ಯೆಶಾಯ 32 - ಕನ್ನಡ ಸಮಕಾಲಿಕ ಅನುವಾದನೀತಿಯ ರಾಜ್ಯ 1 ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು. 2 ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ, ಬಿರುಗಾಳಿಗೋಸ್ಕರ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿಯ ನೀರಿನ ಕಾಲುವೆಗಳ ಹಾಗೂ, ಬಾಯಾರಿದ ನಾಡಿಗೆ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು. 3 ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು. 4 ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆ ಸ್ವಚ್ಛವಾಗಿ ಮಾತನಾಡುವುದಕ್ಕೆ ಸಿದ್ಧವಾಗಿರುವುದು. 5 ಇನ್ನು ಮೇಲೆ ಮೂರ್ಖನು ಘನವಂತನೆನಿಸಿಕೊಳ್ಳನು. ಮೋಸಗಾರನು ಮಹನೀಯನೆನಿಸಿಕೊಳ್ಳನು. 6 ಏಕೆಂದರೆ ಮೂರ್ಖನು ಮೂರ್ಖವಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾಸಿಸುವಂತೆಯೂ, ಯೆಹೋವ ದೇವರಿಗೆ ವಿರೋಧವಾಗಿ ಸಂಪೂರ್ಣವಾಗಿ ತಪ್ಪಿ ಹೋಗುವವರಂತೆಯೂ, ಹಸಿವೆಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು. 7 ಮೋಸಗಾರನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವನು ಬಡವರನ್ನು ಸುಳ್ಳು ಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು. 8 ಘನವಂತನಾದರೋ, ಘನಕಾರ್ಯಗಳನ್ನು ಕಲ್ಪಿಸುವನು. ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು. ಯೆರೂಸಲೇಮಿನ ಮಹಿಳೆಯರು 9 ನಿಶ್ಚಿಂತೆಯರಾದ ಮಹಿಳೆಯರೇ, ಏಳಿರಿ. ನನ್ನ ಸ್ವರವನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ. 10 ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷಿ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ. 11 ನಿಶ್ಚಿಂತೆಯುಳ್ಳ ಸ್ತ್ರೀಯರೇ, ನೀವು ನಡುಗಿರಿ. ನಿರ್ಭೀತ ಪುತ್ರಿಯರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ, ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. 12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ನಿಮಿತ್ತವೂ ನಿಮ್ಮ ಎದೆ ಬಡಿದುಕೊಳ್ಳಿರಿ. 13 ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ. 14 ಅರಮನೆ ಹಾಳುಬಿದ್ದಿದೆ. ಗಲಭೆಯಪಟ್ಟಣವು ನಿರ್ಜನವಾಗುವುದು, ಪರ್ವತ ಮತ್ತು ಬುರುಜು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ, ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು. 15 ಆದರೆ ದೇವರು ಉನ್ನತಲೋಕದಲ್ಲಿ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು, ಫಲಭರಿತ ಭೂಮಿ ಸಮೃದ್ಧವಾದ ಅರಣ್ಯವಾಗಿ ಮಾರ್ಪಡುವುದು. 16 ನ್ಯಾಯವು ಮರುಭೂಮಿಯಲ್ಲಿ ನೆಲೆಗೊಳ್ಳುವುದು, ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವುದು. 17 ನೀತಿಯ ಕೆಲಸವು ಸಮಾಧಾನವೂ, ನೀತಿಯ ಫಲವು ನಿತ್ಯವಾದ ಶಾಂತಿಯೂ, ಭರವಸೆಯೂ ಆಗಿರುವುದು. 18 ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ, ಭದ್ರವಾದ ಸ್ಥಳಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು. 19 ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗುವುದು. ಪಟ್ಟಣವು ಸಂಪೂರ್ಣವಾಗಿ ನೆಲಸಮವಾಗುವುದು. 20 ನೀರಿರುವ ಎಲ್ಲಾ ಕಡೆಗಳಲ್ಲಿ ಬಿತ್ತನೆ ಮಾಡಿ, ದನಕತ್ತೆಗಳನ್ನು ಮೇಯಲು ಬಿಡುವ ನೀವು ಧನ್ಯರೇ ಸರಿ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.