ಯೆಶಾಯ 12 - ಕನ್ನಡ ಸಮಕಾಲಿಕ ಅನುವಾದಸ್ತೋತ್ರ ಗೀತೆಗಳು 1 ಆ ದಿನದಲ್ಲಿ ನೀನು ಹೇಳುವುದೇನೆಂದರೆ: “ಯೆಹೋವ ದೇವರೇ, ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುವೆನು; ನೀವು ನನ್ನ ಮೇಲೆ ಕೋಪಗೊಂಡಿದ್ದರೂ, ಆ ನಿಮ್ಮ ಕೋಪವು ಪರಿಹಾರವಾಗಿ ನನ್ನನ್ನು ಸಂತೈಸುತ್ತೀರಲ್ಲವೆ? 2 ನಿಜವಾಗಿಯೂ ದೇವರೇ ನನಗೆ ರಕ್ಷಣೆಯು, ನಾನು ಭರವಸವಿಡುವೆನು ಮತ್ತು ಭಯಪಡೆನು. ಕರ್ತರಾದ ಯೆಹೋವ ದೇವರೇ ನನ್ನ ಬಲವೂ ನನ್ನ ಕೀರ್ತನೆಯೂ, ಅವರೇ ನನಗೆ ರಕ್ಷಣೆಯೂ ಆಗಿದ್ದಾರೆ.” 3 ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ. 4 ಆ ದಿನದಲ್ಲಿ ನೀವು ಹೀಗೆ ಹೇಳುವಿರಿ, “ಯೆಹೋವ ದೇವರನ್ನು ಕೊಂಡಾಡಿರಿ. ಅವರ ಹೆಸರನ್ನೆತ್ತಿ ಜನರ ಮಧ್ಯದಲ್ಲಿ ಅವರ ಕ್ರಿಯೆಗಳನ್ನು ಪ್ರಕಟಿಸಿರಿ. ಅವರ ನಾಮವನ್ನು ಉನ್ನತೋನ್ನತವೆಂದು ಎತ್ತಿ ಹೇಳಿರಿ. 5 ಯೆಹೋವ ದೇವರಿಗೆ ಹಾಡಿರಿ. ಏಕೆಂದರೆ, ಅವರು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾರೆ. ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ. 6 ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ. ಏಕೆಂದರೆ, ಇಸ್ರಾಯೇಲಿನ ಪರಿಶುದ್ಧರು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವರಾಗಿದ್ದಾರೆ.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.