Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 21 - ಕನ್ನಡ ಸಮಕಾಲಿಕ ಅನುವಾದ


ಬಾಬಿಲೋನಿನ ವಿರುದ್ಧವಾದ ಪ್ರವಾದನೆ

1 ಸಮುದ್ರತೀರದ ಮರುಭೂಮಿಯ ವಿಷಯವಾದ ಪ್ರವಾದನೆ: ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿ ಹೋಗುವಂತೆ ಆಕ್ರಮಣಕಾರರು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತಾರೆ.

2 ಘೋರ ದರ್ಶನವು ನನಗೆ ತಿಳಿಯಬಂದಿದೆ: ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.

3 ಆದ್ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ. ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ. ಕಣ್ಣು ಕುರುಡಾಗುವಷ್ಟು ಭ್ರಾಂತನಾಗಿದ್ದೇನೆ.

4 ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ಗಾಬರಿಗೊಂಡಿದೆ. ನಡುಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನಾ ಬಯಸಿದ ಸಂಜೆಯೇ ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.

5 ಔತಣ ಸಿದ್ಧವಾಗಿದೆ. ಬುರುಜಿನ ಮೇಲೆ ಕಾವಲಿರು. ಉಣ್ಣು, ಕುಡಿ, ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿರಿ.

6 ಕರ್ತರು ನನಗೆ ಹೇಳಿದ್ದೇನೆಂದರೆ, “ಹೋಗು, ಕಾವಲುಗಾರರನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.

7 ಅವನು ಜೋಡಿ ಜೋಡಿಯಾಗಿ ಬರುವ ರಥ ಸವಾರರ ಸಾಲನ್ನು ಕತ್ತೆಗಳ, ಒಂಟೆಗಳ, ರಥ ಸಾಲುಗಳನ್ನು ನೋಡಿದರೆ, ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ.”

8 ಬಳಿಕ ಅವನು ಸಿಂಹದಂತೆ ಕೂಗಿ ಹೀಗೆ ಹೇಳಿದನು, “ನನ್ನ ಒಡೆಯನೇ, ನಾನು ಹಗಲೆಲ್ಲಾ ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ. ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.

9 ಇಗೋ, ಎರಡು ಕುದುರೆಗಳನ್ನು ಹೊಂದಿರುವ ರಥದಲ್ಲಿ ಒಬ್ಬ ವ್ಯಕ್ತಿ ಸವಾರಿ ಮಾಡಿ ಬರುತ್ತಿದ್ದಾನೆ ಬಾಬಿಲೋನ್ ಬಿದ್ದುಹೋಯಿತು, ಬಾಬಿಲೋನ್ ಬಿದ್ದುಹೋಯಿತು! ಅದರ ಕೆತ್ತಿದ ದೇವತೆಗಳ ವಿಗ್ರಹಗಳೆಲ್ಲ ಮುರಿದು ನೆಲಸಮವಾಗಿವೆ.”

10 ಕಣದಲ್ಲಿ ತುಳಿತಕ್ಕೆ ಈಡಾದ ನನ್ನ ಜನರೇ ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.


ಎದೋಮಿಗೆ ವಿರೋಧವಾದ ಪ್ರವಾದನೆ

11 ದೂಮ ವಿಷಯವಾದ ಪ್ರವಾದನೆ: ಸೇಯೀರಿನಿಂದ ನನ್ನನ್ನು ಯಾರೋ ಹೀಗೆ ಕರೆಯುತ್ತಿದ್ದಾರೆ, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು?”

12 ಕಾವಲುಗಾರನು ಹೀಗೆ ಉತ್ತರಿಸಿದನು, “ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ. ವಿಚಾರಿಸಬೇಕಾದರೆ ವಿಚಾರಿಸಿರಿ, ತಿರುಗಿ ಬನ್ನಿರಿ.”


ಅರೇಬಿಯದ ವಿರೋಧವಾದ ಪ್ರವಾದನೆ

13 ಅರೇಬಿಯದ ವಿಷಯವಾದ ಪ್ರವಾದನೆ: ಓ ದೇದಾನ್ಯರ ವ್ಯಾಪಾರಿಗಳ ಗುಂಪಿನವರೇ ಅರೇಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ.

14 ತೇಮಾ ದೇಶದ ನಿವಾಸಿಗಳೇ, ಬಾಯಾರಿದವರಿಗೆ ನೀರನ್ನು ತರುತ್ತಾರೆ. ಓಡಿ ಹೋಗುವವರನ್ನು ತಮ್ಮ ರೊಟ್ಟಿಯಿಂದ ನಿವಾರಿಸುತ್ತಾರೆ.

15 ಏಕೆಂದರೆ ಹಿರಿದ ಖಡ್ಗ, ಬಾಗಿದ ಬಿಲ್ಲು, ಕಠಿಣ ಯುದ್ಧ ಇವುಗಳಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರಷ್ಟೆ.

16 ಏಕೆಂದರೆ ಕರ್ತರು ನನಗೆ ಹೀಗೆ ಹೇಳುತ್ತಾರೆ: “ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವುದು.

17 ಬಿಲ್ಲುಗಾರರಲ್ಲಿ ಕೆಲವರೂ, ಕೇದಾರಿನ ಬಲಿಷ್ಠರಲ್ಲಿ ಕೆಲವರು ಮಾತ್ರ ಉಳಿಯುವರು,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ನುಡಿದಿದ್ದಾರೆ.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು