Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 15 - ಕನ್ನಡ ಸಮಕಾಲಿಕ ಅನುವಾದ


ಮೋವಾಬಿಗೆ ವಿರುದ್ಧವಾದ ಪ್ರವಾದನೆ

1 ಮೋವಾಬಿನ ವಿಷಯವಾದ ಪ್ರವಾದನೆ: ಆ ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು.

2 ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. ಪ್ರತಿಯೊಬ್ಬರ ತಲೆಯು ಬೋಳು, ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ.

3 ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು. ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ, ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕದಿಂದ ಗೋಳಾಡುವನು.

4 ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಅವರ ಸ್ವರವು ಯಹಚ ಊರಿನವರೆಗೂ ಕೇಳಿಸುತ್ತದೆ. ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು. ಅವರ ಹೃದಯಗಳು ತತ್ತರಿಸುತ್ತವೆ.

5 ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ. ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು. ಲೂಹೀತ್ ದಿಣ್ಣೆಯನ್ನು ಅಳುತ್ತಾ ಹತ್ತುವರು. ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ದನಿಗೈಯುವರು.

6 ನಿಮ್ರೀಮ್ ಹೊಳೆಯು ಬತ್ತಿಹೋಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು ಅಲ್ಲಿ ಹಸಿರಾದದ್ದು ಇಲ್ಲ.

7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.

8 ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ. ಅದರ ಕಿರಿಚಾಟ ಎಗ್ಲಯಿಮ್ ಹಾಗೂ ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ.

9 ದೀಮೋನ್ ನದಿಯ ನೀರೆಲ್ಲಾ ರಕ್ತವಾಯಿತು. ದೀಮೋನಿನ ಮೇಲೆ ಹೆಚ್ಚಾದ ಹಾನಿಯನ್ನು ತರುವೆನು. ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು