ಎಲ್ಲಾ ಸೈನ್ಯಗಳ ಮೇಲೂ ರೋಷಗೊಂಡು, ಅವರನ್ನು ಕೊಲೆಗೆ ಗುರಿಮಾಡಿ, ಸಂಪೂರ್ಣವಾಗಿ ನಾಶಮಾಡಿದ್ದಾನೆ.

3 ಅವರಲ್ಲಿ ಹತರಾದವರು, ಬೀದಿಪಾಲಾಗುವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವುದು. ಅವರ ರಕ್ತ ಪ್ರವಾಹದಿಂದ ಪರ್ವತಗಳು ತೋಯಿಸುವುದು.

4 ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವುದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿ ಎಲೆ ಒಣಗಿ, ಗಿಡದಿಂದ ಬೀಳುವಂತೆಯೂ, ಅಂಜೂರ ಮರದಿಂದ ಸುಕ್ಕುಗಟ್ಟಿದ ಅಂಜೂರ ಹಣ್ಣುಗಳು ಉದುರುವಂತೆ ತಾರಾಮಂಡಲವೆಲ್ಲಾ ಬಾಡಿ ಬೀಳುವದು.

5 ನನ್ನ ಖಡ್ಗವು ಪರಲೋಕದಲ್ಲಿ ರೋಷಪಾನ ಮಾಡುವುದು. ಇಗೋ, ಅದು ಎದೋಮಿನ ಮತ್ತು ನಾನು ಶಪಿಸಿದ ಜನರ ಮೇಲೆಯೂ, ನ್ಯಾಯತೀರಿಸುವುದಕ್ಕಾಗಿ ಕೆಳಗೆ ಇಳಿದು ಬರುವುದು.

6 ಯೆಹೋವ ದೇವರ ಖಡ್ಗವು ರಕ್ತದಲ್ಲಿ ಸ್ನಾನ ಮಾಡಿದೆ. ಅದು ಕುರಿ ಮತ್ತು ಹೋತಗಳ ರಕ್ತದಿಂದಲೂ, ಟಗರುಗಳ ಮೂತ್ರಪಿಂಡದ ಕೊಬ್ಬಿನಿಂದಲೂ ಮುಚ್ಚಲಾಗಿದೆ. ಏಕೆಂದರೆ ಯೆಹೋವ ದೇವರಿಗೆ ಬೊಚ್ರದಲ್ಲಿ ಬಲಿಯು, ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯು ಉಂಟು.

7 ಕಾಡುಕೋಣಗಳೂ ಹೋರಿಗೂಳಿಗಳೂ ಈ ಯಜ್ಞಪಶುಗಳೊಂದಿಗೆ ಬೀಳುವುವು; ನಾಡು ರಕ್ತದಿಂದ ತೊಯ್ದಿರುವುದು; ಅಲ್ಲಿನ ಧೂಳು ಕೊಬ್ಬಿನಿಂದ ಜಿಡ್ಡಾಗಿರುವುದು.

8 ಏಕೆಂದರೆ ಅದು ಯೆಹೋವ ದೇವರು ಮುಯ್ಯಿ ತೀರಿಸುವ ದಿನವಾಗಿದೆ, ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.

9 ಎದೋಮಿನ ಪ್ರವಾಹಗಳು ಇಳಿಜಾರಾಗಿ ಮಾರ್ಪಡುವುವು. ಅದರ ಧೂಳು ಗಂಧಕವಾಗುವುದು, ದೇಶವು ಉರಿಯುವ ಡಾಂಬರಿನಂತೆ ಇರುವುದು.

10 ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರುವುದಿಲ್ಲ. ಅದರ ಹೊಗೆಯು ನಿರಂತರವಾಗಿ ಏಳುತ್ತಿರುವುದು. ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರುವುದು, ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು.

11 ಆದರೆ ಬಕಪಕ್ಷಿಯು ಮತ್ತು ಮುಳ್ಳುಹಂದಿಯು ಅದನ್ನು ಆವರಿಸಿಕೊಳ್ಳುವುವು. ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವುವು. ಗಲಿಬಿಲಿ ಎಂಬ ನೂಲನ್ನು, ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು.

12 ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು. ಆದರೆ ಅಲ್ಲಿ ಯಾರೂ ಇರುವುದಿಲ್ಲ. ಅವಳ ಪ್ರಭುಗಳು ಇಲ್ಲದಂತಾಗುವರು.

13 ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವುವು, ಅದರ ಕೋಟೆಗಳಲ್ಲಿ ಮುಳ್ಳುಪೊದೆಗಳು ಇರುವುವು. ಅದು ನರಿಗಳ ನಿವಾಸವೂ, ಗೂಬೆಗಳಿಗೆ ಸ್ಥಾನವೂ ಆಗುವುದು.

14 ಮರುಭೂಮಿಯ ಕಾಡುಮೃಗಗಳು ತೋಳಗಳೊಂದಿಗೆ ಸಂಧಿಸುವುವು, ಕಾಡುಮೇಕೆಗಳು ಪರಸ್ಪರ ಕರೆಯುತ್ತವೆ. ರಾತ್ರಿ ಮೃಗಗಳು ಸಹ ಅಲ್ಲಿ ಮಲಗುತ್ತವೆ. ತಮಗಾಗಿ ವಿಶ್ರಾಂತಿ ಸ್ಥಳಗಳನ್ನು ಕಂಡುಕೊಳ್ಳುತ್ತವೆ.

15 ಅಲ್ಲಿ ಗೂಬೆಯು ಗೂಡನ್ನು ಮಾಡಿಕೊಂಡು, ಮೊಟ್ಟೆ ಇಟ್ಟು, ಮರಿ ಮಾಡಿ, ಅವುಗಳನ್ನು ತನ್ನ ರೆಕ್ಕೆಗಳ ನೆರಳಿನಲ್ಲಿ ಕಾಪಾಡುವುದು. ಅಲ್ಲಿಯೂ ಸಹ ಹದ್ದುಗಳು ಪ್ರತಿಯೊಂದೂ ಜೊತೆಜೊತೆಯಾಗಿ ಸೇರಿರುತ್ತವೆ.

16 ಯೆಹೋವ ದೇವರ ಗ್ರಂಥದಲ್ಲಿ ನೀವು ಹುಡುಕಿ ಓದಿರಿ, ಇವುಗಳಲ್ಲಿ ಒಂದಾದರೂ ತಪ್ಪದು. ಜೊತೆಯಿಲ್ಲದೆ ಒಂದೂ ಇರುವುದಿಲ್ಲ. ಏಕೆಂದರೆ ನನ್ನ ಬಾಯಿಯೇ ಅದನ್ನು ಆಜ್ಞಾಪಿಸಿತು. ಅವರ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತು.

17 ಅವರೇ ಅವುಗಳಿಗೋಸ್ಕರ ಚೀಟು ಹಾಕಿದ್ದಾರೆ. ಅವರ ಕೈಯೇ ಅದನ್ನು ಗೆರೆ ಎಳೆದು, ಅವರಿಗೆ ಹಂಚಿಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿಕೊಳ್ಳುವುವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವುವು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು