ಯೆಶಾಯ 18 - ಕನ್ನಡ ಸಮಕಾಲಿಕ ಅನುವಾದಕೂಷಿಗೆ ವಿರೋಧವಾದ ಪ್ರವಾದನೆಗಳು 1 ಕೂಷ್ ನದಿಯ ಆಚೆಯಲ್ಲಿರುವ ಸೀಮೆ, ರೆಕ್ಕೆಗಳನ್ನು ಪಟಪಟನೆ ಬಡಿಯುವ ನಾಡಿಗೆ ಕಷ್ಟ! 2 ಇದು ಆಪಿನ ದೋಣಿಗಳಲ್ಲಿ ಸಮುದ್ರ ಮಾರ್ಗದಿಂದ ರಾಯಭಾರಿಗಳನ್ನು ನೀರಿನ ಮೇಲೆ ಕಳುಹಿಸುತ್ತದೆ. ಶೀಘ್ರವಾಗಿ ಬರುತ್ತಿರುವ ದೂತರೇ, ಎತ್ತರವಾದವರೂ, ನುಣುಪಾದ ಚರ್ಮವುಳ್ಳ ಜನರ ಬಳಿಗೂ, ಸರ್ವರಿಗೂ ಭಯಪ್ರಧರಾಗಿರುವ ಜನರ ಬಳಿಗೂ, ವಿಚಿತ್ರ ಭಾಷೆಯಿರುವ ಹಾಗೂ ನದಿಗಳಿಂದ ವಿಂಗಡವಾಗಿರುವ ಆಕ್ರಮಣಕಾರಿ ರಾಷ್ಟ್ರದವರ ಬಳಿಗೂ ಹೋಗಿರಿ. 3 ಜಗದ ಸಕಲ ನಿವಾಸಿಗಳೇ! ಭೂಮಿಯಲ್ಲಿ ವಾಸಿಸುವವರೇ! ಬೆಟ್ಟಗಳ ಮೇಲೆ ಧ್ವಜವನ್ನು ಎತ್ತುವಾಗ ಅದನ್ನು ನೀವು ನೋಡುವಿರಿ, ತುತೂರಿಯನ್ನು ಊದುವಾಗ ಕೇಳಿಸಿಕೊಳ್ಳುವಿರಿ. 4 ಯೆಹೋವ ದೇವರು ನನಗೆ ಹೀಗೆ ಹೇಳಿದರು, “ನಾನು ನನ್ನ ವಿಶ್ರಾಂತಿಯನ್ನು ತೆಗೆದುಕೊಳ್ಳುವೆನು. ಬಿಸಿಹಗಲಿನ ಸೂರ್ಯನಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದಂತೆಯೂ ನಾನು ನನ್ನ ನಿವಾಸಸ್ಥಾನದಲ್ಲಿ ಸುಮ್ಮನೆ ನೋಡುತ್ತಿರುವೆನು.” 5 ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ, ಚಿಗುರುಗಳನ್ನು ಕಡಿದುಹಾಕುವರು. 6 ಅವುಗಳೆಲ್ಲ ಬೆಟ್ಟದ ಹದ್ದುಗಳಿಗೂ, ಭೂಮಿಯ ಮೃಗಗಳಿಗೂ ಆಹಾರವಾಗುವುವು. ಅದು ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿಯೂ, ಕಾಡುಮೃಗಗಳಿಗೆ ಚಳಿಗಾಲದಲ್ಲಿಯೂ ಆಹಾರವಾಗುವುದು. 7 ಆಗ ಎತ್ತರವಾದ ಹಾಗೂ ನುಣುಪು ಚರ್ಮವುಳ್ಳ ಜನರಿಂದಲೂ, ಸರ್ವರಿಗೂ ಭಯಪ್ರಧರಾದ ಜನರಿಂದಲೂ, ವಿಚಿತ್ರ ಭಾಷೆಯಿಂದ ಹಾಗೂ ನದಿಗಳಿಂದ ವಿಂಗಡವಾಗಿರುವ ಆಕ್ರಮಣಕಾರಿ ಜನರಿಂದಲೂ ಸರ್ವಶಕ್ತರಾದ ಯೆಹೋವ ದೇವರಿಗೆ ಕಾಣಿಕೆಗಳು ತರಲಾಗುವುದು. ಹೌದು, ಸೇನಾಧೀಶ್ವರ ಯೆಹೋವ ದೇವರ ಹೆಸರುಳ್ಳ ಚೀಯೋನ್ ಪರ್ವತಕ್ಕೆ ಕಾಣಿಕೆಗಳು ತರಲಾಗುವುದು. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.