Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 30 - ಕನ್ನಡ ಸಮಕಾಲಿಕ ಅನುವಾದ


ತಿರುಗಿ ಬೀಳುವವರಿಗೆ ಕಷ್ಟ

1 “ದ್ರೋಹಿಗಳಾದ ಮಕ್ಕಳಿಗೆ ಕಷ್ಟ!” ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಆಲೋಚನೆಯನ್ನು ಮಾಡುತ್ತಾರೆ ಆದರೆ ನನ್ನಿಂದಲ್ಲ. ನನ್ನ ಆತ್ಮ ಪ್ರೇರಿತರಾಗದೆ ಉಪಾಯಗಳನ್ನು ಮಾಡುತ್ತಾರೆ, ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.

2 ಫರೋಹನಲ್ಲಿ ತಾವು ಬಲಗೊಳ್ಳುವ ಆಶ್ರಯವನ್ನು ಈಜಿಪ್ಟಿನ ನೆರಳಿನಲ್ಲಿ ಭರವಸವಿಡಬೇಕೆಂದು ನನ್ನ ಮಾತನ್ನು ಕೇಳದೆ, ಈಜಿಪ್ಟಿಗೆ ಪ್ರಯಾಣವಾಗಿ ಹೊರಟಿದ್ದಾರೆ.

3 ಆದರೆ ಫರೋಹನ ಆಶ್ರಯದಿಂದ ನಿಮಗೆ ನಾಚಿಕೆಯೂ, ಈಜಿಪ್ಟ್ ನೆರಳಿನ ಭರವಸೆಯಿಂದ ನಿಮಗೆ ನಿಂದೆಯೂ ಉಂಟಾಗುವುದು.

4 ಏಕೆಂದರೆ ಅವನ ಪ್ರಧಾನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿಗಳು ಹಾನೇಸಿಗೆ ಬಂದಿದ್ದಾರೆ.

5 ತಮಗೆ ಪ್ರಯೋಜನವಾಗದೆ ಸಹಾಯಕ್ಕೂ, ಪ್ರಯೋಜನಕ್ಕೂ ಅಲ್ಲ. ನಿಂದೆಗೂ, ನಾಚಿಕೆಗೂ ಇರುವ ಜನಕ್ಕೆ ಎಲ್ಲರೂ ನಾಚಿಕೆಪಡುತ್ತಾರೆ.

6 ನೆಗೆವಿನ ಮೃಗಗಳ ವಿಷಯವಾದ ಪ್ರವಾದನೆ: ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿಗಳ ಬೆನ್ನ ಮೇಲೆ ತಮ್ಮ ಬದುಕನ್ನೂ, ಒಂಟೆಗಳ ಮೇಲೆ ತಮ್ಮ ದ್ರವ್ಯಗಳನ್ನು ತಮಗೆ ಪ್ರಯೋಜನವಿಲ್ಲದ ಜನಕ್ಕೆ ತೆಗೆದುಕೊಂಡು ಹೋಗುತ್ತಾರೆ.

7 ಏಕೆಂದರೆ ಈಜಿಪ್ಟಿನವರ ಸಹಾಯವು ವ್ಯರ್ಥವೇ ವ್ಯರ್ಥ. ಆದ್ದರಿಂದ ನಾನು ಅವಳಿಗೆ ಇದನ್ನು ಕುರಿತು ಅವರ ಬಲವು ನಿಂತು ಹೋಗಿದೆ ಎಂದು ನಾನು ಕೂಗಿದ್ದೇನೆ.

8 ಈಗ ಹೋಗಿ ಇದನ್ನು ಅದರ ಮುಂದೆ ಹಲಗೆಯಲ್ಲಿ ಬರೆ. ಅದನ್ನು ಸುರುಳಿಯಲ್ಲಿ ಬರೆಯಿರಿ, ಮುಂದೆ ಬರುವ ನಿತ್ಯಕಾಲಕ್ಕಾಗಿ ಶಾಶ್ವತ ಸಾಕ್ಷಿಯಾಗಿರಲಿ.

9 ಏನೆಂದರೆ ಇವರು ತಿರುಗಿಬೀಳುವ ಜನರೇ. ಸುಳ್ಳಾಡುವ ಮಕ್ಕಳು. ಯೆಹೋವ ದೇವರ ಉಪದೇಶಕ್ಕೆ ಕಿವಿಗೊಡದ ಮಕ್ಕಳೇ.

10 ಅವರು ನೋಡುವವರಿಗೆ, “ನೋಡಬೇಡಿರಿ,” ಎಂದು ಪ್ರವಾದಿಗಳಿಗೆ, “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ, ನಮಗೆ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ. ನಯವಾದವುಗಳನ್ನೇ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.

11 “ನಿಮ್ಮ ದಾರಿಗೆ ಓರೆಯಾಗಿರಿ, ಮಾರ್ಗದಿಂದ ತೊಲಗಿರಿ. ಇಸ್ರಾಯೇಲರ ಪರಿಶುದ್ಧನನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ,” ಎಂದು ಹೇಳುತ್ತಾರೆ.

12 ಆದಕಾರಣ ಇಸ್ರಾಯೇಲರ ಪರಿಶುದ್ಧನು ಹೇಳುವುದೇನೆಂದರೆ, “ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲಾತ್ಕಾರ, ಕುಯುಕ್ತಿಗಳನ್ನು ನಂಬಿ, ಅವುಗಳನ್ನೇ ಆಧಾರ ಮಾಡಿಕೊಂಡದ್ದರಿಂದ

13 ಎತ್ತರವಾದ ಗೋಡೆಯ ಒಂದು ಭಾಗವು ಉಬ್ಬಿಕೊಂಡು ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿ ಬೀಳುವ ಹಾಗೆ ನಿಮ್ಮ ಅಪರಾಧವು ನಿಮಗೆ ಅಪಾಯಕರವಾಗಿರುವುದು.

14 ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲಿ, ಬಾವಿಯಿಂದ ನೀರನ್ನು ತೆಗೆಯುವುದಕ್ಕಾಗಲಿ, ಬೋಕಿಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.”

15 ಏಕೆಂದರೆ ಇಸ್ರಾಯೇಲಿನ ಪರಿಶುದ್ಧನಾದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.

16 ಆದರೆ ನೀವು, ‘ಬೇಡವೇ ಬೇಡ. ಏಕೆಂದರೆ ನಾವು ಕುದುರೆಗಳ ಮೇಲೆ ಓಡುವೆವು,’ ಎಂದುಕೊಂಡಿದ್ದರಿಂದ ನೀವು ಓಡಿಹೋಗುವಿರಿ, ನಾವು ವೇಗವಾಗಿ ಸವಾರಿ ಮಾಡುವೆವು, ಎಂದುಕೊಂಡಿದ್ದರಿಂದ ಆ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.

17 ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು, ಐವರು ಹೆದರಿಸುವುದರಿಂದ ನೀವೆಲ್ಲರೂ ಓಡಿಹೋಗುವಿರಿ, ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”

18 ಹೀಗಿರಲು ಯೆಹೋವ ದೇವರು ನಿಮಗೆ ಕೃಪೆಯನ್ನು ತೋರಿಸಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತವಾಗಿ ಕಾಣಿಸಿಕೊಳ್ಳುವನು. ಏಕೆಂದರೆ ಯೆಹೋವ ದೇವರು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.

19 ಏಕೆಂದರೆ, ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳಬೇಕಾಗಿಲ್ಲ. ನೀವು ಕೂಗಿ ದುಃಖಿಸಿದ ಶಬ್ದವನ್ನು ದೇವರು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವರು. ದೇವರು ನಿಮ್ಮ ಸ್ವರವನ್ನು ಕೇಳಿದ ಕೂಡಲೇ ಸದುತ್ತರವನ್ನು ದಯಪಾಲಿಸುವರು.

20 ಕರ್ತದೇವರು ನಿಮಗೆ ಕಷ್ಟವನ್ನು, ಶ್ರಮೆಯನ್ನು, ಅನ್ನಪಾನಗಳನ್ನಾಗಿ ಕೊಟ್ಟರೂ, ಇನ್ನೂ ನಿಮ್ಮ ಬೋಧಕರು ನಮಗೆ ಮರೆಯಾಗಿ ಇರುವುದಿಲ್ಲ. ಆದರೆ ನಿನ್ನ ಕಣ್ಣುಗಳು ನಿಮ್ಮ ಬೋಧಕರನ್ನು ನೋಡುತ್ತಿರುವುವು.

21 ನೀವು ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಿಕೊಳ್ಳುವಾಗ, “ಇದೇ ಮಾರ್ಗ ಇದರಲ್ಲೇ ನಡೆಯಿರಿ,” ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.

22 ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನೂ, ಎರಕದ ನಿಮ್ಮ ವಿಗ್ರಹಗಳ ಬಂಗಾರದ ಹೊದಿಕೆಯನ್ನೂ ನೀವು ಹೊಲಸ್ಸಾಗಿ ಭಾವಿಸಿ, ಆ ವಿಗ್ರಹಕ್ಕೆ, “ತೊಲಗಿಹೋಗು,” ಎಂದು ಹೇಳಿ, ಅದನ್ನು ಹೊಲೆಯ ಬಟ್ಟೆಯಂತೆ ಬಿಸಾಡಿ ಬಿಡುವಿರಿ.

23 ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸುವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.

24 ಹೊಲಗೆಯ್ಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ, ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು.

25 ಮಹಾ ಸಂಹಾರದ ದಿವಸದಲ್ಲಿ ಗೋಪುರಗಳು ಬೀಳುವಾಗ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ, ಪ್ರತಿಯೊಂದು ಎತ್ತರವಾದ ಗುಡ್ಡದಲ್ಲಿಯೂ ತೊರೆಗಳು ನೀರಿನ ಕಾಲುವೆಗಳೂ ಹರಿಯುತ್ತಿರುವುವು.

26 ಇಷ್ಟೇ ಅಲ್ಲದೆ ಯೆಹೋವ ದೇವರು ತನ್ನ ಜನರ ವ್ರಣವನ್ನು ಕಟ್ಟಿ, ಅವರ ಪೆಟ್ಟಿನ ಗಾಯವನ್ನು ವಾಸಿಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಾಗಿ, ಏಳು ದಿನಗಳ ಬೆಳಕಿನಂತಾಗುವುದು.

27 ಇಗೋ, ಯೆಹೋವ ದೇವರ ನಾಮವು ದೂರದಿಂದ ಬರುತ್ತದೆ. ಆತನ ಕೋಪವು ಉರಿಯುತ್ತದೆ. ಅದರಿಂದೇಳುವ ಹೊಗೆಯು ದಟ್ಟವಾಗಿದೆ. ಆತನ ತುಟಿಗಳು ರೋಷದಿಂದ ತುಂಬಿವೆ. ಆತನ ನಾಲಿಗೆಯು ದಹಿಸುವ ಅಗ್ನಿಯಂತಿದೆ.

28 ಆತನ ಶ್ವಾಸವು ತುಂಬುತ್ತಾ, ಕಂಠದವರೆಗೂ ಏರುವ ತೊರೆಯಂತಿದೆ. ಜನಾಂಗಗಳನ್ನು ಏನೂ ಉಳಿಸದ ಜರಡಿಯಿಂದ ಜಾಲಿಸುವುದಕ್ಕೆ ಬರುತ್ತಾನೆ. ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆಗಳಲ್ಲಿರುವುದು.

29 ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಆದಂತೆ ನಿಮಗೆ ಹಾಡು ಇರುವುದು. ಯೆಹೋವ ದೇವರ ಪರ್ವತವಾಗಿರುವ ಇಸ್ರಾಯೇಲಿನ ಬಂಡೆಯ ಬಳಿಗೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವುದು.

30 ಆಗ ಯೆಹೋವ ದೇವರು ತನ್ನ ಗಂಭೀರವಾದ ಧ್ವನಿಯನ್ನು ಕೇಳ ಮಾಡಿ, ತೀವ್ರ ಕೋಪ, ದಹಿಸುವ ಅಗ್ನಿ ಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ, ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿಸುವನು.

31 ಯೆಹೋವ ದೇವರು ದಂಡದಿಂದ ದಂಡಿಸುವಾಗ, ಅಸ್ಸೀರಿಯವು ಆತನ ಧ್ವನಿಯಿಂದಲೇ ಮುರಿದು ಹೋಗುವುದು.

32 ಯೆಹೋವ ದೇವರು ಅದರ ಮೇಲೆ ತರುವಂಥ ನೇಮಿಸಿದ ದಂಡವು ಹಾದು ಹೋಗುವಲ್ಲೆಲ್ಲಾ ಅದು ದಮ್ಮಡಿ, ಕಿನ್ನರಿಗಳ ಸಂಗಡ ಇರುವುದು. ಆತನು ಅವರೊಂದಿಗೆ ಯುದ್ಧಗಳಲ್ಲಿ ಹೋರಾಡುತ್ತಾ ಕೈಬೀಸಿ ಯುದ್ಧಮಾಡುವನು.

33 ಪೂರ್ವದಿಂದ ತೋಫೆತ್ ಸಿದ್ಧವಾಗಿದೆ. ಹೌದು, ಅದು ಆಳವಾಗಿಯೂ, ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಚಿತೆಯೊಳಗೆ ಬೆಂಕಿಯೂ, ಬಹಳ ಕಟ್ಟಿಗೆಯೂ ತುಂಬಿರುವುದು. ಯೆಹೋವ ದೇವರ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವುದು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು